ಬುಧವಾರ ಸಂಜೆ ಬೆಂಗಳೂರಿನಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ಕಾವೇರಿ'ಯ ಕಂಪೌಂಡ್ ಮೇಲೆ ಬೃಹತ್ ಮರವೊಂದು ಉರುಳಿಬಿದ್ದಿದ್ದು, ನಗರದಾದ್ಯಂತ ಹಲವೆಡೆ ಮರಗಳು ಧರೆಗುರುಳಿವೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬುಧವಾರ ಸಂಜೆ ವರುಣ ಅಕ್ಷರಶಃ ಸಿಲಿಕಾನ್ ಸಿಟಿ ನಲುಗಿಹೋಗಿದೆ. ಕೇವಲ ಒಂದು ಗಂಟೆ ಕಾಲ ಸುರಿದ ಬಿರುಗಾಳಿ ಸಹಿತ ಮಳೆಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ಕಾವೇರಿ' ಕೂಡ ಶೇಕ್‌ ಆಗಿದೆ. ಭಾರಿ ಗಾಳಿಗೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಸಿಎಂ ನಿವಾಸದ ಕಂಪೌಂಡ್ ಜಖಂಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಎಂ ನಿವಾಸವಿರುವ ಕುಮಾರಕೃಪಾ ರಸ್ತೆಯ ಉದ್ದಕ್ಕೂ ಸಾಲು ಸಾಲು ಮರಗಳು ನೆಲಕ್ಕೆ ಉರುಳಿವೆ. ಇದರಿಂದಾಗಿ ಭದ್ರತೆಯ ದೃಷ್ಟಿಯಿಂದ ಸಿಎಂ ಮನೆ ಮುಂಭಾಗದ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರಗಳನ್ನು ತೆರವುಗೊಳಿಸಲು ಬಿಬಿಎಂಪಿ ಮತ್ತು ಜಿಬಿಎ ಸಿಬ್ಬಂದಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮಳೆಯ ಆರ್ಭಟ ಎಷ್ಟು ಜೋರಿತ್ತೆಂದರೆ, ಪಕ್ಕದಲ್ಲೇ ಇರುವ ಗಾಲ್ಫ್ ಕೋರ್ಸ್‌ನ ಬೃಹತ್ ನೆಟ್ ಮೇಲೆ ಮರ ಬಿದ್ದಿದೆ. ಮರದ ಭಾರಕ್ಕೆ ಗಾಲ್ಫ್ ಕೋರ್ಸ್‌ನ ನೆಟ್ ಈಗ ರಸ್ತೆಗೆ ವಾಲಿಕೊಂಡಿದ್ದು, ಸಂಚಾರಕ್ಕೆ ಮತ್ತಷ್ಟು ಅಡ್ಡಿಯುಂಟು ಮಾಡಿದೆ.

ನಿನ್ನೆ ಸುರಿದ ಮಳೆಯ ಪ್ರಮಾಣ

ನಗರದಾದ್ಯಂತ ಸರಾಸರಿ 80 ಮಿಮೀ ಮಳೆ ದಾಖಲಾಗಿದ್ದು, ಗಂಟೆಗೆ 75 ಕಿಮೀ ವೇಗದ ಬಲವಾದ ಗಾಳಿ ಬಿಸಿದೆ ಇದರ ಪರಿಣಾಮ ತಾಪಮಾನ ಬರೋಬ್ಬರಿ 10 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದೆ. ಹೆಚ್‌ಎಎಲ್‌ನಲ್ಲಿ 24.7 ಮಿಮೀ ಮಳೆಯಾದರೆ, ಏರ್‌ಪೋರ್ಟ್ ಭಾಗದಲ್ಲಿ ಕೇವಲ 0.1 ಮಿಮೀ ಮಳೆಯಾಗಿದೆ.

ಯೆಲ್ಲೋ ಅಲರ್ಟ್ ಟು ಆರೆಂಜ್ ಅಲರ್ಟ್!

ನಗರದಲ್ಲಿ ಮಳೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಹವಾಮಾನ ಇಲಾಖೆ (IMD) ಅಲರ್ಟ್ ಆಗಿತ್ತು. ಮೊದಲು ಯೆಲ್ಲೋ ಅಲರ್ಟ್ ಘೋಷಿಸಿದ್ದ ಇಲಾಖೆ, ಮಳೆಯ ರೌದ್ರಾವತಾರ ಕಂಡು ತಕ್ಷಣವೇ ಅದನ್ನು 'ಆರೆಂಜ್ ಅಲರ್ಟ್' ಗೆ ಬದಲಿಸಿ ಜನರಿಗೆ ಎಚ್ಚರಿಕೆ ನೀಡಿತ್ತು. ಒಟ್ಟಿನಲ್ಲಿ, ಸುಡು ಬಿಸಿಲಿನಿಂದ ಬೆಂದಿದ್ದ ಬೆಂಗಳೂರಿಗೆ ಈ ಮಳೆ ತಂಪನ್ನೇನೋ ತಂದಿದೆ, ಆದರೆ ಸೃಷ್ಟಿಸಿರುವ ಅವಾಂತರಗಳು ಮಾತ್ರ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿವೆ.