ಬೆಂಗಳೂರಿನ 'ನಮ್ಮ-112' ಪೊಲೀಸ್ ಸಹಾಯವಾಣಿಗಾಗಿ ಕೃತಕ ಬುದ್ಧಿಮತ್ತೆ ಆಧಾರಿತ ಬಹುಭಾಷಾ ವ್ಯವಸ್ಥೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದ್ದಾರೆ. ಈ ಹೊಸ ವ್ಯವಸ್ಥೆಯು ಕನ್ನಡ, ಇಂಗ್ಲಿಷ್, ಹಿಂದಿ ಜೊತೆಗೆ ತಮಿಳು, ತೆಲುಗು, ಮಲಯಾಳಂ ಸೇರಿದಂತೆ 10 ಹೊಸ ಭಾಷೆಗಳನ್ನು ಬೆಂಬಲಿಸುತ್ತದೆ. ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ಅನ್ಯ ಭಾಷಿಕರು ಭಾಷೆಯ ತೊಡಕಿಲ್ಲದೆ ಸುಲಭವಾಗಿ ಪೊಲೀಸರ ಸಹಾಯ ಪಡೆಯಬಹುದಾಗಿದೆ.

ಬೆಂಗಳೂರು: ಸಂಕಷ್ಟದಲ್ಲಿ ಪೊಲೀಸರ ನೆರವಿಗೆ ಭಾಷೆ ತೊಡಕು ನಿವಾರಣೆಗೆ ರಾಜಧಾನಿ ಪೊಲೀಸರು ಕೃತಕ ಬುದ್ಧಿಮತ್ತೆ ಬಳಸಿ ರೂಪಿಸಿರುವ ನಮ್ಮ-112 ಸಹಾಯವಾಣಿ ಬಹುಭಾಷಾ ಆಯ್ಕೆ ವ್ಯವಸ್ಥೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಚಾಲನೆ ನೀಡಿದ್ದಾರೆ. ಬುಧವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ-112) ಬಹುಭಾಷ ಆಯ್ಕೆಗೆ ಸಚಿವರು ಹಸಿರು ನಿಶಾನೆ ತೋರಿದರು.

Add Asianetnews Kannada as a Preferred SourcegooglePreferred

ತುರ್ತು ಸಂದರ್ಭಗಳಲ್ಲಿ ಪೊಲೀಸರ ಸಹಾಯ ಪಡೆಯಲು ಅನ್ಯ ಭಾಷಿಕರು ಎದುರಿಸುತ್ತಿದ್ದ ಭಾಷೆ ಸಮಸ್ಯೆ ನಿವಾರಣೆಯಾಗಲಿದೆ. ಈ ವಿನೂತನ ವ್ಯವಸ್ಥೆಗೆ ಹಲವು ಜನರಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.

ದೇಶದಲ್ಲಿಯೇ ಮೊದಲ ಬಾರಿಗೆ ಈ ರೀತಿ ಎಐ ಬಳಕೆ

ದೇಶದಲ್ಲಿಯೇ ಮೊದಲ ಬಾರಿಗೆ ಪೊಲೀಸ್‌ ಸಹಾಯವಾಣಿಯಲ್ಲಿ ಎಐ ತಂತ್ರಜ್ಞಾನ ಬಳಸಿ ಹತ್ತು ಭಾಷೆಗಳ ಸೇರ್ಪಡೆ ಮಾಡಲಾಗಿದೆ. ನಮ್ಮ 112 ಸಹಾಯವಾಣಿಯಲ್ಲಿ ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯಲ್ಲಿ ಸೇವೆ ಸಿಗುತ್ತಿತ್ತು. ಇದೀಗ ಮಣಿಪುರಿ, ಕಾಶ್ಮೀರಿ, ತಮಿಳು, ತೆಲುಗು, ಮಲಯಾಳಂ, ಮರಾಠಿ ಹಾಗೂ ಅಸ್ಸಾಮಿ ಸೇರಿಸಲಾಗಿದೆ. ಜತೆಗೆ, ನೇಪಾಳಿ, ಸ್ಪ್ಯಾನಿಷ್‌, ಫ್ರೆಂಚ್‌, ಅರೇಬಿಕ್‌ ಭಾಷೆ ಸಹ ಅಳವಡಿಸಲಾಗಿದೆ ಎಂದು ವಿವರಿಸಿದರು.

Scroll to load tweet…

ಇನ್ನು ಮುಂದೆ ಪೊಲೀಸ್ ನಿಯಂತ್ರಣ ಕೊಠಡಿಗೆ ಅನ್ಯಭಾಷಿಕರು ಕರೆ ಮಾಡಿದರೆ ಪ್ರತಿಯಾಗಿ ಅವರು ಆಯ್ಕೆ ಮಾಡುವ ಭಾಷೆಯಲ್ಲಿ ಸಹಾಯವಾಣಿ ಸೇವೆ ಲಭ್ಯವಾಗಲಿದೆ. ಯಾವುದೇ ಭಾಷಿಕರು ತುರ್ತು ಸಂದರ್ಭದಲ್ಲಿ112ಗೆ ಕರೆ ಮಾಡಿ ಅವರಿಗೆ ಗೊತ್ತಿರುವ ಭಾಷೆಯಲ್ಲಿಯೇ ಮಾಹಿತಿ/ದೂರು ನೀಡಬಹುದು. ಈ ಭಾಷೆಯನ್ನು ‘ಎಐ’ ಸ್ವಯಂಚಾಲಿತವಾಗಿ ತರ್ಜುಮೆ ಮಾಡಲಿದ್ದು, ಅದೇ ಭಾಷೆಯಲ್ಲಿವಾಪಸ್‌ ಉತ್ತರ ನೀಡಲಿದೆ. ಇದರಿಂದ ಸಂಕಷ್ಟದಲ್ಲಿಸಿಲುಕಿದವರಿಗೆ ದೂರು ನೀಡಲು ಭಾಷೆಯ ತೊಡಕು ನಿವಾರಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು ಒಂದೂವರೆ ಕೋಟಿ ಜನಸಂಖ್ಯೆ ಇರುವ ನಗರದಲ್ಲಿ ಹತ್ತಾರು ಭಾಷೆ ಮಾತನಾಡುವ ನಾಗರಿಕರಿದ್ದಾರೆ. ಅವರಿಗೆ ತುರ್ತು ಸಂದರ್ಭದಲ್ಲಿ ಪೊಲೀಸ್‌ ಸೇವೆ ಲಭ್ಯವಾಗಬೇಕಾದರೆ ಕೆಲವೊಮ್ಮೆ ಭಾಷೆ ಸಮಸ್ಯೆ ಉಂಟಾಗಲಿದೆ. ಈ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯ ಖಾಸಗಿ ಕಂಪನಿಗಳ ಜತೆ ಒಡಂಬಡಿಕೆ ಮಾಡಿಕೊಂಡು ವಿದೇಶಿ ಸೇರಿದಂತೆ ಹತ್ತು ಭಾಷೆಗಳನ್ನು ಸಹಾಯವಾಣಿಯಲ್ಲಿ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಭಾಷೆಗಳು ಸೇರ್ಪಡೆಯಾಗಲಿವೆ ಎಂದು ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್‌, ಜಂಟಿ ಆಯುಕ್ತರಾದ ರಮೇಶ್‌, ವಂಶಿಕೃಷ್ಣ, ಕಾರ್ತಿಕ್ ರೆಡ್ಡಿ ಹಾಗೂ ಕುಲದೀಪ್ ಕುಮಾರ್ ಜೈನ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಐಪಿಎಲ್ ಭದ್ರತೆಗೆ ಗೃಹ ಸಚಿವರ ಮೆಚ್ಚುಗೆ

ಐಪಿಎಲ್ ಪಂದ್ಯಾವಳಿ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಿರ್ವಹಿಸಿದ ಪೊಲೀಸರ ಭದ್ರತಾ ವ್ಯವಸ್ಥೆಗೆ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದರು. ಐಪಿಎಲ್‌ ಪಂದ್ಯಗಳಿಗೆ ಮುಂಜಾಗ್ರತೆ ಕ್ರಮವಾಗಿ ಪೊಲೀಸರು ಬಂದೋಬಸ್ತ್ ಮಾಡಿದರು. ಇದರಿಂದ ಯಾವುದೇ ರೀತಿಯ ಭದ್ರತಾ ಲೋಪಗಳು ಸಂಭವಿಸಿಲ್ಲ ಎಂದು ಸಚಿವರು ಶ್ಲಾಘಿಸಿದರು. ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಣದಲ್ಲಿ ಐಪಿಎಲ್ ವಿಜೇತ ಆರ್‌ಸಿಬಿ ತಂಡದ ಅಭಿನಂದನಾ ಸಮಾರಂಭದ ವೇಳೆ ಕಾಲ್ತುಳಿತ ಸಂಭವಿಸಿ 11 ಅಭಿಮಾನಿಗಳು ಬಲಿಯಾಗಿದ್ದರು. ಈ ದುರಂತದ ಛಾಯೆಯಲ್ಲೇ ಪ್ರಸಕ್ತ ಋತುವಿನ ಐಪಿಎಲ್ ಪಂದ್ಯಗಳು ಆರಂಭವಾಗಿದ್ದವು. ಇನ್ನು ಪಂದ್ಯ ಆಯೋಜನೆಗೆ ಸರ್ಕಾರ ಕೆಲ ಮಾರ್ಗಸೂಚಿ ನೀಡಿತ್ತು.