ಕರ್ಫ್ಯೂ ಸಡಿಲಿಸಿದ್ರೂ ಹೊರಬರಲು ಜನರ ನಿರಾಸಕ್ತಿ!

ಕೊರೋನಾ ಭೀತಿ: ಮನೆಯಿಂದ ಆಚೆ ಬರಲು ಸಾರ್ವಜನಿಕರು ಹಿಂದೇಟು| ವಾಹನ, ಜನ ಸಂಚಾರ ವಿರಳ| ಸೂಪರ್‌ ಮಾರ್ಕೆಟ್‌ಗಳು, ಅಂಗಡಿಗಳು ಬಹುತೇಕ ಖಾಲಿ ಖಾಲಿ| ವಾಣಿಜ್ಯ ಚಟುವಟಿಕೆಗಳು ಕುಸಿತ

Bengaluru Out Of Coronavirus Fear People Stays at Home even after curfew relaxation

ಬೆಂಗಳೂರು(ಜೂ.01): ಹೆಚ್ಚಿನ ವ್ಯಾಪಾರ-ವಹಿವಾಟು ನಡೆಯಬೇಕೆಂಬ ಉದ್ದೇಶದಿಂದ ಭಾನುವಾರ ಇದ್ದ ಕಫä್ರ್ಯ ಹಿಂಪಡೆದು, ರಾತ್ರಿ ಒಂಬತ್ತು ಗಂಟೆ ನಂತರ ಲಾಕ್‌ಡೌನ್‌ ಜಾರಿ ಮಾಡಿದ್ದರೂ ಸಹ ರಾಜಧಾನಿಯಲ್ಲಿ ವಾಹನ ಸಂಚಾರ, ವಾಣಿಜ್ಯ ಚಟುವಟಿಕೆ, ಜನ ಸಂಚಾರ ಸೇರಿದಂತೆ ಎಲ್ಲ ರೀತಿಯ ಚಟುವಟಿಕೆಗಳು ಮಂಕಾಗಿದ್ದವು. ಲಾಕ್‌ಡೌನ್‌ ಸಡಿಲಿಕೆ ಮಾಡಿದ್ದರೂ ಸಹ ಜನರ ಮನಸಿನಲ್ಲಿ ಕೊರೋನಾ ಸೋಂಕಿನ ಭೀತಿಯಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರ ಬರಲಿಲ್ಲ.

ಸಾಮಾನ್ಯವಾಗಿ ರಜೆ ದಿನವಾದ ಭಾನುವಾರ ನಗರದಲ್ಲಿ ವಾಹನ ದಟ್ಟಣೆ ಹಾಗೂ ಜನ ಸಂಚಾರ ಹೆಚ್ಚಾಗಿರುತ್ತದೆ. ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ, ಇಂದಿರಾನಗರ, ಕೋರಮಂಗಲ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಬಿರುಸಿನಿಂದ ಕೂಡಿರುತ್ತವೆ. ಮಾರುಕಟ್ಟೆಗಳಲ್ಲಿ ಜನ ದಟ್ಟಣೆ ಹೆಚ್ಚಿರುತ್ತದೆ. ಆದರೆ ಈ ಎಲ್ಲೆಡೆ ಬೆಳಗ್ಗೆಯಿಂದಲೂ ಎಲ್ಲ ರೀತಿಯ ಚಟುವಟಿಕೆಗಳು ನೀರಸವಾಗಿದ್ದವು. ನಗರದ ಹೃದಯಭಾಗ ಮೆಜೆಸ್ಟಿಕ್‌ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ಜನ ಸಂಚಾರವೂ ವಿರಳವಾಗಿತ್ತು.

ಬಸ್‌ಗಳಿಗೆ ಪ್ರಯಾಣಿಕರ ಕೊರತೆ:

ಭಾನುವಾರ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸುವ ನಿರೀಕ್ಷೆ ಇತ್ತಾದರೂ ಅದು ಹುಸಿಯಾಯಿತು. ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಹೆಚ್ಚಿನ ಪ್ರಯಾಣಿಕರ ನಿರೀಕ್ಷೆಯಲ್ಲಿದ್ದ ಸಾರಿಗೆ ನಿಗಮಗಳಿಗೆ ಭ್ರಮ ನಿರಸನವಾಯಿತು. ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರಿಗಿಂತ ಬಸ್‌ಗಳ ಸಂಖ್ಯೆಯೇ ಹೆಚ್ಚಿತ್ತು.

ಹೊರಜಿಲ್ಲೆಗಳಿಗೆ ತೆರಳಿದ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪ್ರಯಾಣಿಕರ ಕೊರತೆ ಉಂಟಾಯಿತು. ಪ್ರತಿ ಬಸ್‌ಗೆ 30 ಮಂದಿ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ ಒಂದೊಂದು ಬಸ್‌ನಲ್ಲಿ ಐದು, ಏಳು, ಹತ್ತು ಮಂದಿ ಪ್ರಯಾಣಿಕರು ಸಂಚರಿಸಿದರು. ಬಹುತೇಕ ಬಸ್‌ಗಳು ಪ್ರಯಾಣಿಕರು ಇಲ್ಲದೆ ಖಾಲಿ ಇದ್ದವು. ಬಿಎಂಟಿಸಿ ಬಸ್‌ಗಳಿಗೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಇರಲಿಲ್ಲ. ಕೆಲ ಮಾರ್ಗಗಳಲ್ಲಿ ಇಬ್ಬರು, ಮೂವರು ಪ್ರಯಾಣಿಕರು ಸಂಚರಿಸಿದರು. ಮೆಜೆಸ್ಟಿಕ್‌ನಲ್ಲಿರುವ ಈ ಎರಡೂ ಬಸ್‌ ನಿಲ್ದಾಣಗಳಲ್ಲಿ ಮಧ್ಯಾಹ್ನದ ಹೊತ್ತಿಗೆ ಪ್ರಯಾಣಿಕರ ಸಂಖ್ಯೆ ಸಂಪೂರ್ಣ ಕುಸಿದು ಬಂದ್‌ ವಾತಾವರಣ ನಿರ್ಮಾಣವಾಗಿತ್ತು.

ಮೈಸೂರು ರಸ್ತೆಯ ಸ್ಯಾಟಲೆಟ್‌ ಬಸ್‌ ನಿಲ್ದಾಣ, ಶಾಂತಿನಗರ, ವಿಜಯನಗರ, ಯಶವಂತಪುರ, ಕೋರಮಂಗಲ ಸೇರಿದಂತೆ ಬಿಎಂಟಿಸಿಯ ಪ್ರಮುಖ ಬಸ್‌ ನಿಲ್ದಾಣಗಳಲ್ಲಿಯೂ ಪ್ರಯಾಣಿಕರು ಇಲ್ಲದೆ ಬಿಕೋ ಎನ್ನುತ್ತಿತ್ತು.

ಗ್ರಾಹಕರ ಕೊರತೆ:

ಇನ್ನು ಗ್ರಾಹಕರಿಂದ ಗಿಜಿಗುಡುತ್ತಿದ್ದ ಅಂಗಡಿ-ಮುಂಗಟ್ಟುಗಳಲ್ಲಿ ಬೆಳಗ್ಗೆಯಿಂದಲೂ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ವ್ಯಾಪಾರ-ವಹಿವಾಟು ನಿರೀಕ್ಷಿತ ಪ್ರಮಾಣದಲ್ಲಿ ಇರಲಿಲ್ಲ. ಇನ್ನು ಮೋರ್‌, ರಿಲೆಯನ್ಸ್‌ ಫ್ರೆಶ್‌, ವಿಶಾಲ್‌ ಮಾರ್ಟ್‌ ಇತರೆ ಸೂಪರ್‌ ಮಾರ್ಕೆಟ್‌ಗಳಲ್ಲಿ ತಕ್ಕಮಟ್ಟಿಗೆ ಗ್ರಾಹಕರ ಇದ್ದರು.

ಆಟೋ, ಟ್ಯಾಕ್ಸಿಗಳೂ ಖಾಲಿ:

ಬಸ್‌ಗಳಿಗೆ ಪ್ರಯಾಣಿಕರ ಕೊರತೆ ಉಂಟಾಗಿದ್ದು ಒಂದೆಡೆಯಾದರೆ, ಆಟೋ ರಿಕ್ಷಾಗಳು, ಆ್ಯಪ್‌ ಆಧಾರಿತ ಟ್ಯಾಕ್ಸಿಗಳಿಗೂ ಗ್ರಾಹಕರ ಕೊರತೆ ಎದುರಾಗಿತ್ತು. ಮೆಜೆಸ್ಟಿಕ್‌ ಸೇರಿದಂತೆ ಸುತ್ತಮುತ್ತಲ ಪ್ರಮುಖ ರಸ್ತೆಗಳಲ್ಲಿ ಪ್ರಯಾಣಿಕರು ಬಾರದ ಪರಿಣಾಮ ಸಾಲುಗಟ್ಟಿಆಟೋಗಳನ್ನು ನಿಲ್ಲಿಸಲಾಗಿತ್ತು. ಆ್ಯಪ್‌ ಆಧಾರಿತ ಟ್ಯಾಕ್ಸಿ ಚಾಲಕರು ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿಕೊಂಡು ನಿದ್ರೆಗೆ ಜಾರಿದ್ದರು. ಕೆಲವರು ಪರಿಸ್ಥಿತಿ ಅರಿತು ಮನೆಗಳತ್ತ ಮುಖ ಮಾಡಿದ್ದರು. ಇನ್ನು ಖಾಸಗಿ ಬಸ್‌ ಮಾಲೀಕರು ಬಸ್‌ಗಳನ್ನು ರಸ್ತೆಗೆ ಇಳಿಸಲಿಲ್ಲ. ಪ್ರವಾಸಿ ವಾಹನಗಳು ಸಹ ಸಂಚಾರ ಸ್ಥಗಿತಗೊಳಿಸಿದ್ದವು.

ಮಾಂಸದಂಗಡಿ ರಶ್‌

ಪ್ರತಿ ಭಾನುವಾರದಂತೆ ಈ ವಾರವೂ ನಗರದ ಮಾಂಸದಂಗಡಿಗಳ ಎದುರು ಜನರ ದೊಡ್ಡ ದಂಡೇ ನೆರೆದಿತ್ತು. ಮುಂಜಾನೆ ಆರು ಗಂಟೆಯಿಂದಲೇ ಬ್ಯಾಗ್‌ ಹಿಡಿದು ಕೋಳಿ, ಕುರಿ, ಮೇಕೆ, ಹಂದಿ, ಮೀನು ಮಾಂಸ ಖರೀದಿಗೆ ಸಾಲುಗಟ್ಟಿನಿಂತಿದ್ದರು. ಸಾಮಾಜಿಕ ಅಂತರ ಮಾಯವಾಗಿತ್ತು.

ಮದ್ಯಕ್ಕೆ ತಗ್ಗದ ಬೇಡಿಕೆ

ಭಾನುವಾರ ನಗರದ ಮದ್ಯದಂಗಡಿಗಳ ಬಳಿ ಗ್ರಾಹಕರ ಸಂಖ್ಯೆ ತುಸು ಹೆಚ್ಚಿತ್ತು. ಸಾಮಾನ್ಯ ಜನರಿಗಿಂತ ಐಟಿ-ಬಿಟಿ ಉದ್ಯೋಗಿಗಳು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ಖರೀದಿಸಿ ತೆರಳುತ್ತಿದ್ದರು. ಕೆಲ ಮದ್ಯದಂಗಡಿಗಳ ಬಳಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಭಾನುವಾರ ಸಾರ್ವತ್ರಿಕ ರಜೆ ಇದ್ದ ಕಾರಣ ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ಮೂಡ್‌ನಲ್ಲಿದ್ದರು. ನಗರದಲ್ಲಿ ಜನ ಸಂಚಾರ ವಿರಳವಾಗಿದ್ದರೂ ಮದ್ಯದಂಗಡಿಗಳಿಗೆ ಮಾತ್ರ ಗ್ರಾಹಕರ ಕೊರತೆಯಾಗಲಿಲ್ಲ.

ಕೆಎಸ್‌ಆರ್‌ಟಿಸಿ ಬಸ್‌ಗಳು ಖಾಲಿ ಖಾಲಿ

ರಾಜ್ಯದಲ್ಲಿ ಬಸ್‌ ಸೇವೆ ಪುನರಾರಂಭದ ಹನ್ನೆರಡನೇ ದಿನವಾದ ಭಾನುವಾರ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಅತಿ ಕಡಿಮೆಯಾಗಿದೆ.

ಲಾಕ್‌ಡೌನ್‌ ಸಡಿಲಿಕೆ ಬಳಿಕ ಮೇ 19ರಿಂದ ಕೆಎಸ್‌ಆರ್‌ಟಿಸಿಯು ರಾಜ್ಯದೊಳಗೆ ಬಸ್‌ ಸೇವೆ ಆರಂಭಿಸಿತ್ತು. ಮೊದಲ ದಿನ 1,606 ಬಸ್‌ ಕಾರ್ಯಾಚರಣೆ ಮಾಡಿದ್ದು, 53,506 ಮಂದಿ ಪ್ರಯಾಣಿಸಿದ್ದರು. ಇದಾದ ಬಳಿಕ ದಿನದಿಂದ ದಿನಕ್ಕೆ ಬಸ್‌ಗಳ ಹಾಗೂ ಪ್ರಯಾಣಿಕರ ಸಂಖ್ಯೆನಿಧಾನಕ್ಕೆ ಏರಿಕೆಯಾಗುತ್ತಿತ್ತು. ಮೇ 27ರಂದು ಪ್ರಯಾಣಿಕರ ಸಂಖ್ಯೆ 1.08 ಲಕ್ಷಕ್ಕೆ ಮುಟ್ಟಿತ್ತು. ಮೇ 30ರಂದು ಅತಿ ಹೆಚ್ಚು ಅಂದರೆ 1.18 ಲಕ್ಷ ಪ್ರಯಾಣಿಕರು 3,545 ಬಸ್‌ಗಳಲ್ಲಿ ಪ್ರಯಾಣಿಸಿದ್ದರು.

ಆದರೆ, ಭಾನುವಾರ ನಿಗಮ ಕೇವಲ 1,724 ಬಸ್‌ ಕಾರ್ಯಾಚರಣೆ ಮಾಡಿದ್ದು, ಕೇವಲ 48 ಸಾವಿರ ಮಂದಿ ಮಾತ್ರ ಪ್ರಯಾಣಿಸಿದ್ದಾರೆ. ಈ ಮೂಲಕ ಒಂದೇ ದಿನದಲ್ಲಿ ಪ್ರಯಾಣಿಕರ ಸಂಖ್ಯೆ ಶೇ.60ರಷ್ಟುಕುಸಿತವಾಗಿದೆ. ಬೆಂಗಳೂರಿನಿಂದ ತೆರಳುವ ಬಸ್‌ಗಳಿಗೂ ಪ್ರಯಾಣಿಕರ ಕೊರತೆ ಉಂಟಾಗಿದ್ದು, 512 ಬಸ್‌ಗಳಲ್ಲಿ 7,986 ಮಂದಿ ರಾಜ್ಯದ ವಿವಿಧ ಸ್ಥಳಗಳಿಗೆ ತೆರಳಿದ್ದಾರೆ.

Latest Videos
Follow Us:
Download App:
  • android
  • ios