ಬೆಂಗಳೂರಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಬಳಕೆ ಹೆಚ್ಚು. ಆದರೆ ಇದೇ ಸಂದರ್ಭವನ್ನು ಬಳಸಿಕೊಳ್ಳುವ ದಂಧೆಕೋರರು ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ. ಇದೀಗ ಓಲಾ ಆಟೋ ಚಾಲಕರು ಹೊಸ ದಂಧೆ ಆರಂಭಿಸಿದ್ದಾರೆ. ಬುಕ್ ಮಾಡಿದ ರೈಡನ್ನು ಪ್ರಯಾಣಿಕರ ಮುಂದೆ ಕ್ಯಾನ್ಸಲ್ ಮಾಡಿ ಬಳಿಕ 100 ರೂಪಾಯಿ, 200 ರೂಪಾಯಿ ಹೆಚ್ಚುವರಿ ಹಣ ಪೀಕುತ್ತಿರುವ ಘಟನೆ ಬೆಳಕಿಗೆ ಬಂದಿದೆ. 

ಬೆಂಗಳೂರು(ಜು.27) ಬೆಂಗಳೂರು ಸಿಲಿಕಾನ್ ವ್ಯಾಲಿ ಎಂದೇ ಹೆಸರಾಗಿದೆ. ಸ್ಟಾರ್ಟ್ ಅಪ್ ತವರು, ಐಟಿ ಬಿಟಿ ಸೇರಿದಂತೆ ಹಲವು ಉದ್ಯಮಗಳು ಬೆಂಗಳೂರಿನ ಹಿರಿಮೆ ಹೆಚ್ಚಿಸಿದೆ. ಆದರೆ ಇದೇ ಬೆಂಗಳೂರಲ್ಲಿ ದಂಧೆಗಳು ಹೆಚ್ಚು. ಅಮಾಯಕರಿಂದ ಹಣ ಪೀಕುವ ಘಟನೆಗಳು ವರದಿಯಾಗುತ್ತಲೇ ಇದೆ. ರೈಲು ನಿಲ್ದಾಣ, ಮೆಟ್ರೋ, ಬಸ್ ನಿಲ್ದಾಣಗಳಲ್ಲಿ ಇಳಿದು ಆಟೋ ಮೂಲಕ ಸಾಗುವುದು ಸವಾಲೇ ಸರಿ. ಕಾರಣ ಮೀಟರ್ ಹಾಕಲ್ಲ, ದುಪ್ಪಟ್ಟು ಹಣ ಪಡೆಯುತ್ತಾರೆ ಅನ್ನೋ ಆರೋಪಗಳು ಹೊಸದೇನಲ್ಲ. ಹೀಗಾಗಿ ಬಹುತೇಕರು ಆ್ಯಪ್ ಆಧಾರಿತ ಟ್ಯಾಕ್ಸಿಗಳನ್ನು ಅವಲಂಬಿತರಾಗಿದ್ದಾರೆ. ಆದರೆ ಈ ಟ್ಯಾಕ್ಸಿ ಸೇವೆಗಳು ದುಬಾರಿ ಚಾರ್ಜ್ ಮಾಡುತ್ತಿದೆ. ಇದೀಗ ಹೊಸ ದಂಧೆ ಬೆಂಗಳೂರಿನಲ್ಲಿ ಶುರುವಾಗಿದೆ. ಓಲಾ ಆಟೋ ಚಾಲಕರು ಬುಕ್ ಮಾಡಿದ ರೈಡನ್ನು ಕ್ಯಾನ್ಸಲ್ ಮಾಡಿ, ಪ್ರಯಾಣಿಕರಿಂದ 100 ರೂಪಾಯಿ, 200 ರೂಪಾಯಿ ಹೆಚ್ಚುವರಿ ಹಣ ಪೀಕುತ್ತಿರುವ ಘಟನೆ ಬಯಲಾಗಿದೆ.

ಬೆಂಗಳೂರಿನ ಖಾಸಗಿ ಕಂಪನಿಯ ಹಿರಿಯ ಎಂಜಿನೀಯರ್ ಪ್ರಶಾಂತ್ ಯಾದವ್ ತಮಗಾದ ಅನುಭವ ಹೇಳಿಕೊಂಡಿದ್ದಾರೆ.ಈ ಕುರಿತು ಟ್ವಿಟರ್ ಮೂಲಕ ಓಲಾ ಆಟೋ ಚಾಲಕರ ಹೊಸ ದಂಧೆ ಕುರಿತು ಮಾಹಿತಿ ನೀಡಿದ್ದಾರೆ. ನಾನು ಬೆಂಗಳೂರು ಸಿಟಿ ನಿಲ್ದಾಣದಲ್ಲಿ ಇಳಿದು ಓಲಾ ಬುಕ್ ಮಾಡಿದ್ದೆ. ಬುಕ್ ಮಾಡಿದ ಓಲಾ ಆಟೋ ನನ್ನಿಂದ ಕೆಲ ದೂರದಲ್ಲಿ ಬಂತು ನಿಂತಿತು. ಬಳಿಕ ಓಲಾ ಆಟೋ ಚಾಲಕ, ನನ್ನನ್ನು ಹತ್ತಿರಕ್ಕೆ ಕರೆದಿದ್ದಾನೆ. ನಾನು ಓಲಾ ಆಟೋ ಹತ್ತಲು ಹೋಗುತ್ತಿದ್ದಂತೆ ನನ್ನ ರೈಡ್ ಕ್ಯಾನ್ಸಲ್ ಮಾಡಿದ್ದಾನೆ. ಬಳಿಕ ಓಲಾ ಆಟೋದಲ್ಲಿ ಎಷ್ಟು ಹಣ ತೋರಿಸುತ್ತಿತ್ತು, ಅದಕ್ಕಿಂತ 100 ರೂಪಾಯಿ ಹೆಚ್ಚುವರಿ ಹಣ ನೀಡಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾನೆ.ಬೆಂಗಳೂರಿನ ಎಲ್ಲಾ ಟೆಕ್ಕಿಗಳು ಹಣ ರಾಶಿಯಲ್ಲೇ ಮಲಗುತ್ತಾರೆ ಎಂದುಕೊಂಡಿದ್ದಾರೆ. ಹೀಗಾದರೆ ಮಧ್ಯಮ ವರ್ಗದ ಜನ ಬೆಂಗಳೂರಲ್ಲಿ ಬದುಕುವುದು ಹೇಗೆ? ಎಂದು ಪ್ರಶಾಂತ್ ಯಾದವ್ ಟ್ವಿಟರ್ ಮೂಲಕ ಪ್ರಶ್ನಿಸಿದ್ದಾರೆ.

ಪ್ರಶಾಂತ್ ಯಾದವ್ ಈ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಬೆನ್ನಲ್ಲೇ ಹಲವು ಬೆಂಗಳೂರಿಗರು ತಮಗಾದ ಅನುಭವನ್ನು ಕಮೆಂಟ್ ಮಾಡಿದ್ದಾರೆ. ಇದು ಬೆಂಗಳೂರಿನಲ್ಲಿ ನಡೆಯುತ್ತಿರುವ ದಂಧೆ ಎಂದು ಕಮೆಂಟ್ ಮಾಡಿದ್ದಾರೆ. ಓಲಾ ಮಾತ್ರವಲ್ಲ, ಆಟೋ ಚಾಲಕರು ಮೀಟರ್ ಹಾಕದೆ ಬಾಯಿಗೆ ಬಂದ ಚಾರ್ಜ್ ಹಾಕುತ್ತಾರೆ. ಅನಿವಾರ್ಯತೆಯಿಂದ ನಾವು ಮರು ಮಾತನಾಡದೇ ಹಣಪಾವತಿಸಬೇಕಾಗುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತೊರ್ವ ಬೆಂಗಳೂರಿಗ ಆಟೋ ಚಾಲಕರ ದಂಧೆ ಕುರಿತು ಕೆಲ ಮಾಹಿತಿ ನೀಡಿದ್ದಾನೆ. ನಾನು ಕೇವಲ 500 ಮೀಟರ್ ದೂರ ಪ್ರಯಾಣಕ್ಕೆ 100 ರೂಪಾಯಿ ನೀಡಿದ್ದೇನೆ. ಮುಂಬೈನಲ್ಲಿ ಟ್ಯಾಕ್ಸಿ ಮೂಲಕ 100 ರೂಪಾಯಿಗೆ ಸರಿಸುಮಾರು 9 ಕಿಲೋಮೀಟರ್ ಪ್ರಯಾಣ ಮಾಡಬಹುದು. ಆದರೆ ಬೆಂಗಳೂರಲ್ಲಿ ಹಾಗಿಲ್ಲ ಎಂದು ಕಮೆಂಟ್ ಮಾಡಿದ್ದಾನೆ.

ಬೆಂಗಳೂರಿನಲ್ಲಿ ಆಟೋ ಚಾಲಕರು ಹೆಚ್ಚುವರಿ ಹಣ ಪಡೆಯುತಿದ್ದಾರೆ ಅನ್ನೋ ಆರೋಪಗಳು, ದೂರುಗಳು ಇಂದು ನಿನ್ನೆಯದಲ್ಲ. ಬೆಂಗಳೂರಿನಲ್ಲಿ ಆಟೋ ಮೂಲಕ ಪ್ರಯಾಣಿಸುವ ಮಧ್ಯಮ ವರ್ಗದ ಜನರು ಪ್ರತಿ ನಿತ್ಯ ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲ ಘಟನೆಗಳು ಮಾತ್ರ ಬೆಳಕಿಗೆ ಬರುತ್ತಿದೆ.