ದಯಾಮರಣ ಕೋರಿ ರಾಷ್ಟ್ರಪತಿಗೆ ಸ್ವತಃ ಪೊಲೀಸರಿಂದಲೇ ಪತ್ರ ರವಾನೆಯಾಗಿರುವುದು ವೈರಲ್ ಆಗಿದೆ. ವಿಧಾನಸೌಧ ಠಾಣೆಯ ಡಿಸಿಪಿ ವಿರುದ್ಧ ಇದರಲ್ಲಿ ಕಿರುಕುಳ ಆರೋಪ ಮಾಡಲಾಗಿದೆ. ಅನಾಮಧೇಯ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಬೆಂಗಳೂರು (ಡಿ.17): ನಗರ ಪೊಲೀಸ್‌ ವಿಭಾಗದಲ್ಲಿ ಮತ್ತೊಬ್ಬ ಡಿಸಿಪಿ ವಿರುದ್ಧ ಕೆಳ ಹಂತದ ಅಧಿಕಾರಿ, ಸಿಬ್ಬಂದಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ದಯಾ ಮರಣ ಕೋರಿ ರಾಷ್ಟ್ರಪತಿಗೆ ಅನಾಮಧೇಯ ಪತ್ರ ಬರೆದಿದ್ದಾರೆ. ದಯಾ ಮರಣ ಕೋರಿ ಬರೆದಿರುವ ಈ ಅನಾಮಧೇಯ ಪತ್ರದಲ್ಲಿ ವಿಧಾನಸೌಧ ಭದ್ರತೆ ವಿಭಾಗದ ಡಿಸಿಪಿ ಅಶೋಕ ರಾಮಪ್ಪ ಜುಂಜರವಾಡ ವಿರುದ್ಧ ವಿಧಾನಸೌಧದ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಮಾನಸಿಕ ಕಿರುಕುಳ ಹಾಗೂ ಆಡಳಿತಾತ್ಮಕ ಹಿಂಸೆಯ ಆರೋಪ ಮಾಡಿದ್ದಾರೆ. ಇದೀಗ ಆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಡಿಸಿಪಿ ಅಶೋಕ ರಾಮಪ್ಪ ಮಾನವೀಯತೆ ಇಲ್ಲದ ಅಧಿಕಾರಿ. ಕೆಳಹಂತದ ಅಧಿಕಾರಿ ಹಾಗೂ ಸಿಬ್ಬಂದಿಗೆ ಅನಾವಶ್ಯಕವಾಗಿ ಕಿರುಕುಳ ನೀಡುವುದು, ತಪ್ಪಿಲ್ಲದಿದ್ದರೂ ಶಿಸ್ತು ಕ್ರಮ, ತಮ್ಮ ಮೂಗಿನ ನೇರಕ್ಕೆ ನಡೆಯದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ರಾತ್ರೋರಾತ್ರಿ ವರ್ಗ, ಅಧಿಕಾರ ದುರ್ಬಳಕೆ ಮಾಡಿ ಸಿಬ್ಬಂದಿಯನ್ನು ಶಿಕ್ಷಿಸುತ್ತಿದ್ದಾರೆ. 

ಸಿಬ್ಬಂದಿ ಜಾತಿ ತಿಳಿದು ಅವರು ಎಸ್ಸಿ-ಎಸ್ಟಿಸಮುದಾಯಕ್ಕೆ ಸೇರಿದ್ದರೆ ಅವರನ್ನು ಅಸ್ಪೃಷ್ಯರಂತೆ ನೋಡುತ್ತಾರೆ. ಅಷ್ಟೇ ಅಲ್ಲದೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಕೌಟುಂಬಿಕ ಸಮಸ್ಯೆಗಳ ಬಗ್ಗೆ ಹೇಳಿದರೂ ಅಮಾನವೀಯವಾಗಿ ನಡೆದುಕೊಳ್ಳುತ್ತಾರೆ ಎಂದು ಅಳಲು ತೋಡಿಕೊಳ್ಳಲಾಗಿದೆ.

ನಮ್ಮ ವಿಭಾಗದ ಸಿಬ್ಬಂದಿ ಹೆಂಡತಿಗೆ ಹೆರಿಗೆ ಸಮಯದಲ್ಲಿ ಮಗು ಸತ್ತು ಹೋಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಪತ್ನಿ ಜತೆಯಿದ್ದ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಬರಲೇಬೇಕು ಎಂದು ಆದೇಶಿಸಿದ್ದರು. ಇನ್ನು ಇತ್ತೀಚೆಗೆ ಮೃತರಾದ ಇನ್‌ಸ್ಪೆಕ್ಟರ್‌ ಧನಂಜಯ ಅವರಿಗೂ ಡಿಸಿಪಿ ಅಶೋಕ ಸಾಕಷ್ಟುತೊಂದರೆ ನೀಡಿದ್ದಾರೆ. ಕೆಲ ತಿಂಗಳ ಹಿಂದೆ ಡಿಸಿಪಿ ಕಾರಿನ ಮಾಜಿ ಚಾಲಕ ಡಿಸಿಪಿ ವಿರುದ್ಧ ದೂರು ನೀಡಿದ್ದರೂ ಕ್ರಮವಾಗಿಲ್ಲ. ಕಾರು ಚಾಲಕರನ್ನು ಅವರ ಮನೆಯ ಆಳಿನಂತೆ ನಡೆಸಿಕೊಂಡಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

Udupi: ಜನಸ್ನೇಹಿ ಪೊಲೀಸ್ ಇನ್ಸ್ ಪೆಕ್ಟರ್‌ ಸತೀಶ್‌ಗೆ ರಾಷ್ಟ್ರಪತಿ ಪದಕ

ವಿಧಾನಸೌಧ ಮೇಲೆ ಅನಧಿಕೃತ ಡ್ರೋನ್‌ ಹಾರಾಟ ಮುಚ್ಚಿಡಲು ಹೇಳಿದ್ದರು: ಕೆಲ ದಿನಗಳ ಹಿಂದೆ ವಿಧಾನಸೌಧದ ಕಟ್ಟಡದ ಮೇಲೆ ಅನಧಿಕೃತವಾಗಿ ಡ್ರೋನ್‌ ಹಾರಾಟವಾಗಿತ್ತು. ಈ ಬಗ್ಗೆ ಸಿಬ್ಬಂದಿ ಡಿಸಿಪಿ ಗಮನಕ್ಕೆ ತಂದಾಗ ಇದನ್ನು ಇಲ್ಲಿಗೆ ಮುಚ್ಚಬೇಕು. ಮಾಧ್ಯಮಕ್ಕೆ ವಿಚಾರ ಗೊತ್ತಾದರೆ, ನಿಮ್ಮನ್ನು ಸಸ್ಪೆಂಡ್‌ ಮಾಡುವುದಾಗಿ ಬೆದರಿಸಿದ್ದರು. ಇವರ ಕಿರುಕುಳದಿಂದ ಅಧಿಕಾರಿ ಹಾಗೂ ಸಿಬ್ಬಂದಿ ಬೇಸತ್ತಿದ್ದೇವೆ.

Bengaluru: ಜನರಿಂದ ಹಣ ಸುಲಿಗೆ ಮತ್ತಿಬ್ಬರು ಪೊಲೀಸರ ಮೇಲೆ ಆರೋಪ

ಮುಂದೆ ನಮಗೇನಾದರೂ ತೊಂದರೆಯಾದರೆ ಡಿಸಿಪಿ ಅಶೋಕ ರಾಮಪ್ಪನೇ ಕಾರಣ. ಇದನ್ನು ಮೂಗರ್ಜಿ ಎಂದು ನಿರ್ಲಕ್ಷ್ಯಿಸಬೇಡಿ. ಪತ್ರದಲ್ಲಿ ನಮ್ಮ ಹೆಸರು ಬರೆದರೆ ನಮ್ಮನ್ನು ಅಮಾನತು ಮಾಡುತ್ತಾರೆ. ಇದರಿಂದ ನಮ್ಮ ಕುಟುಂಬಗಳು ಬೀದಿಗೆ ಬೀಳುತ್ತವೆ. ಶಿಸ್ತಿನ ಹೆಸರಿನಲ್ಲಿ ಗುಲಾಮರಂತೆ ಬದುಕುವುದಕ್ಕಿಂತ ಸ್ವಾಭಿಮಾನದಿಂದ ದಯಾ ಮರಣ ಕೋರಿ ಪತ್ರ ಬರೆದಿದ್ದೇವೆ ಎಂದು ಅನಾಮಧೇಯ ಪತ್ರದಲ್ಲಿ ಉಲ್ಲೇಖಿಸಲಾಗಿದೆ.