ಬೆಂಗಳೂರಿನಲ್ಲಿ ಉಲ್ಫಾ ಮತ್ತು ನಕ್ಸಲೈಟ್ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಮಹಿಳೆಯನ್ನು ಗುಜರಾತ್ ಎಟಿಎಸ್ ಮತ್ತು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ಶಾಮಾ ಪರ್ವೀನ್ ಎಂಬಾಕೆಯನ್ನು ಬಂಧಿಸಲಾಗಿದ್ದು, 

ಬೆಂಗಳೂರು (ಜು.29) ಗುಜರಾತ್ ಎಟಿಎಸ್ (ಆಂಟಿ-ಟೆರರಿಸ್ಟ್ ಸ್ಕ್ವಾಡ್) ಮತ್ತು ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಸಂಘಟನೆಯಾದ ಉಲ್ಫಾ (ULFA) ಮತ್ತು ನಕ್ಸಲೈಟ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಮಹಿಳೆಯನ್ನು ಬಂಧಿಸಲಾಗಿದೆ.

ಬಂಧಿತ ಮಹಿಳೆಯನ್ನು ಶಾಮಾ ಪರ್ವೀನ್ (30 ವರ್ಷ) ಎಂದು ಗುರುತಿಸಲಾಗಿದ್ದು, ಇವರು ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರರೊಂದಿಗೆ ಸಂಪರ್ಕದಲ್ಲಿದ್ದವರು ಎಂದು ಆರೋಪಿಸಲಾಗಿದೆ.

ಶಂಕಿತ ಮಹಿಳೆ ಬೆಂಗಳೂರಿಗೆ ನುಸುಳಿದ್ದು ಹೇಗೆ?

ಶಾಮಾ ಪರ್ವೀನ್, ಮೂಲತಃ ಜಾರ್ಖಂಡ್‌ನವರಾಗಿದ್ದು, ಕಳೆದ ಐದು ವರ್ಷಗಳಿಂದ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಮಾ ಪಾಳ್ಯ 10ನೇ ಕ್ರಾಸ್‌ನಲ್ಲಿ ವಾಸವಾಗಿದ್ದರು. ಶಂಕಿತ ಮಹಿಳೆಯ ಬಗ್ಗೆ ಖಚಿತ ಮಾಹಿತಿ ಪಡೆದ ಗುಜರಾತ್ ಎಟಿಎಸ್ ಅಧಿಕಾರಿಗಳು ಇಂದು (ಜುಲೈ 29, 2025) ಬೆಳಿಗ್ಗೆ 9:30ರ ಸುಮಾರಿಗೆ ದಾಳಿ ನಡೆಸಿ ವಶಕ್ಕೆ ಪಡೆದರು.

ಜಾರ್ಖಂಡ್‌ನ ಉಲ್ಫಾ ಕೇಸ್‌ಗೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ. ಬಂಧನದ ಕೆಲವೇ ಕ್ಷಣಗಳಲ್ಲಿ ಶಾಮಾ ಪರ್ವೀನ್‌ರನ್ನು ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶ ವಿಶ್ವನಾಥ್ ಅವರ ಮುಂದೆ ವಿಚಾರಣೆ ನಡೆದಿದ್ದು, ಗುಜರಾತ್ ಪೊಲೀಸರಿಗೆ ಟ್ರಾನ್ಸಿಟ್ ವಾರೆಂಟ್ ಮಂಜೂರು ಮಾಡಲಾಗಿದೆ. ಇದರೊಂದಿಗೆ, ಶಂಕಿತ ಮಹಿಳೆಯನ್ನು ಗುಜರಾತ್‌ಗೆ ಕರೆದೊಯ್ಯಲು ಎಟಿಎಸ್ ತಂಡಕ್ಕೆ ಅನುಮತಿ ದೊರೆತಿದೆ. ಪ್ರಸ್ತುತ, ಗುಜರಾತ್ ಎಟಿಎಸ್ ತಂಡವು ಶಾಮಾ ಪರ್ವೀನ್‌ರನ್ನು ಗುಜರಾತ್‌ಗೆ ಕರೆದೊಯ್ಯುವ ಪ್ರಕ್ರಿಯೆಯಲ್ಲಿದೆ. ಈ ಕೇಸ್‌ಗೆ ಸಂಬಂಧಿಸಿದಂತೆ ಮುಂದಿನ ತನಿಖೆ ನಡೆಯಲಿದೆ.