ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಡಿಕೆ ಶಿವಕುಮಾರ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಕಲಾವಿದರಿಗೆ ಆಹ್ವಾನ ನೀಡದ ಕಾರಣ ಕಲಾವಿದರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ನಟ ಟೆನ್ನಿಸ್ ಕೃಷ್ಣ ಕೂಡ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಡಿಸಿಎಂ ಡಿಕೆ ಶಿವಕುಮಾರ ಅವರ 'ನಟ್ಟು ಬೋಲ್ಟ್ ಟೈಟ್ ಮಾಡ್ತೇವೆ' ಎಂಬ ವಿವಾದಾತ್ಮಕ ಹೇಳಿಕೆ ಇದೀಗ ತಾರಕಕ್ಕೇರಿದೆ. ಡಿಕೆ ಶಿವಕುಮಾರ ಹೇಳಿಕೆ ವಿರುದ್ಧ ಇಡೀ ಚಿತ್ರರಂಗ ತಿರುಗಿಬಿದ್ದಿದೆ. ಕಾರ್ಯಕ್ರಮ ಎಲ್ಲರಿಗೂ ಆಹ್ವಾನಿಸಲಾಗಿತ್ತು ಆದರೂ ಬಂದಿಲ್ಲ ಎಂದು ಆರೋಪಿಸಲಾಗಿತ್ತು. ಆದರೆ ಇದೀಗ ಒಬ್ಬೊಬ್ಬ ಕಲಾವಿದರೂ ದನಿ ಎತ್ತುತ್ತಿದ್ದಾರೆ. ನಮಗೆ ಯಾವುದೇ ಆಹ್ವಾನ ನೀಡಿಲ್ಲ, ಕನಿಷ್ಟ ಪಕ್ಷ ಪಾಸ್‌ಬುಕ್ ಕೂಡ ನೀಡಿಲ್ಲ. ಕಾರ್ಯಕ್ರಮಕ್ಕೆ ಬರುವುದಾದರೂ ಹೇಗೆ? ಎಂದು ಪ್ರಶ್ನಿಸುತ್ತಿದ್ದಾರೆ.

ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್‌ಗೂ ಆಹ್ವಾನ ನೀಡಿರಲಿಲ್ಲ ಅನ್ನೋದು ಚರ್ಚೆ ಇನ್ನಷ್ಟು ತೀವ್ರವಾಗಿದೆ. ಈ ಬಗ್ಗೆ ಕಿಚ್ಚ ಸುದೀಪ್ ಆಪ್ತರಾಗಿರುವ​ ಚಕ್ರವರ್ತಿ ಚಂದ್ರಚೂಡ್​ (Chakraborty Chandrachud) ಫೇಸ್​ಬುಕ್ ಲೈವ್ ಬಂದು ಡಿಕೆ ಶಿವಕುಮಾರ್​, ರವಿ ಗಣಿಗ ಹಾಗೂ ಸಾಧು ಕೋಕಿಲ ವಿರುದ್ಧ ಕಿಡಿಕಾರಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೊಬ್ಬ ಹಿರಿಯ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಕೂಡ ದನಿಗೂಡಿಸಿದ್ದಾರೆ.

ಚಲನಚಿತ್ರೋತ್ಸವಕ್ಕೆ ಕರೆದಿಲ್ಲ, ಪಾಸ್ ಕೂಡ ಕೊಟ್ಟಿಲ್ಲ!

ನಾನು ಸರ್ಕಾರದ ಅನೇಕ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ಆದರೆ ಕಾಲು ನೋವಿನ ಕಾರಣದಿಂದ ಮೇಕೆದಾಟು ಪಾದಯಾತ್ರೆ ವೇಳೆ ಬಂದಿರಲಿಲ್ಲ. ಚಲನಚಿತ್ರೋತ್ಸವಕ್ಕೆ ಆಹ್ವಾನ ಸರಿಯಾಗಿ ಕಳಿಸಲಾಗಿಲ್ಲ. ಕಲಾವಿದರು. ಆಹ್ವಾನ ಕೊಡದ್ದಕ್ಕೆ ಕಲಾವಿದರು ಬಂದಿರಲಿಕ್ಕಿಲ್ಲ. ನನಗೂ ಚಲನಚಿತ್ರೋತ್ಸವಕ್ಕೆ ಆಹ್ವಾನಿಸಿಲ್ಲ, ಕನಿಷ್ಠಪಕ್ಷ ಪಾಸ್‌ ಕೂಡ ಕೊಟ್ಟಿಲ್ಲ. ಕೇಳಿದ್ರೆ ಸಾಧು ಕೋಕಿಲ ಅವರನ್ನೇ ಕೇಳಿ ಅಂತಾರೆ. ಪಾಸ್ ಯಾರ ಹತ್ತಿರ ಕೊಟ್ಟಿದ್ರೋ ನನಗೆ ಗೊತ್ತಿಲ್ಲ ಎಂದರು.

ಸಾಧು ಕೋಕಿಲ ನನ್ನೊಂದಿಗೆ ಮಾತನಾಡೋಲ್ಲ:

ಚಲನಚಿತ್ರೋತ್ಸವಕ್ಕೆ ಕಲಾವಿದರು ಬಂದಿಲ್ಲ ಅಂತಾರೆ. ಆದರೆ ಅದಕ್ಕೂ ಮುನ್ನ ಸಾಧು ಕೋಕಿಲ ಅವರು ಪೂರ್ವಭಾವಿ ಸಭೆ ಕರೆಯಬೇಕಿತ್ತು. ಎಲ್ಲ ಕಲಾವಿದರೊಂದಿಗೆ ಚರ್ಚಿಸಬೇಕಿತ್ತು. ನಿಗಮ ಮಂಡಳಿ ಅಧ್ಯಕ್ಹರ ಸಭೆ ನಡೆಸಬೇಕಿತ್ತು. ಆದರೆ ಅದ್ಯಾವುದೂ ಮಾಡಿಲ್ಲ, ಆಹ್ವಾನ ನೀಡಿಲ್ಲವೆಂದ ಮೇಲೆ ಬರುವುದಾದರೂ ಹೇಗೆ? ಸಾಧು ಕೋಕಿಲ ನನ್ನ ಜೊತೆಗೇ ಸರಿಯಾಗಿ ಮಾತನಾಡೋಲ್ಲ. ಹೀಗಾಗಿ ನನಗೆ ಆಹ್ವಾನ ಕೊಟ್ಟಿರಲಿಕ್ಕಿಲ್ಲ. ಅವರ ನಂಬರ್ ಸಹ ನನ್ನ ಬಳಿ ಇಲ್ಲ ಎಂದು ಸಾಧುಕೋಕಿಲ ಮೇಲೆ ಹಿರಿಯ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.