ಬೆಂಗಳೂರು (ಆ. 12): ಇಸ್ಲಾಂ ಧರ್ಮ ಗುರು ಮಹಮ್ಮದ್ ಪೈಗಂಬರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ ಎಂದು ಕಾವಲ್ ಬೈರಸಂದ್ರದಲ್ಲಿ ಮಂಗಳವಾರ ರಾತ್ರಿ ವ್ಯಾಪಕ ಹಿಂಸಾಚಾರ ನಡೆದಿದೆ. 

"

ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆಯಿಂದ ಉಂಟಾಗಿರುವ ಉದ್ವಿಗ್ನ ಸ್ಥಿತಿ ತಿಳಿಯಾಗಿದೆ. ಆದರೆ ಬೂದಿ ಮುಚ್ಚಿದ ಕೆಂಡದಂತಹ ಸ್ಥಿತಿ. ಯಾವಾಗ ಏನಾಗುತ್ತೋ ಗೊತ್ತಿಲ್ಲ. ಸುವರ್ಣ ನ್ಯೂಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದ್ದು ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ಬಗ್ಗೆ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ. 'ಕೆಲವರಿಗೆ ನಾವು ಕಾನೂನಿಗಿಂತ ದೊಡ್ಡವರು. ನಮ್ಮನ್ನು ಯಾರು ಏನೂ ಮಾಡೋಕಾಗಲ್ಲ ಎಂಬ ಮನೋಭಾವ ಬೆಳೆಯುತ್ತಿದೆ. ಇವರು ಈ ಮಟ್ಟಿಗೆ ಬೆಳೆಯೋಕೆ ಓಲೈಕೆ ರಾಜಕಾರಣವೇ ಕಾರಣ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಾಧ್ಯಮದವರ ಮೇಲೆ ಹಲ್ಲೆ ನಡೆಸಿರುವುದನ್ನು ನಾವು ಖಂಡಿಸುತ್ತೇವೆ. ಈ ಗಲಭೆ ಹಿಂದೆ ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.  ಈ ರಾಜ್ಯದಲ್ಲಿ ಕಾನೂನು ಇದೆ. ಸರ್ಕಾರ ಇದೆ. ಇಂತವರನ್ನು ಬೆಳೆಯಲು ಬಿಡಬಾರದು' ಎಂದು ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪ್ರತಿಕ್ರಿಯಿಸಿದ್ದಾರೆ. 

ಈ ಗಲಭೆ ವ್ಯವಸ್ಥಿತವಾದ ಷಡ್ಯಂತ್ರ. ಯಾರು ಅವಹೇಳನಕಾರಿ ಪೋಸ್ಟ್ ಹಾಕಿದಾರೆ ಅವರ ಬಗ್ಗೆ ತನಿಖೆಯಾಗಬೇಕು. ಜೊತೆಗೆ ಗಲಭೆ ಹಿಂದಿನ ರುವಾರಿಗಳ ಬಗ್ಗೆಯೂ ತನಿಖೆಯಾಗಬೇಕು. ಜನರ ನಡುವೆ ವೈಷಮ್ಯ ತಂದಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರ' ಎಂದು ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ. 

ಮಾಧ್ಯಮದವರ ಮೇಲಿನ ಹಲ್ಲೆ ಇದೇ ಮೊದಲೇನಲ್ಲ. ಈ ಹಿಂದೆಯೂ ನಡೆದ ಉದಾಹರಣೆಗಳು ಇವೆ. ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ ಕೂಡಲೇ ಅವರ ಧ್ವನಿಯನ್ನು ತಗ್ಗಿಸಬಹುದು ಎಂಬುದು ಭ್ರಮೆ. ಹೇಡಿಗಳು ಮಾಡುವ ಕೆಲಸವಿದು' ಎಂದು ಪತ್ರಕರ್ತ ವಿಶ್ವೇಶ್ವರ ಭಟ್ ಹೇಳಿದ್ದಾರೆ. 

ಈ ರೀತಿ ಧರ್ಮದ ಹೆಸರಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ. ಶಾಂತ ರೀತಿಯಿಂದ ವರ್ತಿಸಬೇಕು' ಎಂದು ಜಗದೀಶ್ ಶೆಟ್ಟರ್ ಹೇಳಿದ್ಧಾರೆ. 

ಈ ಗಲಭೆಯನ್ನು ಯಾರೂ ಕೂಡಾ ಸಮರ್ಥಿಸುವ ಹಾಗಿಲ್ಲ. ಇದನ್ನು ಎಲ್ಲರೂ ಖಂಡಿಸಬೇಕು' ಎಂದು ಜೆಡಿಎಸ್ ಮುಖಂಡ ಎಸ್‌.ವಿ ದತ್ತಾ ಹೇಳಿದ್ದಾರೆ. 

ಸಾಕಷ್ಟು ರಾಜಕೀಯ ನಾಯಕರು ಖಂಡಿಸಿದ್ದು ಹೀಗೆ.