ತಾನೇ ದೊಡ್ಡ ಡ್ರಾಮಾ ಕಿಂಗ್, 'ಸಿಟಿ ರವಿ ಡ್ರಾಮಾ ಮಾಸ್ಟರ್ ಎಂದ ಡಿಕೆಶಿಗೆ ತಿರುಗೇಟು!
ಡಿಸಿಎಂ ಡಿಕೆ ಶಿವಕುಮಾರ ವಿರುದ್ಧ ವಿಧಾನಪರಿಷತ್ ಸದಸ್ಯ ಸಿ ಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಮೋಹ, ಮದ, ಮತ್ಸರದಿಂದ ಹೊರಬಂದು ನೋಡಬೇಕು ಎಂದು ಹೇಳಿದ ಅವರು, ಹಸುಗಳ ಕೆಚ್ಚಲು ಕೊಯ್ದ ಘಟನೆಯನ್ನು ಖಂಡಿಸಿದರು. ಇದು ಮತಾಂಧರ ಕೃತ್ಯ ಎಂದು ಆರೋಪಿಸಿದ ಸಿ.ಟಿ. ರವಿ, ಬೆದರಿಕೆ ಪತ್ರಗಳಿಗೆ ಹೆದರುವುದಿಲ್ಲ ಎಂದರು.
ಚಿಕ್ಕಮಗಳೂರು (ಜ.12): ಯಾರು ಮೋಹ, ಮದ ಮತ್ಸರಗಳಿಂದ ಹೊರಗಿದ್ದು ನೋಡುತ್ತಾರೋ ಅವರಿಗೆ ಸತ್ಯಾಸತ್ಯಾತೆ ಗೊತ್ತಾಗುತ್ತೆ. ಮೋಹಪರವಶರಾದವರಿಗೆ, ಅಧಿಕಾರ ಮದದಿಂದ ಮಾತ್ಸರ್ಯದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ ವಿರುದ್ಧ ವಿಧಾನಪರಿಷತ್ ಸದಸ್ಯ ಸಿ ಟಿ ರವಿ ತಿರುಗೇಟು ನೀಡಿದರು.
'ಸಿಟಿ ರವಿ ಡ್ರಾಮಾ ಮಾಸ್ಟರ್' ಎಂಬ ಡಿಕೆಶಿ ಹೇಳಿಕೆಗೆ, ತಾನೇ ದೊಡ್ಡ ಡ್ರಾಮಾ ಕಿಂಗ್, ಮುಖ್ಯಮಂತ್ರಿ ಹುದ್ದೆಗಾಗಿ ಡಿಕೆಶಿ ಡ್ರಾಮಾ ಮಾಡುತ್ತಿದ್ದಾರೆ ಎಂದು ಕೆಲ ಕಾಂಗ್ರೆಸ್ ನಾಯಕರೇ ಮಾತನಾಡುತ್ತಾರೆ ಎಂದ ಸಿಟಿ ರವಿ ಅವರು, ಉಪಮುಖ್ಯಮಂತ್ರಿಯಾಗಿ ನ್ಯಾಯದ ಸ್ಥಾನದಲ್ಲಿದ್ದೀರಿ ಆದರೆ ಯಾರ ಮೋಹದಿಂದ ಅಧಿಕಾರದ ಮದದಿಂದ ಯಾರದೋ ವಕೀಲರಾಗಿಬಿಟ್ಟಿದ್ದೀರಿ ಎಂದು ತಿರುಗೇಟು ನೀಡಿದರು.
ಸಭಾಪತಿಗಳು ರೂಲಿಂಗ್ ನಡೆದ ಮೇಲೂ ನಡೆದ ಘಟನೆ ಬಗ್ಗೆ ಗಾಂಧಿಗಿರಿ ಎನ್ನಬೇಕೇ ಅಥವಾ ಗೂಂಡಾಗಿರಿ ಎನ್ನಬೇಕೇ? ನನ್ನ ಮೇಲೆ ನಿಮ್ಮ ಸರ್ಕಾರದ ಪೊಲೀಸರು ಮಾಡಿದ ದೌರ್ಜನ್ಯದ ಹಿಂದೆ ಯಾರ ಕುಮ್ಮಕ್ಕಿದೆ, ಯಾರ ಕಾಣದ ಕೈಗಳ ಪಾತ್ರವಿದೆ? ಇದು ಅರ್ಥವಾಗಬೇಕೆಂದರೆ ಮೋಹ ಮತ್ಸರದಿಂದ ಹೊರಬಂದು ನೋಡಬೇಕು. ಯಾರು ಹೇಗಿದ್ದಾರೋ ಇತರರು ಹಾಗೆ ಎಂದು ಭಾವಿಸುತ್ತಾರೆ ಎಂದು ಡಿಕೆಶಿ ವಿರುದ್ಧ ಕಿಡಿಕಾರಿದರು.
ಹಸುಗಳ ಕೆಚ್ಚಲು ಕೊಯ್ದ ಕೃತ್ಯಕ್ಕೆ ಸಿಟಿ ರವಿ ಆಕ್ರೋಶ:
ಮಲಗಿದ್ದ ಹಸುಗಳ ಕೆಚ್ಚಲು ಬರ್ಬರವಾಗಿ ಕೊಯ್ದು ವಿಕೃತಿ ಮೆರೆದಿರುವ ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿಟಿ ರವಿ ಅವರು,ಇದೊಂದು ಅತ್ಯಂತ ಕ್ರೌರ್ಯದ ಪ್ರಕರಣ. ಇದನ್ನು ಸಹಿಸಿಕೊಳ್ಳಬಾರದು. ಈ ಕೃತ್ಯ ಮತಾಂಧರಲ್ಲದೇ ಬೇರೆ ಯಾರೂ ಮಾಡಿರಲಾರರು. ಈ ನೆಲದಲ್ಲಿ ಅಂತವರಿಗೆ ಜಾಗವಿಲ್ಲವೆಂದ. ಇದು ಅಮಾನವೀಯ ಕೃತ್ಯವಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದರು.
ಮತಾಂಧರೇ ನಮ್ಮನ್ನ ಕೆರಳಿಸುವ ಪ್ರಯತ್ನ ಮಾಡಬೇಡಿ:
ನಾವು ಸನಾತನ ಧರ್ಮದಿಂದ ಬಂದವರು, ಎಲ್ಲದರಲ್ಲೂ ದೇವರನ್ನು ಕಾಣುತ್ತೇವೆ. ಹಾಲು ಕೊಡುವ ಹಸುಗಳನ್ನು ತಾಯಿ ಸಮಾನ ಕಾಣುತ್ತೇವೆ, ಪೂಜಿಸುತ್ತೇವೆ. ಆದರೆ ಹಿಂದೂಗಳ ಭಾವನೆಗಳನ್ನ ಕೆರಳಿಸಿ ಗಲಭೆ ಸೃಷ್ಟಿಸುವ ಉದ್ದೇಶದಿಂದ ಮತಾಂಧರು ಈ ರೀತಿ ಅಮಾನವೀಯ ಕೃತ್ಯವೆಸಗಿದ್ದಾರೆ. ಯಾವುದೇ ಕಾರಣಕ್ಕೂ ಹಿಂದೂಗಳ ಇಂತದ್ದನ್ನು ಸಹಿಸಿಕೊಳ್ಳಬಾರದು ಎಂದರು.
ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದ ಕಿಡಿಗೇಡಿಗಳು, ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ!
ಇನ್ನು ಬೆದರಿಕೆ ಪತ್ರ ಬಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪತ್ರ ಬಂದ ಬಗ್ಗೆ ದೂರು ನೀಡಿದ್ದೇನೆ. ತನಿಖೆ ನಡೆಯುತ್ತಿದೆ. ಇಂಥ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ, ಹೋರಾಟದ ಮೂಲಕವೇ ಬಂದವನು ನಾನು. ಹೆದರಿಕೆ, ಭಯ ನನ್ನ ಡಿಕ್ಷನರಿಯಲ್ಲಿ ಜಾಗವಿಲ್ಲ. ಹುಟ್ಟಿದ ಮನುಷ್ಯ ಒಂದಲ್ಲೊಂದು ದಿನ ಸಾಯಲೇಬೇಕು, ಇಲ್ಲೇ ಇರುವುದಕ್ಕೆ ಸಾಧ್ಯವಿಲ್ಲ. ಹಾಗಂತ ಹೆದರಿಕೊಂಡು ಕೂರುವ ಜಾಯಮಾನ ನನ್ನದಲ್ಲ ಎಂದರು.