ಸೆ.11ರಂದು ಬೆಂಗಳೂರು ಬಂದ್: ಖಾಸಗಿ ಬಸ್, ಆಟೋ, ಟ್ಯಾಕ್ಸಿಗಳ ಸೇವೆ ಸ್ಥಗಿತ
ರಾಜ್ಯದಲ್ಲಿ ಶಕ್ತಿಯೋಜನೆಯಿಂದಾಗಿ ನಮಗೆ ನಷ್ಟವಾಗಿದೆ. ಸರ್ಕಾರ ಕೂಡಲೇ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ಸೆ.11ರಂದು ಬೆಂಗಳೂರು ಬಂದ್ ಮಾಡಲಾಗುವುದು.
ಬೆಂಗಳೂರು (ಸೆ.01): ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಬಳಿಕ ಆಟೋ ಟ್ಯಾಕ್ಸಿ, ಖಾಸಗಿ ಬಸ್ ಮಾಲೀಕರು ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಡ ಹಾಕಿದ್ದರೂ ಸರ್ಕಾರ ಸ್ಪಂದನೆ ನೀಡಲಿಲ್ಲ. ಆದ್ದರಿಂದ ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜ್ಯದ 32 ಸಂಘಟನೆಗಳು ಒಳಗೊಂಡಂತೆ ಸೆ.11ರಂದು (ಭಾನುವಾರ ಸೆ.10ರ ಮಧ್ಯರಾತ್ರಿ 12 ಗಂಟೆಯಿಂದ ಸೋಮವಾರ ಮಧ್ಯರಾತ್ರಿ 11.59ರವರೆಗೆ) ಮುಷ್ಕರವನ್ನು ಹಮ್ಮಿಕೊಳ್ಳಲಾಗಿದ್ದು, ಇಡೀ ಬೆಂಗಳೂರು ಬಂದ್ ಮಾಡಲಾಗುತ್ತದೆ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮ ಹೇಳಿದ್ದಾರೆ.
ಇನ್ನು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ಬಸ್‌ಗಳು, ಆಟೋ, ಟ್ಯಾಕ್ಸಿ , ಶಾಲಾ ವಾಹನ, ಮ್ಯಾಕ್ಸಿ ಕ್ಯಾಬ್, ಓಲಾ, ಉಬರ್, ಗೂಡ್ಸ್ ವಾಹನ, ಖಾಸಗಿ ಟೆಂಪೋಗಳು ಹಾಗೂ ಲಾರಿಗಳಲ್ಲಿ ಮ್ಯಾಕ್ಸಿಕ್ಯಾಬ್ ಗೂಡ್ಸ್ ವಾಹನಗಳು ಓಡಾಟ ನಡೆಸಲ್ಲ. ಒಟ್ಟಾರೆ, ಬೆಂಗಳೂರಿನಲ್ಲಿ 10 ರಿಂದ 12 ಲಕ್ಷ ವಾಹನಗಳ ಸಂಚಾರ ಸ್ತಬ್ಧವಾಗಲಿದೆ. ಇದರಿಂದ ಸಾರ್ವಜನಿಕ ಸೇವೆಯಲ್ಲು ಉಂಟಾಗುವ ನಷ್ಟವನ್ನು ಸರ್ಕಾರವೇ ಭರಿಸಬೇಕಾಗುತ್ತದೆ. ಜೊತೆಗೆ, ಸಮಸ್ಯೆಯಾದಲ್ಲಿ ಸರ್ಕಾರವೇ ಹೊಣೆಯಾಗಲಿದೆ ಎಂದು ಪ್ರತಿಭಟನೆಗೆ ಕರೆಕೊಟ್ಟ ಒಕ್ಕೂಟದ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಯವರು ಔಟ್ ಸೋರ್ಸ್ ಮೂಲಕವಾದ್ರೂ ವಿಪಕ್ಷ ನಾಯಕನ ಆರಿಸಿ: ನಾಗತಿಹಳ್ಳಿ ಚಂದ್ರಶೇಖರ್ ಸಲಹೆ
ಶಕ್ತಿ ಯೋಜನೆ ಜಾರಿಗೊಂಡ ನಂತರ ಖಾಸಗಿ ಸಾರಿಗೆ ಮಾಲೀಕರಿಗೆ ನಷ್ಟ ಭರಿಸುವ ನಿಟ್ಟಿನಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರೂ ಸರ್ಕಾರ ಸ್ಪಂದಿಸಲಿಲ್ಲ. ಈ ಹಿಂದೆ ಖಾಸಗಿ ವಾಹನಗಳ ಸಂಚಾರ ಬಂದ್‌ಗೆ ಕರೆಕೊಟ್ಟಾಗ ಸ್ವತಃ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಭೆ ನಡೆಸಿ ಕೆಲವು ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದ್ದರು. ಆದರೆ, ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಆದ್ದರಿಂದ ಖಾಸಗಿ ಸಾರಿಗೆ ಸಂಘಟನೆಗಳು ಸರ್ಕಾರದ ವಿರುದ್ಧ ಬಂದ್ ಅಸ್ತ್ರಕ್ಕೆ ಮುಂದಾಗಿವೆ. ಈ ಬಗ್ಗೆ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಸಭೆಯಲ್ಲಿ ಬಂದ್ ಬಗ್ಗೆ ತೀರ್ಮಾನ ಮಾಡಲಾಗಿದೆ.
ರಾಜ್ಯದಲ್ಲಿ ಆಟೋ, ಟ್ಯಾಕ್ಸಿ, ಬಸ್‌ಗಳು, ಮ್ಯಾಕ್ಸಿಕ್ಯಾಬ್, ಗೂಡ್ಸ್ ಆಟೋಗಳು, ಕಾರುಗಳು ಸೇರಿದಂತೆ ಒಟ್ಟು 32 ಸಂಘಟನೆಗಳಿಂದ ಬಂದ್‌ಗೆ ಬೆಂಬಲ ದೊರೆತಿದೆ. ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಸೇರಿದಂತೆ ಸಂಪೂರ್ಣ ಖಾಸಗಿ ಸಾರಿಗೆ ಬಂದ್ ಮಾಡಲು ನಿರ್ಧಾರ ಮಾಡಲಾಗುತತದೆ. ಖಾಸಗಿ ಸಾರಿಗೆ ಮಾಲೀಕರ/ಚಾಲಕರ ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ಆ.30ರವರೆಗೆ ಡೆಡ್‌ಲೈನ್ ಕೊಡಲಾಗಿತ್ತು. ಆದರೂ ಸರ್ಕಾರದ ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ಬೆಂಗಳೂರಿನಲ್ಲಿ ಆ.30ರೊಳಗೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡೋ ಭರವಸೆ ನೀಡಿದ್ದರೂ ಈಡೇರಿಸಿಲ್ಲ. ಸರ್ಕಾರದ ನಿರ್ಲಕ್ಷ್ಯಕ್ಕೆ ಖಾಸಗಿ ಆಟೋ, ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದು, ಬಂದ್‌ಗೆ ಕರೆ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮ ಅವರು, ಸೆಪ್ಟೆಂಬರ್ 11 ರಂದು ಬೆಂಗಳೂರು ಸಂಪೂರ್ಣ ಸ್ತಬ್ಧವಾಗಲಿದೆ. ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದ ಸೋಮವಾರ ಮಧ್ಯರಾತ್ರಿ 11.59 ರವರೆಗೆ ಮುಷ್ಕರಕ್ಕೆ ನಿರ್ಧಾರ ಮಾಡಲಾಗಿದೆ. ಮುಷ್ಕರದಲ್ಲಿ ಲಕ್ಷಾಂತರ ಖಾಸಗಿ ವಾಹನಗಳ ಮಾಲೀಕರು ಭಾಗಿಯಾಗಲಿದ್ದಾರೆ. ರಾಜ್ಯದ ಸುಮಾರು 5 ಲಕ್ಷಕ್ಕೂ ಹೆಚ್ಚು ಆಟೋ, 3 ಲಕ್ಷಕ್ಕೂ ಹೆಚ್ಚು ಟ್ಯಾಕ್ಸಿ, 55 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್ ಗಳು ಸಂಚಾರ ಸ್ಥಗಿತಗೊಳಿಸಲಿವೆ. ಬೆಂಗಳೂರನ್ನು ಬಹುತೇಕ ಬಂದ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಆಸ್ಪತ್ರೆಯಿಂದಲೇ ಕಾವೇರಿ ಹೋರಾಟಕ್ಕೆ ಕರೆಕೊಟ್ಟ ಮಾಜಿ ಸಿಎಂ ಕುಮಾರಸ್ವಾಮಿ
ಬಂದ್ ವೇಳೆ ವಾಹನ ರಸ್ತೆಗಿಳಿದರೆ ಏನಾದ್ರೂ ಆಗಬಹುದು: ಇನ್ನು ನಾವು ಮುಷ್ಕರಕ್ಕೆ ಕರೆಕೊಟ್ಟ ವೇಳೆ ರಸ್ತೆಗಿಳಿದು ಏನಾದರೂ ಅನಾಹುತ ಆದ್ರೆ ಅದಕ್ಕೆ ನಾವು ಹೊಣೆಯಲ್ಲ. ನಾವು ಈಗಾಗಲೇ ಎಲ್ಲ ಸಂಘಟನೆಗಳಿಗೆ ಮನವಿ ಮಾಡಿದ್ದೇವೆ. ಎಲ್ಲರೂ ಕೂಡ ಬೆಂಗಳೂರು ಬಂದ್ ಗೆ ಬೆಂಬಲ ನೀಡುವಂತೆ ಕೇಳಿದ್ದೇವೆ. ಅದನ್ನು ಮೀರಿ ರಸ್ತೆಗಿಳಿದ್ರೆ ಏನು ಬೇಕಿದ್ರು ಆಗಬಹುದು. ಸರ್ಕಾರ ನಮ್ಮ ವಿರುದ್ದ ಯಾವ ಕೇಸ್ ಹಾಕಿದ್ರು ನಾವು ಕೇರ್ ಮಾಡಲ್ಲ. ನಾವು ಎಲ್ಲದಕ್ಕೂ ಸಿದ್ದವಿದ್ದೇವೆ. ಇದಕ್ಕೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಒಲಾ, ಉಬರ್‌ನಿಂದ ಸಾರಿಗೆ ಇಲಾಖೆಗೆ ಕಮಿಷನ್ ಹೋಗ್ತಿದೆ: ರಾಜ್ಯದಲ್ಲಿ ಕಳೆದ 11 ವರ್ಷದಿಂದ ಹೇಮಂತ್ ಕುಮಾರ್ ಸಾರಿಗೆ ಇಲಾಖೆಯಲ್ಲಿದ್ದಾರೆ. ಸದ್ಯ ಅಡಿಷನಲ್ ಕಮೀಷನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಎಲ್ಲರನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಚಿವರನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಓಲಾ, ಊಬರ್ ಕಂಪೆನಿಗಳಿಂದ ಕಮಿಷನ್ ಹೋಗುತ್ತದೆ. ಈ ಬಗ್ಗೆ ದಾಖಲೆ ಇದೆ. ಶೀಘ್ರದಲ್ಲೇ ಬಿಡುಗಡೆ ಮಾಡ್ತೀನಿ. 15 ರಿಂದ 20 ದಿನದೊಳಗೆ ದಾಖಲೆ ಬಿಡುಗಡೆ ಮಾಡ್ತೀನಿ. ಸಾರಿಗೆ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ನಟರಾಜ್ ಶರ್ಮಾ ಆರೋಪಿಸಿದರು.