ಸಾರಿಗೆ ಬಂದ್ ಎದುರಿಸಲು ಸರ್ಕಾರ ಸಿದ್ಧತೆ; 500 ಬಿಎಂಟಿಸಿ ಬಸ್ ನಿಯೋಜನೆ
ವಿವಿಧ ಬೇಡಿಕೆ ಈಡೇರಿಕೆಗಾಗಿ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸೋಮವಾರ ಬೆಂಗಳೂರು ಬಂದ್ ನಡೆಸುತ್ತಿದೆ. ಇದಕ್ಕೆ ಪ್ರತಿಯುತ್ತರವಾಗಿ ಸರ್ಕಾರ ಹಲವು ಸಿದ್ಧತೆ ನಡೆಸಿದೆ.

ಬೆಂಗಳೂರು (ಸೆ.11) : ವಿವಿಧ ಬೇಡಿಕೆ ಈಡೇರಿಕೆಗಾಗಿ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸೋಮವಾರ ಬೆಂಗಳೂರು ಬಂದ್ ನಡೆಸುತ್ತಿದೆ. ಇದಕ್ಕೆ ಪ್ರತಿಯುತ್ತರವಾಗಿ ಸರ್ಕಾರ ಹಲವು ಸಿದ್ಧತೆ ನಡೆಸಿದೆ.
ಜನ ಸಾಮಾನ್ಯರಿಗೆ ತೊಂದರೆ ಆಗದಂತೆ ಸಾರಿಗೆ ಇಲಾಖೆಯಿಂದ ಹೆಚ್ಚಿನ ಬಸ್‌ಗಳ ಸಂಚಾರ ಮಾಡಲು ನಿರ್ಧರಿಸಲಾಗಿದೆ. ಸಹಜವಾಗಿ ಪ್ರತಿದಿನ 5,601 ಬಸ್‌ಗಳಿಂದ 57,450 ಟ್ರಿಪ್ ಕಾರ್ಯಾಚರಣೆ ಮಾಡಲಾಗುತ್ತಿದೆ. ಆದರೆ, ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿಯವರೆಗೆ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ 500 ಬಸ್‌ಗಳಿಂದ ಸುಮಾರು 4 ಸಾವಿರ ಹೆಚ್ಚುವರಿ ಟ್ರಿಪ್ ಕಾರ್ಯಾಚರಣೆ ನಡೆಸಲು ಯೋಜನೆ ರೂಪಿಸಿಕೊಳ್ಳಲಾಗಿದೆ.
ನಗರದ ಪ್ರಮುಖ ಬಸ್ ನಿಲ್ದಾಣಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್.ಮಾರುಕಟ್ಟೆಹಾಗೂ ಶಿವಾಜಿನಗರ ಬಸ್ ನಿಲ್ದಾಣಗಳಿಂದ ಕಾಡುಗೋಡಿ, ಸರ್ಜಾಪುರ, ಅತ್ತಿಬೆಲೆ, ಆನೇಕಲ…, ಬನ್ನೇರುಘಟ್ಟ, ಜಿಗಣಿ, ಹಾರೋಹಳ್ಳಿ, ಬಿಡದಿ, ತಾವರೆಕೆರೆ, ನೆಲಮಂಗಲ, ಹೆಸರಘಟ್ಟ, ದೊಡ್ಡಬಳ್ಳಾಪುರ, ದೇವನಹಳ್ಳಿ, ಬಾಗಲೂರು, ಚನ್ನಸಂದ್ರ, ಹೊಸಕೋಟೆಗೆ ಹಾಗೂ ಹೊರ ವರ್ತುಲ ಹಾಗೂ ಒಳವರ್ತುಲ ರಸ್ತೆಗಳಲ್ಲಿ ಮತ್ತು ನಗರದ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಹೆಚ್ಚಿನ ಬಸ್‌ಗಳು ಸಂಚರಿಸಲಿವೆ.
ಮೇಲ್ವಿಚಾರಣೆ: ಅಲ್ಲದೆ, ನಗರದ ಪ್ರಮುಖ ರಸ್ತೆ, ಬಸ್ ನಿಲ್ದಾಣ ಹಾಗೂ ಜಂಕ್ಷನ್‌ಗಳಲ್ಲಿ ಸಂಸ್ಥೆಯ ಅಧಿಕಾರಿ ಹಾಗೂ ಸಿಬ್ಬಂದಿ ಹಾಗೂ ಸಾರಥಿ ಗಸ್ತು ಪಡೆ ನಿಯೋಜಿಸಿ, ಸಂಸ್ಥೆಯ ಸಾರಿಗೆಗಳ ಮೇಲ್ವಿಚಾರಣೆ ಮಾಡಿಸಲಾಗುತ್ತಿದೆ. ಅಲ್ಲದೇ ಪ್ರಯಾಣಿಕರ ಅಧಿಕ ದಟ್ಟಣೆ ಕಂಡುಬರುವ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಸಂಚರಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ನಾಳೆ ಖಾಸಗಿ ಸಾರಿಗೆ ಮುಷ್ಕರ; ಬೆಂಗಳೂರಿನ ಈ ಪ್ರದೇಶದ ಶಾಲೆಗಳಿಗೆ ರಜೆ ಘೋಷಣೆ
ಕೆಲವು ಶಾಲೆಗಳಿಗೆ ರಜೆ
ಶಾಲೆಗಳಿಗೆ ರಜೆ ನೀಡುವ ಬಗ್ಗೆ ಖಾಸಗಿ ಶಾಲಾ ಒಕ್ಕೂಟಗಳು ಈವರೆಗೆ ಸ್ಪಷ್ಟವಾದ ನಿರ್ಧಾರ ಕೈಗೊಂಡಿಲ್ಲವಾದರೂ ಕೆಲವು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಕಾರ್ಯದರ್ಶಿ ಶಶಿ ಕುಮಾರ್ ಮಾತನಾಡಿ, ಬಹುತೇಕ ಶಾಲೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ತಲುಪಿಸಲು ಹಾಗೂ ವಾಪಸ್ ಕರೆದೊಯ್ಯಲು ತಮ್ಮದೇ ಆದ ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ. ಸಿಬಿಎಸ್‌ಸಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಎಂ.ಶ್ರೀನಿವಾಸನ್ ಪ್ರತಿಕ್ರಿಯಿಸಿ, ನಮ್ಮ ಶಾಲೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಹಲವು ಶಾಲೆಗಳಲ್ಲಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ರಜೆ ಘೋಷಣೆ ಕಷ್ಟಸಾಧ್ಯ ಎಂದಿದ್ದಾರೆ. ಆದರೂ ನಗರದಲ್ಲಿ ಕೆಲವು ಶಾಲಾ ಆಡಳಿತ ಮಂಡಳಿಗಳು ರಜೆ ಘೋಷಿಸಿವೆ.
ಬೇಡಿಕೆಗಳೇನು?
1.ಶಕ್ತಿ ಯೋಜನೆಯಿಂದ ತೊಂದರೆಗೀಡಾಗಿರುವ ಖಾಸಗಿ ವಾಹನ ಚಾಲಕರಿಗೆ ಮಾಸಿಕ .10 ಸಾವಿರ ಪರಿಹಾರ ನೀಡಬೇಕು
2.ರಾರಯಪಿಡೋ ಬೈಕ್ ಟ್ಯಾಕ್ಸಿ ಸೇವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು
3.ಅಸಂಘಟಿತ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು
4.ವೈಟ್‌ಬೋರ್ಡ್ ವಾಹನಗಳಲ್ಲಿ ಬಾಡಿಗೆ ಓಡಿಸುವುದು ಸ್ಥಗಿತಗೊಳಿಸಬೇಕು
5.ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು
6.ಓಲಾ, ಊಬರ್ ಸೇರಿದಂತೆ ಆ್ಯಪ್ ಆಧಾರಿತ ಸಾರಿಗೆ ಸೇವೆಗಳನ್ನು ಬಂದ್ ಮಾಡಬೇಕು
7.ಖಾಸಗಿ ವಾಹನಗಳನ್ನು ಸರ್ಕಾರ ಕಿ.ಮೀ. ಆಧಾರದಲ್ಲಿ ಬಾಡಿಗೆ ಪಡೆಯಬೇಕು
8.ನಿಯಮ ಬಾಹಿರವಾಗಿ ಖಾಸಗಿ ವಾಹನ ವಶಕ್ಕೆ ಪಡೆಯುವ ಫೈನಾನ್ಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು
ಭಾನುವಾರ ರಾತ್ರಿ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಅಂತಿಮ ಹಂತದ ಮಾತುಕತೆ ನಡೆದರೂ ಬೇಡಿಕೆ ಈಡೇರಿಕೆ ಬಗ್ಗೆ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಭಾನುವಾರ ಮಧ್ಯರಾತ್ರಿಯಿಂದ ಖಾಸಗಿ ಬಸ್, ಆಟೋ, ಕ್ಯಾಬ್‌ಗಳ ಮುಷ್ಕರ ನಡೆಸುತ್ತಿದ್ದೇವೆ.
-ನಟರಾಜ ಶರ್ಮ, ರಾಜ್ಯ ಬಸ್ ಮಾಲಿಕರ ಸಂಘದ ಅಧ್ಯಕ್ಷ.
'ಬೇಡಿಕೆ ಈಡೇರಿಸಿಕೊಳ್ಳಬೇಕೆಂದರೆ ಬಂದು ಮಾತಾಡಲಿ' ಖಾಸಗಿ ಸಾರಿಗೆ ಬಂದ್‌ಗೆ ಡೋಂಟ್‌ಕೇರ್ ಎಂದ ಸಾರಿಗೆ ಸಚಿವ
ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದಿಂದ ಸೋಮವಾರ ಬೆಂಗಳೂರು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರ ಸಂಚಾರ ಪೊಲೀಸರು ಕೆಲ ರಸ್ತೆಗಳಲ್ಲಿ ವಾಹನಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದು, ಬದಲಿ ಮಾರ್ಗಗಳನ್ನು ಬಳಸುವಂತೆ ಸೂಚಿಸಿದ್ದಾರೆ.
*ಖೋಡೆ ಸರ್ಕಲ್‌ಗೆ ಬರುವ ಬರುವ ವಾಹನಗಳು: ಆರ್.ಆರ್.ಜಂಕ್ಷನ್ ಮುಖಾಂತರ ಕೃಷ್ಣ ಪ್ಲೋರ್, ಮಲ್ಲೇಶ್ವರ ಕಡೆಗೆ ಹೋಗಬೇಕು
*ಗೂಡ್‌್ಸಶೆಡ್ ರಸ್ತೆ ಕಡೆಯಿಂದ ಬರುವ ವಾಹನಗಳು: ಜಿ.ಟಿ.ರಸ್ತೆ ಮುಖಾಂತರ ಸಂಗೊಳ್ಳಿ ರಾಯಣ್ಣ ಸರ್ಕಲ್, ಓಕಳೀಪುರ, ಸುಜಾತ ಮೂಲಕ ಮುಂದೆ ಹೋಗಬೇಕು
*ಆನಂದರಾವ್ ಸರ್ಕಲ್ ಕಡೆಯಿಂದ ಬರುವ ವಾಹನಗಳು: ಹಳೆ ಜೆಡಿಎಸ್ ರಸ್ತೆ ಹಾಗೂ ಶೇಷಾದ್ರಿಪುರಂ ರಸ್ತೆ ಕಡೆಗೆ ಹೋಗಬೇಕು
*ಮೈಸೂರು ಬ್ಯಾಂಕಿನಿಂದ ಬರುವ ವಾಹನಗಳು: ಪ್ಯಾಲೇಸ್ ರಸ್ತೆ, ಮಹಾರಾಣಿ ಕೆಳಸೇತುವೆ, ಬಸವೇಶ್ವರ ಸರ್ಕಲ್ ಮುಖಾಂತರ ಮುಂದೆ ಸಂಚರಿಸಬೇಕು