ಆಗಸ್ಟ್ 1, 2025 ರಿಂದ ಬೆಂಗಳೂರಿನಲ್ಲಿ ಆಟೋ ದರಗಳು ಏರಿಕೆಯಾಗಲಿವೆ. ಮೊದಲ 2 ಕಿ.ಮೀ.ಗೆ ₹36 ಮತ್ತು ನಂತರ ಪ್ರತಿ ಕಿ.ಮೀ.ಗೆ ₹18 ದರ ನಿಗದಿಯಾಗಿದೆ. ರಾತ್ರಿ ವೇಳೆ ಪ್ರಯಾಣಕ್ಕೆ ಅರ್ಧದಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುವುದು.
ಬೆಂಗಳೂರು (ಜುಲೈ.31): ಆಗಸ್ಟ್ 1, 2025 ರಿಂದ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದುಬಾರಿಯಾಗಲಿದೆ. ಬೆಂಗಳೂರು ಜಿಲ್ಲಾಧಿಕಾರಿಗಳು ಈ ಕುರಿತು ಆದೇಶವನ್ನು ಈಗಾಗಲೇ ಹೊರಡಿಸಿದ್ದು, ಆಟೋ ಚಾಲಕರ ದೀರ್ಘಕಾಲದ ಬೇಡಿಕೆಗೆ ಮಣಿದು ಹೊಸ ದರ ಪಟ್ಟಿಯನ್ನು ಜಾರಿಗೆ ತರಲಾಗಿದೆ. ಇದರಿಂದಾಗಿ ನಗರದ ಜನರಿಗೆ ಆಟೋ ಪ್ರಯಾಣದ ವೆಚ್ಚ ಗಣನೀಯವಾಗಿ ಏರಿಕೆಯಾಗಲಿದೆ.
ಹೊಸ ದರದ ಪ್ರಕಾರ, ಮೊದಲ ಎರಡು ಕಿಲೋಮೀಟರ್ ಪ್ರಯಾಣಕ್ಕೆ 36 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಇದಾದ ನಂತರ ಪ್ರತಿ ಕಿಲೋಮೀಟರ್‌ಗೆ 18 ರೂಪಾಯಿಗಳ ದರವನ್ನು ವಿಧಿಸಲಾಗುವುದು. ಕಾಯುವಿಕೆ ಶುಲ್ಕದ ವಿಷಯದಲ್ಲಿ, ಮೊದಲ ಐದು ನಿಮಿಷಗಳಿಗೆ ಯಾವುದೇ ಶುಲ್ಕವಿರುವುದಿಲ್ಲ, ಆದರೆ ನಂತರದ ಪ್ರತಿ ಹದಿನೈದು ನಿಮಿಷಗಳಿಗೆ 10 ರೂಪಾಯಿಗಳ ಶುಲ್ಕವನ್ನು ಚಾಲಕರು ಪಡೆಯಲಿದ್ದಾರೆ. ಲಗೇಜ್‌ಗೆ ಸಂಬಂಧಿಸಿದಂತೆ, 20 ಕೆ.ಜಿ ವರೆಗಿನ ತೂಕಕ್ಕೆ ಯಾವುದೇ ಶುಲ್ಕವಿಲ್ಲ, ಆದರೆ ಅದಕ್ಕಿಂತ ಹೆಚ್ಚಿನ ತೂಕಕ್ಕೆ 10 ರೂಪಾಯಿಗಳ ಶುಲ್ಕವನ್ನು ವಿಧಿಸಲಾಗುವುದು.
ಇನ್ನು ರಾತ್ರಿಯ ವೇಳೆಯಲ್ಲಿ, ಅಂದರೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಪ್ರಯಾಣಿಸುವವರಿಗೆ, ಸಾಮಾನ್ಯ ದರಕ್ಕಿಂತ ಅರ್ಧಪಟ್ಟು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಪರಿಷ್ಕೃತ ದರ ಪಟ್ಟಿಯನ್ನು ಪ್ರತಿಯೊಂದು ಆಟೋದ ಮೇಲೆ ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಜೊತೆಗೆ, ಈ ಹೊಸ ದರಕ್ಕೆ ತಕ್ಕಂತೆ ಆಟೋಗಳಲ್ಲಿ ಪರಿಷ್ಕೃತ ಮೀಟರ್‌ಗಳನ್ನು ಅಕ್ಟೋಬರ್ 31, 2025 ರೊಳಗೆ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: ಗಾಯತ್ರಿ ಕಾಫಿ ಎಂಬ ಹಳೇ ಬೇರಿನಲ್ಲಿ ಚಿಗುರೊಡೆದ ಗೆಟ್ ಕಾಫಿ!
ಈ ದರ ಏರಿಕೆಯಿಂದ ಬೆಂಗಳೂರಿನ ಜನರ ದೈನಂದಿನ ಪ್ರಯಾಣ ವೆಚ್ಚದ ಮೇಲೆ ಭಾರವಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಆಟೋ ಚಾಲಕರ ಬೇಡಿಕೆಗೆ ಸರ್ಕಾರ ಮಣಿದಿರುವುದು ನಗರದಲ್ಲಿ ಚರ್ಚೆಗೆ ಕಾರಣವಾಗಿದೆ.
ಈಗಾಗಲೇ ಆಟೋ ಚಾಲಕರು ಮೀಟರ್ ಹಾಕದೇ ಮನಸೋ ಇಚ್ಛೆ ಪ್ರಯಾಣಿಕರಿಂದ ಹಣ ಕೀಳುತ್ತಿರುವ ಬಗ್ಗೆ ದಿನಂಪ್ರತಿ ಘಟನೆಗಳು ನಡೆಯುತ್ತಲೇ ಇವೆ. ಒಂದು ಕಿಮೀ ಒಳಗೆ ನೂರಾರು ರೂಪಾಯಿ ಕೇಳುತ್ತಾರೆ. ಮೀಟರ್ ಅಂತಾ ಹಾಕುವುದಿಲ್ಲ ಎಂದು ಬಹಿರಂಗವಾಗಿ ನಿರಾಕರಿಸುತ್ತಾರೆ. ದರ ಪರಿಷ್ಕರಣೆ ಮೊದಲು ಆಟೋ ಚಾಲಕರು ಮೀಟರ್ ಹಾಕುವುದು ಕಡ್ಡಾಯಗೊಳಿಸಬೇಕು. ಮೀಟರ್ ಹಾಕದ ಆಟೋ ಚಾಲಕ ಪರವಾನಗಿ ರದ್ದು ಮಾಡುವಂತಹ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಸಾರ್ವಜನಿಕರು ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಪ್ರಯಾಣಿಕರ ಮನವಿಗೆ ಸರ್ಕಾರ ಸ್ಪಂದಿಸುವುದೇ?
