Viral news: ರಜೆ ಕೊಡುವ ವಿಚಾರಕ್ಕೆ ಬಳ್ಳಾರಿ ಎಸ್ಪಿ- ತೋರಣಗಲ್ ಡಿವೈಎಸ್ಪಿ ಪತ್ರ ಸಮರ!
- ಬಳ್ಳಾರಿ ಎಸ್ಪಿ- ತೋರಣಗಲ್ ಡಿವೈಎಸ್ಪಿ ಪತ್ರ ಸಮರ
- 30 ದಿನದ ರಜೆ ಬೇಡಿಕೆಗೆ ಬರೀ 5 ದಿನ ರಜೆ ನೀಡಿದ್ದಾರೆ: ಡಿವೈಎಸ್ಪಿ
- ಎಸ್ಪಿ ವಿರುದ್ಧ ತಾರತಮ್ಯ, ಕಿರುಕುಳ, ಸುಳ್ಳು, ಮೋಸ, ಮಾನಸಿಕ ಹಿಂಸೆಯ ಆರೋಪ
ಬಳ್ಳಾರಿ (ಜೂ.22) : ರಜೆ ವಿಚಾರವಾಗಿ ಬಳ್ಳಾರಿ ಎಸ್ಪಿ ವಿರುದ್ಧ ತೋರಣಗಲ್ ವಲಯದ ಡಿವೈಎಸ್ಪಿ ಎಸ್.ಎಸ್. ಕಾಶಿ ಅವರು ಪತ್ರ ಸಮರ ಸಾರಿದ್ದಾರೆ.
30 ದಿನಗಳ ರಜೆ ಬೇಡಿಕೆಗೆ ಬರೀ 5 ದಿನಗಳನ್ನು ಮಾತ್ರ ನೀಡಲಾಗಿದೆ. 5 ದಿನ ರಜೆ ಪಡೆದು ಮರಳಿ ಕೆಲಸ ಮಾಡಬೇಕು ಎಂದಾದಲ್ಲಿ ಮುಂದಾಗುವ ಅವಘಡ, ಅಚಾತುರ್ಯಗಳಿಗೆ ನಾನು ಹೊಣೆಯಲ್ಲ. ಒಂದು ವೇಳೆ ಏನೇ ಆಗಲಿ ಜವಾಬ್ದಾರಿ ಹೊತ್ತುಕೊಳ್ಳುವುದಾಗಿ ಹೇಳಿದರೆ ನಿಮ್ಮ ಒತ್ತಡದ ನಡುವೆಯೂ ಕೆಲಸ ನಿರ್ವಹಿಸಲು ಸಿದ್ಧನಿದ್ದೇನೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರಿಗೆ ಬರೆದಿರುವ ಪತ್ರದಲ್ಲಿ ಡಿವೈಎಸ್ಪಿ ತಿಳಿಸಿದ್ದಾರೆ.
ತೋರಣಗಲ್ ವಲಯ ಡಿವೈಎಸ್ಪಿ ಎಸ್.ಎಸ್. ಕಾಶಿ(SS Kashi DYSP toranagal) ಅವರು 30 ದಿನಗಳ ರಜೆ ನೀಡಬೇಕು ಎಂದು ಮೇ 25ರಂದು ಎಸ್ಪಿ ಅವರಿಗೆ ಪತ್ರ ಬರೆದಿದ್ದು, ಇದಕ್ಕೆ ಪ್ರತಿಯಾಗಿ ಜೂನ್ 7 ರಂದು ಎಸ್ಪಿ ಕಚೇರಿಯಿಂದ ಬರೀ 5 ದಿನಗಳು ರಜೆ ನೀಡಿರುವುದು ಗೊತ್ತಾಗಿದೆ. ಇದಕ್ಕೆ ಪ್ರತಿಯಾಗಿ ಎಸ್ಪಿ ಅವರಿಗೆ ಪತ್ರ ಬರೆದಿರುವ ಅವರು, ಇದೇ ಪತ್ರವನ್ನು ಮೇಲಧಿಕಾರಿಗಳಿಗೂ ರವಾನಿಸಿದ್ದಾರೆ.
KMF: ಭೀಮಾನಾಯ್ಕಗೆ ಒಲಿದ ಕೆಎಂಎಫ್ ಅಧ್ಯಕ್ಷಗಿರಿ!...
‘30 ದಿನಗಳ ರಜೆ ಕೋರಿದ್ದೆ. 5 ದಿನಗಳ ಪರಿವರ್ತಿತ ರಜೆಯನ್ನು ಮಂಜೂರು ಮಾಡಿದ್ದೀರಿ. ಉಳಿದ 25 ದಿನಗಳ ರಜೆ ಮಂಜೂರು ಮಾಡಲು ತಮಗಿದ್ದ ತೊಂದರೆ, ತೊಡಕು, ಅಸಹಾಯಕತೆ ಅಥವಾ ಅನಿವಾರ್ಯತೆ ಬಗ್ಗೆ ತಿಳಿಸದೆ ಇರುವುದು ಆಶ್ಚರ್ಯವನ್ನುಂಟು ಮಾಡಿದೆ. ನೀವು ಕಣ್‌ತಪ್ಪಿನಿಂದ 5 ದಿನ ಪರಿವರ್ತಿತ ರಜೆ ಮಂಜೂರು ಮಾಡಿದ್ದೀರೋ ಅಥವಾ ಉದ್ದೇಶಪೂರ್ವಕವಾಗಿಯೇ ರಜೆಯನ್ನು ತಡೆ ಹಿಡಿದಿದ್ದೀರೋ ಅಥವಾ ನನ್ನ ಖಾತೆಯಲ್ಲಿ ರಜೆಯ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ನಮೂದಿಸದೆ ಮತ್ತೊಮ್ಮೆ ತಮ್ಮ ನಿರ್ಲಕ್ಷ ್ಯ ಆಡಳಿತ ವೈಖರಿಯನ್ನು ಪ್ರದರ್ಶಿಸಿದ್ದೀರಿ ಎಂದು ನನಗೆ ಅನಿಸುತ್ತಿದೆ’ ಎಂದು ಡಿವೈಎಸ್ಪಿ ಅವರು ಬರೆದ ಪತ್ರದಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ.
‘ವೈಯಕ್ತಿಕ ರಜೆಯ ಕಾರಣಗಳನ್ನು ವಿವರಿಸುವ ಅಗತ್ಯವಿಲ್ಲ ಅಥವಾ ಅನಿವಾರ್ಯತೆ ಇಲ್ಲ ಎಂದು ಭಾವಿಸಿದ್ದೇನೆ. ಆದರೆ, ಇದೀಗ ಅಂತಹ ಅನಿವಾರ್ಯತೆ ಸೃಷ್ಟಿಸಿದ್ದೀರಿ. ನಿಮ್ಮ ಆಡಳಿತದ ತಾರತಮ್ಯ, ಕಿರುಕುಳ, ಸುಳ್ಳು, ಮೋಸದಿಂದಾಗಿ ನೀವು ನನ್ನ ಮಾನಸಿಕ ನೆಮ್ಮದಿಯನ್ನು ಸತತವಾಗಿ ಕದಡುತ್ತಾ ಬಂದಿದ್ದೀರಿ. ನಿಮ್ಮ ಈ ರೀತಿಯ ವರ್ತನೆಯು ಮುಂದುವರಿದು ನಿಮ್ಮ ಅಧೀನದಲ್ಲಿ ಕೆಲಸವನ್ನು ಮುಂದುವರಿಸಿದಲ್ಲಿ ನನಗೆ ಮಾನಸಿಕ ಕ್ಷೋಭೆ ಅಥವಾ ಖಿನ್ನತೆಗೆ ಒಳಗಾಗುವ ಸಂಭವ ಇರುವುದರಿಂದ ಕೆಲಕಾಲ ಮಟ್ಟಿಗಾದರೂ ನಿಮ್ಮ ಕಿರುಕುಳದಿಂದ ದೂರವಾಗಿ ಮನಸ್ಸಿಗೆ ಶಾಂತಿ, ಸದೃಢತೆ ನೆಮ್ಮದಿ ಪಡೆಯುವ ಉದ್ದೇಶಕ್ಕಾಗಿ ನನಗೆ ಯೋಗ, ಧ್ಯಾನ, ಪ್ರಾರ್ಥನೆಯಂತಹ ನಮ್ಮ ಸಂಸ್ಕೃತಿಯ ಸಂಸ್ಕಾರಗಳನ್ನು ರೂಢಿಸಿಕೊಳ್ಳಲು 30 ದಿನಗಳ ರಜೆ ಕೋರಿದ್ದೆ’ ಎಂದಿದ್ದಾರೆ.
Ballari: ಟ್ಯೂಷನ್ ಹೇಳೋ ನೆಪದಲ್ಲಿ ಕರೆಸಿ ಮಕ್ಕಳ ಜೊತೆಗೆ ಅನುಚಿತ ವರ್ತನೆ, ಕಾಮುಕ ಶಿಕ್ಷಕ ಅಮಾನತು
‘ಒಂದು ವೇಳೆ 5 ದಿನ ರಜೆ ಪಡೆದು ಮತ್ತೆ ಕರ್ತವ್ಯಕ್ಕೆ ಬರುವುದು ಅನಿವಾರ್ಯವಾದಲ್ಲಿ ನನ್ನ ಒತ್ತಡ ನಿಭಾಯಿಸುವಿಕೆಯು ಮಿತಿ ಮೀರಿದಲ್ಲಿ ಅದರಿಂದ ಸಾರ್ವಜನಿಕರಿಗಾಗಲಿ, ಅಧೀನ ಸಿಬ್ಬಂದಿಗಳಿಗಾಗಲೀ ಅಥವಾ ನಿಮ್ಮೊಂದಿಗಾಗಲಿ ಅವಘಡ, ಅಚಾತುರ್ಯ ನಡೆದಲ್ಲಿ ನೀವೇ ಹೊಣೆಯಾಗುತ್ತೀರಿ. ಜೂ. 22ರೊಳಗೆ ತಮ್ಮ ನಿರ್ಧಾರ ತಿಳಿಸಿದಲ್ಲಿ ಕರ್ತವ್ಯಕ್ಕೆ ಬರುತ್ತೇನೆ. ಇಲ್ಲವಾದರೆ ಜೂ. 19ರಿಂದ ರಜೆಯ ಮೇಲೆ ತೆರಳುತ್ತಿದ್ದು, ನನ್ನ ಉಲ್ಲೇಖಿತ ಮನವಿಯಂತೆ ನನಗೆ 30 ದಿನಗಳ ರಜೆ ಮಂಜೂರು ಮಾಡುತ್ತೀರಿ ಎಂಬ ನಂಬಿಕೆಯಿಂದ ಹೊರಡುತ್ತಿದ್ದೇನೆ. ತಿಂಗಳ ಬಳಿಕ ಸದೃಢ ಮನಸ್ಸಿನೊಂದಿಗೆ ನಿಮ್ಮ ಒತ್ತಡ, ಕಿರುಕುಳವನ್ನು ನಿಭಾಯಿಸುವ ಶಾಂತಿಮಂತ್ರ ಕಲಿತು ಬರುವ ವಿಶ್ವಾಸದಲಿದ್ದೇನೆ. ಮತ್ತೊಮ್ಮೆ ಕಷ್ಟವಾದಲ್ಲಿ ಮುಂದಿನ ಕಾರ್ಯಕ್ರಮ ಕಾಲಾಯ ತಸ್ಮೆ ೖ ನಮಃ’ ಎಂದು ಪತ್ರದಲ್ಲಿ ಡಿವೈಎಸ್ಪಿ ಎಸ್.ಎಸ್.ಕಾಶಿ ಅವರು ವಿವರಿಸಿದ್ದಾರೆ.
ಈ ಪತ್ರ ಸಮರ ಬಳ್ಳಾರಿ ಜಿಲ್ಲಾ ಪೊಲೀಸ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.