ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿ ₹100 ಕೋಟಿ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ, ಬೆಳಗಾವಿಯ ಹಿಂಡಲಗಾ ಜೈಲಿನ ಕೈದಿ ಜಯೇಶ್ ಪೂಜಾರಿಗೆ ನಾಗಪುರ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೈಲಿನಲ್ಲಿದ್ದೇ ಮೊಬೈಲ್ ಬಳಸಿ ಈ ಕೃತ್ಯ ಎಸಗಿದ್ದ ಎಂಬುದು ತನಿಖೆಯಿಂದ ದೃಢ.

ಬೆಳಗಾವಿ (ಮೇ.16): ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿ ₹100 ಕೋಟಿ ಬೇಡಿಕೆ ಇಟ್ಟ ಪ್ರಕರಣದಲ್ಲಿ ಅಪರಾಧಿ ಜಯೇಶ ಪೂಜಾರಿಗೆ ನಾಗಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆರೋಪಿ ಜಯೇಶ್ ಪೂಜಾರಿ ನಾಗಪುರದ ನಿತಿನ್ ಗಡ್ಕರಿ ಕಚೇರಿಗೆ ಕರೆ ಮಾಡಿ ₹100 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದ. ಹಣ ನೀಡದಿದ್ದರೆ ಬಾಂಬ್ ಸ್ಫೋಟ ನಡೆಸಿ ಗಡ್ಕರಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜಯೇಶ್ ಪೂಜಾರಿ, ಕರ್ನಾಟಕದ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದಾನೆ. ಜೈಲಿನಲ್ಲಿದ್ದಾಗಲೇ ಮೊಬೈಲ್ ಬಳಸಿ ಗಡ್ಕರಿ ಕಚೇರಿಗೆ ಬೆದರಿಕೆ ಕರೆಗಳನ್ನು ಮಾಡಿದ್ದ ಎಂದು ತನಿಖೆಯಲ್ಲಿ ಬಹಿರಂಗಗೊಂಡಿದೆ.

ಪೊಲೀಸ್ ತನಿಖೆ ವೇಳೆ ಜಯೇಶ್ ಪೂಜಾರಿಯಿಂದ ಒಂದು ಡೈರಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಗಡ್ಕರಿ ಕಚೇರಿಯ ದೂರವಾಣಿ ಸಂಖ್ಯೆಗಳು ದಾಖಲಾಗಿದ್ದವು. ಈ ಸಂಖ್ಯೆಯನ್ನು ಆತನ ಸ್ನೇಹಿತೆ ಮಂಜುಳಾ ನೀಡಿದ್ದಾಳೆಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರ ಪ್ರಕಾರ, ಜಯೇಶ ಪೂಜಾರಿ ಹೆಸರು ಮಂಗಳೂರು ಬಾಂಬ್ ಸ್ಫೋಟ ಪ್ರಕರಣದಲ್ಲಿಯೂ ಕೇಳಿಬಂದಿದೆ. ವಿವಿಧ ಕಲಂಗಳ ಅಡಿ ತಪ್ಪಿತಸ್ಥನೆಂದು ತೀರ್ಪು ನೀಡಿದ ನಾಗಪುರ ನ್ಯಾಯಾಲಯ, ಜಯೇಶ್ ಪೂಜಾರಿಗೆ 5 ವರ್ಷಗಳ ಶಿಕ್ಷೆ ವಿಧಿಸಿದೆ.