ಹದಗೆಟ್ಟ ವ್ಯವಸ್ಥೆಯನ್ನು ನಿರೀಕ್ಷೆಗೂ ಮೀರಿದ ವೇಗದಲ್ಲಿ ಸರಿಪಡಿಸಿಕೊಂಡಿರುವ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಇದೀಗ ಇಡೀ ದೇಶದ ಗಮನ ಸೆಳೆದಿದೆ.
ಜಗದೀಶ ವಿರಕ್ತಮಠ
ಬೆಳಗಾವಿ (ಜು.14): ಹದಗೆಟ್ಟ ವ್ಯವಸ್ಥೆಯನ್ನು ನಿರೀಕ್ಷೆಗೂ ಮೀರಿದ ವೇಗದಲ್ಲಿ ಸರಿಪಡಿಸಿಕೊಂಡಿರುವ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಇದೀಗ ಇಡೀ ದೇಶದ ಗಮನ ಸೆಳೆದಿದೆ. ಬೆಳಗಾವಿಯಲ್ಲಿರುವ ಬಿಮ್ಸ್‌ನಲ್ಲಿ ಉತ್ತಮ ಮೂಲಸೌಕರ್ಯ, ಆಡಳಿತ, ಚಟುವಟಿಕೆಗಳು, ಸೇವೆ ರೋಗಿಗಳಿಗೆ ಲಭ್ಯವಾಗುತ್ತಿರುವುದರಿಂದ ದೇಶದ 270ಕ್ಕೂ ಅಧಿಕ ಸರ್ಕಾರಿ ಆಸ್ಪತ್ರೆಗಳ ಪೈಕಿ 12ನೇ ರ್ಯಾಂಕ್ ಪಡೆದುಕೊಂಡಿದೆ. ಒಟ್ಟು 13 ರ್ಯಾಂಕ್‌ಗಳನ್ನು ಮಾತ್ರ ನೀಡಲಾಗಿದ್ದು ಈ ಪಟ್ಟಿಯೊಳಗೆ ಸ್ಥಾನ ಪಡೆದ ರಾಜ್ಯದ ಏಕೈಕ ವೈದ್ಯಕೀಯ ಸಂಸ್ಥೆ ಬಿಮ್ಸ್ ಆಗಿರುವುದು ವಿಶೇಷ.
ದೇಶಾದ್ಯಂತ ಇರುವ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಅಲ್ಲಿ ನೀಡುವ ಸೇವೆ, ಮೂಲಸೌಕರ್ಯ, ಆಡಳಿತ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳನ್ನಿಟ್ಟುಕೊಂಡು ಇಂಡಿಯನ್ ಸೆಂಟರ್ ಫಾರ್ ಅಕಾಡೆಮಿಕ್ ರ್ಯಾಂಕಿಂಗ್ ಆ್ಯಂಡ್ ಎಕ್ಸ್‌ಲೆನ್ಸ್ (ಐಸಿಎಆರ್‌ಇ) ಮತ್ತು ಖಾಸಗಿ ನಿಯತಕಾಲಿಕೆ ಜಂಟಿಯಾಗಿ ಸಮೀಕ್ಷೆ ಕೈಗೊಂಡಿದ್ದವು. ದೆಹಲಿಯ ಏಮ್ಸ್ ಮೊದಲ ಸ್ಥಾನ ಪಡೆದುಕೊಂಡರೆ, ವಾರಾಣಸಿಯ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಬನಾರಸ್ ಹಿಂದೂ ವಿವಿಗೆ ಎರಡನೇ ಸ್ಥಾನ ಪಡೆದುಕೊಂಡಿದೆ.
Belagavi: ವೈದ್ಯಕೀಯ ವಿದ್ಯಾರ್ಥಿಗಳ ಗಲಾಟೆ: 15 ವಿದ್ಯಾರ್ಥಿಗಳು ಸಸ್ಪೆಂಡ್!
ಏನೇನು ಮಾನದಂಡ?: ಅಧ್ಯಯನದ ವೇಳೆ ಮೂಲಸೌಕರ್ಯ, ಪ್ರವೇಶ, ಆಡಳಿತ, ಶೈಕ್ಷಣಿಕ, ಆಸ್ಪತ್ರೆಯ ಹೊರಗಿನ ಸಾಮುದಾಯಕ ಚಟುವಟಿಕೆ (ಔಟ್‌ರೀಚ್) ಹಾಗೂ ಉದ್ಯೋಗಗಳನ್ನು ಮಾನದಂಡವಾಗಿ ಇಟ್ಟುಕೊಳ್ಳಲಾಗಿತ್ತು. ಅಧ್ಯಯನದ ವೇಳೆ ಇಷ್ಟುವರ್ಷಗಳ ಕಾಲ ಲೆಕ್ಕಕ್ಕೆ ಇಲ್ಲದ ಬಿಮ್ಸ್‌ನ ಆಡಳಿತ ಮತ್ತು ಸೇವೆಯಲ್ಲಿ ಗಣನೀಯ ಬದಲಾವಣೆಯನ್ನು ಗಮನಿಸಲಾಗಿದೆ.
ಹಿಂದೆ ಬಿದ್ದಿದ್ದ ಬಿಮ್ಸ್: ಕಳೆದ 17 ವರ್ಷಗಳ ಹಿಂದೆ ಬಿಮ್ಸ್ ಆರಂಭಗೊಂಡಿತು. ಕೇವಲ ಎರಡು ವರ್ಷಗಳ ಹಿಂದೆ ಬೆಳಗಾವಿ ಜಿಲ್ಲಾಸ್ಪತ್ರೆ ಅಥವಾ ಬಿಮ್ಸ್‌ನ ಅವ್ಯವಸ್ಥೆ ನೋಡಿದರೆ ಎಂತಹ ಪರಿಸ್ಥಿತಿಯಲ್ಲಿಯೂ ಚಿಕಿತ್ಸೆಗಾಗಿ ರೋಗಿಗಳು ಬರಲು ಹಿಂದೇಟು ಹಾಕುತ್ತಿದ್ದರು. ಕೋವಿಡ್ ವೇಳೆಯಂತೂ ಬಿಮ್ಸ್ ವಿರುದ್ಧ ಜಿಲ್ಲೆಯ ರಾಜಕಾರಣಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರನ್ನು ಬಿಮ್ಸ್‌ನ ವಿಶೇಷ ಆಡಳಿತಾಧಿಕಾರಿಯನ್ನಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇಮಕ ಮಾಡಿದ್ದರು. ಬಿಸ್ವಾಸ್ ಆಡಳಿತದಲ್ಲಿ ಹಲವು ಸುಧಾರಣೆಗಳನ್ನು ತಂದಿದ್ದರ ಪರಿಣಾಮ ಈಗ ಬಿಮ್ಸ್ ಉತ್ತಮ ರಾರಯಂಕ್ ಪಡೆದಿದೆ.
ಬಿಮ್ಸ್‌ಗೆ 540 ಅಂಕ: ಐಸಿಎಆರ್‌ಇ 5 ವಿಭಾಗಗಳಲ್ಲಿ ಒಟ್ಟು 1000 ಅಂಕಗಳ ನಿಗದಿ ಮಾಡಿದ್ದು ಬಿಮ್ಸ್ 540.24 ಪಡೆದುಕೊಂಡಿದೆ. ಅಕಾಡೆಮಿಕ್ ಆ್ಯಂಡ್ ರಿಸಚ್‌ರ್ ಎಕ್ಸಲೆನ್ಸ್‌ನಲ್ಲಿ 300ರಲ್ಲಿ 226.64, ಇಂಡಸ್ಟ್ರೀ ಇಂಟರ್‌ಫೇಸ್ ಆ್ಯಂಡ್ ಪ್ಲೇಸ್‌ಮೆಂಟ್‌ನಲ್ಲಿ 200/28.82, ಇನ್‌ಫ್ರಾಸ್ಟ್ರಕ್ಚರ್ ಆ್ಯಂಡ್ ಫ್ಯಾಸಿಲಿಟಿಸ್‌ನಲ್ಲಿ 200ರಲ್ಲಿ 182.28, ಗವರ್ನನ್ಸ್ ಆ್ಯಂಡ್ ಆಡ್ಮಿಷನ್ಸ್‌ನಲ್ಲಿ 150ರಲ್ಲಿ 71.66, ಔಟ್‌ರೀಚ್‌ನಲ್ಲಿ 150ರಲ್ಲಿ 30.83 ಅಂಕ ಪಡೆದಿದೆ.
Belagavi: ವರದಕ್ಷಿಣೆ ರೂಪದಲ್ಲಿ ನೀರಿನ ಟ್ಯಾಂಕರ್ ಪಡೆದ ವರ: ಏಕೆ ಗೊತ್ತಾ?
ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಬೆಂಬಲದ ಜತೆಗೆ ಕಾರ್ಯದಿಂದ ಉತ್ತಮ ಸಾಧನೆ ಸಾಧ್ಯವಾಗಿದೆ. ಇಲ್ಲಿನ ಸಿಬ್ಬಂದಿಗೆ ಉತ್ತಮ ಮಾರ್ಗ ತೋರಿಸುವ ಕಾರ್ಯವನ್ನು ಮಾತ್ರ ನಾನು ಮಾಡಿದ್ದೇನೆ. ಸ್ವಲ್ಪ ಕಡಿಮೆ ಅಂಕ ಪಡೆದುಕೊಳ್ಳಲಾಗಿರುವ ಕೆಲವು ವಿಭಾಗಗಳಲ್ಲಿ ಸುಧಾರಿಸುವ ಜತೆಗೆ ಹೆಚ್ಚಿನ ಅಂಕ ಪಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
-ಅಮ್ಲಾನ್ ಆದಿತ್ಯ ಬಿಸ್ವಾಸ್, ಬಿಮ್ಸ್ ವಿಶೇಷ ಆಡಳಿತಾಧಿಕಾರಿ, ಪ್ರಾದೇಶಿಕ ಆಯುಕ್ತ
