ಬೆಂಗಳೂರು, (ಮೇ.04): ಕೊರೋನಾ ವಾರಿಯರ್ಸ್ ಆಗಿ ಮನೆ-ಮಕ್ಕಳು ಬಿಟ್ಟು ಹಗಲಿರುಳು ಸೇವೆ ಸಲ್ಲಿಸುತ್ತಿದ್ದ ರಾಜ್ಯ ಪೊಲೀಸ್ ಇಲಾಖೆಯ ಪೇದೆಯೊಬ್ಬರಿಗೆ ಕೊರೋನಾ ಸೋಂಕು ತಗುಲಿದೆ.

ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್‌ಗೆ ಕೊರೋನಾ ವಕ್ಕರಿಸಿಕೊಂಡಿದ್ದು, 650ನೇ ಸೋಂಕಿತ ಬೆಂಗಳೂರಿನ 40 ವರ್ಷದ ಪೊಲೀಸ್ ಪೇದೆ. ಇದರಿಂದ ಠಾಣೆಯ ಇನ್ನುಳಿದ ಪೊಲೀಸರಿಗೆ ಆತಂಕ ಶುರುವಾಗಿದೆ. 

ಕೊರೋನಾ ಭೀತಿ: ಕ್ವಾರಂಟೈನ್‌ನಲ್ಲಿ ಪೊಲೀಸ್‌ ಪೇದೆ!

ಹೊಂಗಸಂದ್ರದಲ್ಲಿ ಕೊರೋನಾ ಸೋಂಕಿತರ ಉಪಟಳ ಹೆಚ್ಚಾಗಿದ್ದಾಗ ಬಂದೋಬಸ್ತ್‌ಗೆ ತೆರಳಿದ್ದರು. ಆ ವೇಳೆ ಪೇದೆಗೆ ಕೊರೋನಾ ಅಟ್ಯಾಕ್ ಆಗಿದೆ ಎಂದು ತಿಳಿದುಬಂದಿದೆ.

ಇನ್ನು ಇವರ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಪತ್ತೆ ಮಾಡಿ ಕ್ವಾರಂಟೈನ್‌ ಮಾಡುವ ಕೆಲಸ ನಡೆದಿದೆ. ಅದೃಷ್ಟವಶಾತ್ ಸೋಂಕಿತ ಪೇದೆ ಕರ್ತವ್ಯದಿಂದ ಹಾಗೆ ಮನೆಗೆ ತೆರಳಿದ್ದು, ಪೊಲೀಸ್ ಠಾಣೆಗೆ ಹೋಗಿಲ್ಲವೆಂದು ಸಮಾಧಾನಕರ ಸಂಗತಿ.

ರಾಜ್ಯದಲ್ಲಿ ಪೊಲೀಸರಿಗೆ ಸೋಂಕು ತಗುಲಿರುವುದು ಇದು ಎರಡನೇ ಪ್ರಕರಣವಾಗಿದೆ. ಬೇಗೂರು ಠಾಣೆಯ ಪೇದೆ ಕೊರೋನಾ ತಗುಲಿರುವುದಕ್ಕೂ ಮುನ್ನ ಬಾಗಲಕೋಟೆಯ ಮುದೋಳ್ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್‌ಗೆ ಸೋಂಕು ದೃಢವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.