ಉದ್ಘಾಟನೆಗೂ ಮೊದಲೇ ಶಿವಾನಂದ ಫ್ಲೈಓವರಲ್ಲಿ ಅಲೈನ್‌ಮೆಂಟ್‌ ಸಮಸ್ಯೆ -ಡೌನ್‌ ರಾರ‍ಯಂಪ್‌ನಲ್ಲಿ ಕಿತ್ತುಹೋದ ರಸ್ತೆ ಕಳಪೆ ಕಾಮಗಾರಿ ಆರೋಪ

ಬೆಂಗಳೂರು (ಸೆ.19) : ನಗರದ ಶಿವಾನಂದ ವೃತ್ತ ಮೇಲ್ಸೇತುವೆಯ ಕಾಮಗಾರಿ ಮುಕ್ತಾಯಗೊಂಡ ನಂತರವೂ ಒಂದಲ್ಲ ಒಂದು ದುರಸ್ತಿ ಕಾಮಗಾರಿಯನ್ನು ಬಿಬಿಎಂಪಿ ನಡೆಸುತ್ತಿದ್ದು, ಉದ್ಘಾಟನೆಗೂ ಮುನ್ನ ಅಲೈನ್‌ಮೆಂಟ್‌ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಫ್ಲೈಓವರ್‌ನ ಮೇಲ್ಪದರ ಕಿತ್ತು ಹಾಕಲಾಗಿದೆ.

ಬೆಂಗಳೂರು: ಶಿವಾನಂದ ಫ್ಲೈಓವರ್‌ ತಿಂಗಳಾಂತ್ಯಕ್ಕೆ ಸಂಚಾರಕ್ಕೆ ಮುಕ್ತ?

ಈಗಾಗಲೇ ಶೇಷಾದ್ರಿಪುರದಿಂದ ರೇಸ್‌ ಕೋರ್ಸ್‌ ಕಡೆ ಸಾಗುವ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ರೇಸ್‌ ಕೋರ್ಸ್‌ನಿಂದ ಶೇಷಾದ್ರಿಪುರ ರೈಲ್ವೆ ಅಂಡರ್‌ ಪಾಸ್‌ ಕಡೆ ಸಾಗುವ ಮಾರ್ಗದಲ್ಲಿ ಕಳೆದ ಬುಧವಾರ ಕೆಲ ಸಮಯ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಅವಕಾಶ ನೀಡಿತ್ತು. ಈ ವೇಳೆ ಡೌನ್‌ ರಾರ‍ಯಂಪ್‌ನಲ್ಲಿ ಅಲೈನ್‌ಮೆಂಟ್‌ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಮತ್ತೆ ದುರಸ್ತಿ ಮಾಡಬೇಕಾಗಿದೆ. ಈ ಹಿಂದೆಯೂ ರಾರ‍ಯಂಪ್‌ಗಳ ಜೋಡಣೆಯಲ್ಲಿ ಕೆಲವು ಸಮಸ್ಯೆ ಉಂಟಾಗಿತ್ತು ಎಂದು ದುರಸ್ತಿ ಮಾಡಲಾಗಿತ್ತು. ಕಳಪೆ ಕೆಲಸದಿಂದ ಈ ರೀತಿ ಪದೇ ಪದೇ ದುರಸ್ತಿ ಕಾರ್ಯ ನಡೆಸಬೇಕಾಗುತ್ತಿದೆ ಎಂಬ ಆರೋಪ ವಾಹನ ಸವಾರರು ಮತ್ತು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್‌, ಕೊನೆಯ ಕ್ಷಣದಲ್ಲಿ ಮೇಲ್ಸೇತುವೆಯ ವಿನ್ಯಾಸವನ್ನು ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಿದ ಪರಿಣಾಮ ಅಲೈನ್ಮೆಂಟ್‌ನಲ್ಲಿ ವ್ಯತ್ಯಾಸವಾಗಿದೆ. ಹಾಗಾಗಿ, ರೇಸ್‌ ಕೋರ್ಸ್‌ನಿಂದ ಶೇಷಾದ್ರಿಪುರ ಸಂಚರಿಸುವ ಡೌನ್‌ ರಾರ‍ಯಂಪ್‌ನಲ್ಲಿ ಡಾಂಬರ್‌ ಮೇಲ್ಪದರ ತೆಗೆದು ಸರಿಪಡಿಸಲಾಗುತ್ತಿದೆ. ಡಾಂಬರೀಕರಣ ಮಾಡಿದರೆ ಸಮಸ್ಯೆ ಪರಿಹಾರವಾಗಲಿದೆ ಎಂದು ತಿಳಿಸಿದ್ದಾರೆ.

ಶಿವಾನಂದ ವೃತ್ತದ ಮೇಲ್ಸೇತುವೆ ಬಳಿಯಲ್ಲಿ ಫುಟ್‌ಪಾತ್‌ ಒತ್ತುವರಿ

ಸೋಮವಾರ ಐಐಎಸ್ಸಿ ವರದಿ ಲಭ್ಯ?: ಮೇಲ್ಸೇತುವೆಯ ಗುಣಮಟ್ಟದ ಬಗ್ಗೆ ಆರೋಪ ಕೇಳಿ ಬಂದಿದ ಹಿನ್ನೆಲೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮೂಲಕ ಗುಣಮಟ್ಟಪರೀಕ್ಷೆ ನಡೆಸಿದ್ದು, ಸೋಮವಾರ ಅಥವಾ ಮಂಗಳವಾರ ವರದಿ ಸಿಗಲಿದೆ. ನಂತರ ಮೇಲ್ಸೇತುವೆ ಉದ್ಘಾಟನೆ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಲೋಕೇಶ್‌ ಮಾಹಿತಿ ನೀಡಿದ್ದಾರೆ.