ಆಸ್ತಿ ತೆರಿಗೆ ಸಂಗ್ರಹದಲ್ಲಿ ಬಿಬಿಎಂಪಿ ದಾಖಲೆ; ಡಿಸೆಂಬರ್ ಅಂತ್ಯಕ್ಕೆ 3,273 ಕೋಟಿ!
ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಿರುವ ಬಿಬಿಎಂಪಿಯು ಡಿಸೆಂಬರ್ ಅಂತ್ಯದ ವೇಳೆಗೆ ಬರೋಬ್ಬರಿ ₹3,273 ಕೋಟಿ ಆಸ್ತಿ ತೆರಿಗೆ ವಸೂಲಿ ಮಾಡಿದೆ. ತನ್ಮೂಲಕ ಕಳೆದ 2022ರ ಡಿಸೆಂಬರ್ ಅಂತ್ಯಕ್ಕೆ ಹೋಲಿಕೆ ಮಾಡಿದರೆ ₹532 ಕೋಟಿ ಹೆಚ್ಚಿನ ಮೊತ್ತದ ಆಸ್ತಿ ತೆರಿಗೆ ವಸೂಲಿಯಾಗಿದೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಜ.8) : ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಿರುವ ಬಿಬಿಎಂಪಿಯು ಡಿಸೆಂಬರ್ ಅಂತ್ಯದ ವೇಳೆಗೆ ಬರೋಬ್ಬರಿ ₹3,273 ಕೋಟಿ ಆಸ್ತಿ ತೆರಿಗೆ ವಸೂಲಿ ಮಾಡಿದೆ. ತನ್ಮೂಲಕ ಕಳೆದ 2022ರ ಡಿಸೆಂಬರ್ ಅಂತ್ಯಕ್ಕೆ ಹೋಲಿಕೆ ಮಾಡಿದರೆ ₹532 ಕೋಟಿ ಹೆಚ್ಚಿನ ಮೊತ್ತದ ಆಸ್ತಿ ತೆರಿಗೆ ವಸೂಲಿಯಾಗಿದೆ.
ಆರ್ಥಿಕ ವರ್ಷ ಅಂತ್ಯಕ್ಕೆ ಇನ್ನೂ ಮೂರು ತಿಂಗಳು ಬಾಕಿ ಇದ್ದು, ಆ ವೇಳೆಗೆ 2023-24ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ₹4,412 ಕೋಟಿ ವಸೂಲಿ ಮಾಡುವ ಗುರಿ ಮುಟ್ಟುವ ಪಣವನ್ನು ಬಿಬಿಎಂಪಿ ಕಂದಾಯ ವಿಭಾಗ ತೊಟ್ಟಿದೆ.
ಬೆಂಗಳೂರಿನ ವಾಣಿಜ್ಯ ಮಳಿಗೆಗಳಿಗೆ ದೊಡ್ಡ ಕನ್ನಡ ನಾಮಫಲಕ ಕಡ್ಡಾಯ: ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದು!
ಆರಂಭದಿಂದಲೂ ಭರ್ಜರಿ ವಸೂಲಿ:
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್ ನಲ್ಲಿ ಕೇವಲ 1,225 ಕೋಟಿ ರು. ಆಸ್ತಿ ತೆರಿಗೆ ವಸೂಲಿಯಾಗಿತ್ತು. ಉಳಿದಂತೆ ಮೇನಿಂದ ಈವರೆಗೆ ಕಳೆದ 2022ರ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ, ಪ್ರತಿ ತಿಂಗಳೂ ಹೆಚ್ಚಿನ ಪ್ರಮಾಣದ ತೆರಿಗೆ ವಸೂಲಿ ಆಗಿದೆ. ಹಾಗಾಗಿ, ಕಳೆದ 2022ರ ಡಿಸೆಂಬರ್ ಅವಧಿಯಲ್ಲಿ ಸಂಗ್ರಹವಾಗಿದ್ದ ಪ್ರಮಾಣಕ್ಕಂತ 532 ಕೋಟಿ ರು. ಹೆಚ್ಚುವರಿ ವಸೂಲಿಯಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕ ಮೊತ್ತದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿ ತಯಾರಿಸಿ ವಸೂಲಿ ಮಾಡಲಾಗುತ್ತಿದೆ. ಕಳೆದ ಒಂದೂವರೆ ತಿಂಗಳಿನಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರ ಆಸ್ತಿಗಳನ್ನು ಸೀಲಿಂಗ್ ಮಾಡಲಾಗುತ್ತಿದೆ.
ಜತೆಗೆ, ಕಂದಾಯ ವಸೂಲಿ ಅಧಿಕಾರಿಗಳಿಗೆ ನಿರ್ದಿಷ್ಟ ಗುರಿ ನೀಡಲಾಗಿದೆ. ಬೆಸ್ಕಾಂ ಸೇರಿದಂತೆ ವಿವಿಧ ಸಾರ್ವಜನಿಕ ಇಲಾಖೆಗೆ ನೀಡಿದ ದಾಖಲೆ ಆಧರಿಸಿ ಪರಿಶೀಲಿಸುವುದು. ಹೆಚ್ಚಿನ ಪ್ರಮಾಣ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರನ್ನು ಗುರುತಿಸಿ ವಸೂಲಿ ಮಾಡಲಾಗಿದೆ. ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಗೆ ಇರುವ ವ್ಯವಸ್ಥೆಯ ಸುಧಾರಣೆಯಿಂದ ಆಸ್ತಿ ತೆರಿಗೆ ವಸೂಲಿ ಪ್ರಮಾಣದಲ್ಲಿ ಹೆಚ್ಚಳವಾಗಿದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಹದೇವಪುರದಲ್ಲಿ ಹೆಚ್ಚು ಸಂಗ್ರಹ
ಮಹದೇವಪುರದಿಂದ ಬಿಬಿಎಂಪಿಯ ಶೇ.25 ರಷ್ಟು ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹವಾಗಲಿದೆ. ಕಳೆದ ವರ್ಷ 900 ಕೋಟಿ ರು.ಗೂ ಅಧಿಕ ಮೊತ್ತ ಸಂಗ್ರಹವಾಗಿತ್ತು. ಈ ಬಾರಿ ಮಹದೇವಪುರದಲ್ಲಿ ಹೆಚ್ಚಿನ ಒತ್ತು ನೀಡಿ ವಸೂಲಿ ಮಾಡಲಾಗುತ್ತಿದೆ. 2022ರ ಡಿಸೆಂಬರ್ ಅಂತ್ಯಕ್ಕೆ ಮಹದೇವಪುರದಲ್ಲಿ 692 ಕೋಟಿ ರು. ವಸೂಲಿ ಆಗಿತ್ತು. ಈಬಾರಿ 892 ಕೋಟಿ ರು. ವಸೂಲಿ ಮಾಡಲಾಗಿದೆ. ಸುಮಾರು 200 ಕೋಟಿ ರು. ವಸೂಲಿ ಮಾಡಲಾಗಿದೆ.
₹60 ಕೋಟಿ ಬಾಕಿ
ಕಳೆದ 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ ಒಟ್ಟಾರೆ 3,332 ಕೋಟಿ ರು, ಆಸ್ತಿ ತೆರಿಗೆ ಸಂಗ್ರಹಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಈಗಾಗಲೇ 3273 ಕೋಟಿ ರು. ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕಿಂತ ಹೆಚ್ಚಿನ ತೆರಿಗೆ ಸಂಗ್ರಹಕ್ಕೆ 60 ಕೋಟಿ ರು. ಬೇಕಾಗಲಿದೆ. ಮುಂದಿನ 10 ದಿನದೊಳಗೆ 60 ಕೋಟಿ ರು. ಸಂಗ್ರಹವಾಗಲಿದೆ ಎಂದು ಕಂದಾಯ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
--ಬಾಕ್ಸ್--
₹6 ಸಾವಿರ ಕೋಟಿ ಗುರಿ
ಬಿಬಿಎಂಪಿಯು 2024-25ನೇ ಸಾಲಿನ ಬಜೆಟ್ ತಯಾರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ 6 ಸಾವಿರ ಕೋಟಿ ರು. ತೆರಿಗೆ ವಸೂಲಿ ಮಾಡುವ ಗುರಿ ಹಾಕಿಕೊಂಡಿರುವುದಾಗಿ ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಮನೆ ಬಾಗಿಲಿಗೆ ಬಂದ ಸರ್ಕಾರಕ್ಕೆ ಸಾವಿರಾರು ದೂರುಗಳ ಸುರಿಮಳೆ: ನೋಡಲ್ ಅಧಿಕಾರಿ ನಿಯೋಜಿಸಿದ ಡಿಸಿಎಂ ಡಿಕೆ. ಶಿವಕುಮಾರ್
2022-23 ಹಾಗೂ 2023-24ರ ಆಸ್ತಿ ತೆರಿಗೆ ವಸೂಲಿ ವಿವರ (ಏಪ್ರಿಲ್-ಜನವರಿ)
ತಿಂಗಳು 2022-23 2023-24 (ಕೋಟಿ ₹)
- ಏಪ್ರಿಲ್ ₹1,529.25 ₹1,225.99
- ಮೇ ₹532.69 ₹554.11
- ಜೂನ್ ₹145.77 ₹465.91
- ಜುಲೈ ₹129.16 ₹201.26
- ಆಗಸ್ಟ್ ₹86.46 ₹120.48
- ಸೆಪ್ಟಂಬರ್ ₹79.80 ₹125.20
- ಅಕ್ಟೋಬರ್ ₹70.45 ₹226.70
- ನವೆಂಬರ್ ₹98.44 ₹141.76
- ಡಿಸೆಂಬರ್ ₹71.26 ₹173.28
- ಜನವರಿ ₹5.83 ₹38.23
- ಒಟ್ಟು ₹2,749.10 ₹3,272.91