ಬೆಂಗಳೂರು[ಫೆ.13]: ಬಿಬಿಎಂಪಿ ಅಧಿಕಾರಿಗಳೇ ಗುತ್ತಿಗೆದಾರರೊಬ್ಬರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ .4 ಕೋಟಿ ಲಪಟಾಯಿಸಿರುವ ಘಟನೆ ಬಿಬಿಎಂಪಿ ಮುಖ್ಯಲೆಕ್ಕಾಧಿಕಾರಿ ಕಚೇರಿಯಲ್ಲಿ ನಡೆದಿದೆ.

ಹಣ ಲಪಟಾಯಿಸಿದ ಬಿಬಿಎಂಪಿ ಮುಖ್ಯಲೆಕ್ಕಾಧಿಕಾರಿಯ ಕಚೇರಿಯ ಲೆಕ್ಕ ಅಧೀಕ್ಷಕರಾದ ಅನಿತಾ ಹಾಗೂ ರಾಮಮೂರ್ತಿ ಮತ್ತು ಇದೇ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ಎಂಬುವವರ ವಿರುದ್ಧ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ಆರ್‌.ಗೋವಿಂದರಾಜು ಬುಧವಾರ ಬಿಎಂಟಿಎಫ್‌ನಲ್ಲಿ ದೂರು ದಾಖಲಿಸಿದ್ದು, ಮೂವರು ಪಾಲಿಕೆ ಅಧಿಕಾರಿಗಳನ್ನು ಬಿಎಂಟಿಎಫ್‌ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಸರ್ವಜ್ಞನಗರದ ನಿವಾಸಿ ಚಂದ್ರಪ್ಪ ಎಂಬ ಗುತ್ತಿಗೆದಾರರ ಬಿಬಿಎಂಪಿಯಲ್ಲಿ .4 ಕೋಟಿ ಮೊತ್ತದ ಕಾಮಗಾರಿ ಮಾಡಿ ಮುಗಿಸಿದ್ದರು. ಪಾಲಿಕೆಯಲ್ಲಿ ಹಿರಿತನದ ಆಧಾರದ ಮೇಲೆ ಗುತ್ತಿಗೆದಾರರಿಗೆ ಬಿಲ್‌ ಪಾವತಿಸುವ ಪದ್ಧತಿ ಇರುವುದರಿಂದ ಕಾಮಗಾರಿ ಮುಗಿಸಿದ ಚಂದ್ರಪ್ಪ ಬಿಬಿಎಂಪಿ ಕಡೆ ಆಗಮಿಸಿರಲಿಲ್ಲ.

ಇದನ್ನು ದುರುಪಯೋಗ ಪಡಿಸಿಕೊಂಡ ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿಯ ಕಚೇರಿಯ ಅಧಿಕಾರಿಗಳಾದ ಅನಿತಾ, ರಾಮಮೂರ್ತಿ ಹಾಗೂ ರಾಘವೇಂದ್ರ ವಿಜಯನಗರದ ಕೋ- ಅಪರೇಟಿವ್‌ ಬ್ಯಾಂಕ್‌ ಒಂದರಲ್ಲಿ ಗುತ್ತಿಗೆದಾರ ಚಂದ್ರಪ್ಪ ಅವರಿಗೆ ಎಲ್ಲ ರೀತಿ ಹೊಲಿಕೆ ಆಗುವ ನಕಲಿ ಬ್ಯಾಂಕ್‌ ಖಾತೆ ಸೃಷ್ಟಿಸಿದ್ದಾರೆ. ಜತೆಗೆ, ಲೆಕ್ಕಾಧಿಕಾರಿ ಕಚೇರಿಯ ಸಾಫ್ಟ್‌ವೇರ್‌ನಲ್ಲಿ ಗುತ್ತಿಗೆದಾರರ ಬ್ಯಾಂಕ್‌ ಖಾತೆಯ ಸಂಖ್ಯೆ ಹಾಗೂ ಐಎಫ್‌ಎಸ್‌ಸಿ ಕೋಡ್‌ ಸಂಖ್ಯೆಯಲ್ಲಿ ಲೋಪ ದೋಷವಿದ್ದರೆ ಸರಿಪಡಿಸಲು ಇರುವ ಅವಕಾಶದ ದುರ್ಲಾಭ ಪಡೆದು ತಾವು ಸೃಷ್ಟಿಸಿ ನಕಲಿ ಬ್ಯಾಂಕ್‌ ಖಾತೆ ಸಂಖ್ಯೆ ನಮೂದಿಸಿದ್ದಾರೆ. ಅನಂತರ ಖಾತೆಗೆ .4 ಕೋಟಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.

ಈ ನಡುವೆ ತಮ್ಮ ಕೆಲಸದ ಹಣ ಇನ್ನು ಬಿಡುಗಡೆಯಾಗದ ಬಗ್ಗೆ ಗುತ್ತಿಗೆದಾರ ಚಂದ್ರಪ್ಪ ವಿಚಾರಣೆ ನಡೆಸಿದಾಗ ಈ ಗೋಲ್‌ಮಾಲ್‌ ಬೆಳಕಿಗೆ ಬಂದಿದೆ. ಪ್ರಸ್ತುತ ಈ ಮೂರು ಮಂದಿ ವಿರುದ್ಧ ದೂರು ಬಿಎಂಟಿಎಫ್‌ನಲ್ಲಿ ದಾಖಲಿಸಿದೆ ಎಂದು ಬಿಬಿಎಂಪಿ ಮುಖ್ಯಲೆಕ್ಕಾಧಿಕಾರಿ ಆರ್‌.ಗೋವಿಂದರಾಜು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಮುಖ್ಯ ಲೆಕ್ಕಾಧಿಕಾರಿ ಕಚೇರಿ ಅಧಿಕಾರಿಗಳು ಗುತ್ತಿಗೆದಾರರ ಹೆಸರಿನಲ್ಲಿ ನಕಲಿ ಬ್ಯಾಂಕ್‌ ಖಾತೆ ಸೃಷ್ಟಿಮಾಡಿ .4 ಕೋಟಿ ವರ್ಗಾವಣೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಹಾಗಾಗಿ, ಮೂವರು ಅಧಿಕಾರಿಗಳ ವಿರುದ್ಧ ಬಿಎಂಟಿಎಫ್‌ನಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ. ಜತೆಗೆ ಅವರನ್ನು ಅಮಾನತುಗೊಳಿಸಲಾಗಿದೆ. ಯಾವುದೇ ಗುತ್ತಿಗೆದಾರರಿಗೆ ಬಿಲ್‌ ಪಾವತಿ ಮಾಡುವ ಮುನ್ನ ಆಯುಕ್ತರಿಂದ ಅನುಮತಿ ಪಡೆದುಕೊಳ್ಳಬೇಕು. ಆದರೆ, ಅನುಮತಿ ಪಡೆಯದೆ ಹಣ ಬಿಡುಗಡೆ ಮಾಡಿದ್ದಾರೆ. ಮೂಲ ದಾಖಲೆಗಳನ್ನು ಪತ್ತೆಗೆ ಸೂಚನೆ ನೀಡಲಾಗಿದೆ.

-ಬಿ.ಎಚ್‌.ಅನಿಲ್‌ ಕುಮಾರ್‌, ಬಿಬಿಎಂಪಿ ಆಯುಕ್ತ.