Asianet Suvarna News Asianet Suvarna News

ಪ್ರತ್ಯೇಕ ಹಸಿ ಕಸ ಸಂಗ್ರಹ ಟೆಂಡರ್‌ಗೆ ಬಿಬಿಎಂಪಿ ಒಪ್ಪಿಗೆ

45 ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ನಿರ್ಧಾರ| ಮೇಯರ್‌ ಗೌತಮ್‌, ಆಯುಕ್ತ ಮಂಜುನಾಥ್‌ ನೇತೃತ್ವದಲ್ಲಿ ಸಭೆ| ನ್ಯಾಯಾಂಗ ನಿಂದನೆಯಿಂದ ಪಾರಾಗಬೇಕಾದರೆ ಗುತ್ತಿಗೆದಾರರಿಗೆ ತುರ್ತಾಗಿ ಕಾರ್ಯಾದೇಶ ನೀಡಲೇಬೇಕು| ಇದರಿಂದ ಪಾಲಿಕೆಗೆ ಪಾಲಿಕೆಗೆ ಕೋಟ್ಯಂತರ ರು. ಉಳಿತಾಯ|
 

BBMP has Agreed to Separate Garbage Collection Tender
Author
Bengaluru, First Published Aug 8, 2020, 9:15 AM IST

ಬೆಂಗಳೂರು(ಆ.08):  ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆಗಳಿಂದ ಪ್ರತ್ಯೇಕ ಹಸಿ ಕಸ ಸಂಗ್ರಹ ಮಾಡುವ ಟೆಂಡರ್‌ಗೆ ಕಡೆಗೂ ಪಾಲಿಕೆ ಒಪ್ಪಿಗೆ ಸೂಚಿಸಿದ್ದು, ಈ ಸಂಬಂಧ 45 ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ನಿರ್ಧರಿಸಿದೆ.

ಕಸ ವಿಲೇವಾರಿ ಟೆಂಡರ್‌ ಸಂಬಂಧ ಆ.12ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ಇದೆ. ಇದರ ಬೆನ್ನಲ್ಲೇ ಬಿಬಿಎಂಪಿ ಹಸಿ ಕಸ ಸಂಗ್ರಹ ಟೆಂಡರ್‌ಗೆ ಸಮ್ಮತಿ ಸೂಚಿಸಿರುವುದು ಮಹತ್ವ ಪಡೆದುಕೊಂಡಿದೆ. ಕಸ ವಿಲೇವಾರಿ ವಿಚಾರವಾಗಿ ಹಿಂದೆ ಆದೇಶ ಪಾಲಿಸದ ಬಿಬಿಎಂಪಿಗೆ ಹೈಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಮೇಯರ್‌ ಗೌತಮ್‌ ಕುಮಾರ್‌ ಹಾಗೂ ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಟೆಂಡರ್‌ಗೆ ಒಪ್ಪಿಗೆ ಸೂಚಿಸಿ, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ನಿರ್ಧರಿಸಲಾಗಿದೆ. ನ್ಯಾಯಾಂಗ ನಿಂದನೆಯಿಂದ ಪಾರಾಗಬೇಕಾದರೆ ಗುತ್ತಿಗೆದಾರರಿಗೆ ತುರ್ತಾಗಿ ಕಾರ್ಯಾದೇಶ ನೀಡಲೇಬೇಕು ಎಂದು ಅಧಿಕಾರಿಗಳು ಮೇಯರ್‌ಗೆ ಮನವರಿಕೆ ಮಾಡಿದ ಬಳಿಕವೇ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಬೆಂಗಳೂರು: ಹಸಿ ಕಸ ಸಂಗ್ರಹಕ್ಕೆ ಟೆಂಡರ್‌ ಅನಿವಾರ್ಯ

ಮಾಜಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರ ಅವಧಿಯಲ್ಲಿ ನಗರದಲ್ಲಿ ಮನೆಗಳಿಂದ ಪ್ರತ್ಯೇಕ ಹಸಿ ಕಸ ಸಂಗ್ರಹ ಸಂಬಂಧ ಟೆಂಡರ್‌ ಆಹ್ವಾನಿಸಲಾಗಿತ್ತು. ಈ ಟೆಂಡರ್‌ನಲ್ಲಿ 45 ವಾರ್ಡ್‌ಗಳಲ್ಲಿನ ಗುತ್ತಿಗೆದಾರರನ್ನೂ ಅಂತಿಮಗೊಳಿಸಿ ಕಾರ್ಯಾದೇಶ ನೀಡುವುದು ಬಾಕಿಯಿತ್ತು. ಅಂತೆಯೆ 105 ವಾರ್ಡಗಳಲ್ಲಿ ಎ-ಒನ್‌ ಬಿಡ್‌ದಾರರನ್ನು ಗುರುತಿಸಿ ಅವರಿಗೆ ಕಾರ್ಯಾದೇಶ ನೀಡಬೇಕಿತ್ತು. ಈ ನಡುವೆ ಹೊಸ ಮೇಯರ್‌ ಗೌತಮ…ಕುಮಾರ್‌ ಅವರು ಇಂದೋರ್‌ ಮಾದರಿಯಲ್ಲಿ ಒಂದೇ ಬಾರಿಗೆ ಹಸಿ, ಒಣ ಹಾಗೂ ಸ್ಯಾನಿಟೈಸರ್‌ ಕಸ ಸಂಗ್ರಹಕ್ಕೆ ಯೋಜನೆ ರೂಪಿಸಲು ಮುಂದಾಗಿದ್ದರು. ಇದರ ಭಾಗವಾಗಿ ನಗರದ ಆಯ್ದ ಐದು ವಾರ್ಡ್‌ಗಳಲ್ಲಿ ಇಂದೋರ್‌ ಮಾದರಿಯನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗಿತ್ತು.

ನೂತನ ಮೇಯರ್‌ ಅವರ ಈ ನಿರ್ಧಾರಕ್ಕೆ ಆಕ್ಷೇಪ 45 ವಾರ್ಡಗಳ ಗುತ್ತಿಗೆದಾರರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‌ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಸೂಚನೆ ನೀಡಿತ್ತು. ಆದರೂ ಬಿಬಿಎಂಪಿ ಕಾರ್ಯಾದೇಶ ನೀಡದೆ ವಿಳಂಬ ನೀತಿ ಅನುಸರಿಸುತ್ತಿತ್ತು. ಇದು ನ್ಯಾಯಾಂಗ ನಿಂದನೆಯಡಿ ಬರುವುದರಿಂದ ಅದರಿಂದ ಪಾರಾಗಲು ಇದೀಗ ತರಾತುರಿಯಲ್ಲಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಮುಂದಾಗಿದೆ.

ನಾಡಿದ್ದು ಕೌನ್ಸಿಲ್‌ ಸಭೆಯಲ್ಲಿ ಚರ್ಚೆ

ಬಿಬಿಎಂಪಿ ಈಗಾಗಲೇ 45 ಗುತ್ತಿಗೆದಾರರ ಪೈಕಿ 15 ಮಂದಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದ್ದು, ಉಳಿದವರಿಗೂ ಶೀಘ್ರದಲ್ಲೇ ಕಾರ್ಯಾದೇಶ ನೀಡಲಿದೆ. ಅಂತೆಯೆ 105 ವಾರ್ಡ್‌ಗಳ ಗುತ್ತಿಗೆ ನೀಡುವ ಸಂಬಂಧ ಆ.10ಕ್ಕೆ ನಡೆಯುವ ಕೌನ್ಸಿಲ್‌ ಸಭೆಯಲ್ಲಿ ವಿಷಯ ಇರಿಸಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

700 ಕೋಟಿ ಬದಲು 350 ಕೋಟಿ ವೆಚ್ಚ!

ಬಿಬಿಎಂಪಿ ಮನೆ ಪ್ರತ್ಯೇಕ ಹಸಿ ಕಸ ಸಂಗ್ರಹ ಟೆಂಡರ್‌ಗೆ ಅನುಮೋದನೆ ನೀಡುವ ಬದಲು ಇಂದೋರ್‌ ಮಾದರಿಗೆ ಮುಂದಾಗಿದ್ದರೆ ಪಾಲಿಕೆಗೆ ವಾರ್ಷಿಕ 700 ಕೋಟಿ ವೆಚ್ಚವಾಗುತ್ತಿತ್ತು. ಹಸಿ ಕಸ ಸಂಗ್ರಹ ಟೆಂಡರ್‌ ನೀಡುವುದರಿಂದ ವಾರ್ಷಿಕ .350 ಕೋಟಿ ಮಾತ್ರ ವೆಚ್ಚವಾಗಲಿದೆ. ಇದರಿಂದ ಮತ್ತೊಂದು ಅನುಕೂಲ ಎನೆಂದರೆ, ಒಣಕಸ ಸಂಗ್ರಹ ಮಾಡಿದರೆ ಗುತ್ತಿಗೆದಾರರಿಗೆ ಹಣ ನೀಡುವ ಅಗತ್ಯವಿಲ್ಲ. ಏಕೆಂದರೆ, ನಗರದಲ್ಲಿರುವ ಚಿಂದಿ ಆಯುವವರು ಹಾಗೂ ಸ್ವಯಂ ಸೇವಾ ಸಂಸ್ಥೆಗಳನ್ನು ಬಳಸಿಕೊಂಡು ಒಣಕಸ ಸಂಗ್ರಹ ಮಾಡಲಾಗುತ್ತದೆ. ಇದರಿಂದ ಪಾಲಿಕೆಗೆ ಪಾಲಿಕೆಗೆ ಕೋಟ್ಯಂತರ ರು. ಉಳಿತಾಯವಾಗುತ್ತದೆ.

ಎಲ್ಲಾಕ್ಕಿಂತ ಮೊದಲು ತಿಳಿಯುವುದು ಇಲ್ಲೇ!

ಹಸಿ ಕಸ ಸಂಗ್ರಹಕ್ಕೆ ಟೆಂಡರ್‌ ಅನಿವಾರ್ಯ ಶೀರ್ಷಿಕೆಯಲ್ಲಿ ‘ಕನ್ನಡಪ್ರಭ’ ಆ.6ರಂದು ಸುದ್ದಿ ಪ್ರಕಟಿಸಿತ್ತು. ನ್ಯಾಯಾಂಗ ನಿಂದನೆ ತಪ್ಪಿಸಿಕೊಳ್ಳಲು ಟೆಂಡರ್‌ಗೆ ಒಪ್ಪಿಗೆ ನೀಡುವುದು ಅನಿವಾರ್ಯ ವರದಿ ಮಾಡಿತ್ತು. ಅದರಂತೆ ಶುಕ್ರವಾರ ಟೆಂಡರ್‌ಗೆ ಸಮ್ಮತಿ ಸೂಚಿಸಲಾಗಿದೆ.
 

Follow Us:
Download App:
  • android
  • ios