ಬೆಂಗಳೂರು(ಜು.20): ನಗರದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪರೀಕ್ಷೆ ನಡೆಯಬೇಕು ಎಂದು ತಜ್ಞರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಒಂದು ವಾರದಲ್ಲಿ 40 ಸಾವಿರ ಸೋಂಕು ಪರೀಕ್ಷೆಗೆ ಬಿಬಿಎಂಪಿ ತೀರ್ಮಾನಿಸಿದೆ.

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅವರು, ರಾಜ್ಯ ಕೋವಿಡ್‌ ಕಾರ್ಯಪಡೆಯ ತಜ್ಞ ಸಮಿತಿಯ ಹಿರಿಯ ಸದಸ್ಯರಾದ ಡಾ.ಗಿರಿಧರ್‌ ಬಾಬು, ಡಾ. ನಾಗರಾಜ್‌ ಸೇರಿದಂತೆ ವಿವಿಧ ಸಾರ್ವಜನಿಕ ಆರೋಗ್ಯ ತಜ್ಞರೊಂದಿಗೆ ಭಾನುವಾರ ಸಭೆ ನಡೆಸಿದರು.

ಈ ವೇಳೆ ತಜ್ಞರು ನಗರದಲ್ಲಿ ಹೆಚ್ಚು ಹೆಚ್ಚು ಸೋಂಕು ಪರೀಕ್ಷೆ ನಡೆಸುವುದರಿಂದ ಮಾತ್ರ ಸೋಂಕಿತರನ್ನು ಪತ್ತೆ ಮಾಡಿ ಐಸೋಲೇಷನ್‌ ಮಾಡುವುದರಿಂದ ಸೋಂಕು ಹರಡುವಿಕೆಗೆ ಕಡಿವಾಣ ಹಾಕಬಹುದು. ಅದೇ ರೀತಿ ಈಗಾಗಲೇ ನಗರದಲ್ಲಿ ಗುರುತಿಸಿರುವ ಜ್ವರ, ಕೆಮ್ಮು, ಶೀತ ಹಾಗೂ ಉಸಿರಾಟದ ಸಮಸ್ಯೆ ಉಳ್ಳವರು ಮತ್ತು ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 45 ಸಾವಿರ ಜನರನ್ನು ಆದ್ಯತೆ ಮೇಲೆ ಪರೀಕ್ಷೆ ಮಾಡುವುದಕ್ಕೆ ಸೂಚನೆ ನೀಡಲಾಗಿದೆ.
ಜತೆಗೆ ಸಂಪರ್ಕ ಕಾರ್ಯಕರ್ತರಿಗೆ ವೇತನ ಹೆಚ್ಚಳ ಮತ್ತು ತ್ವರಿತವಾಗಿ ಸೋಂಕಿತ ಸಂಪರ್ಕಿತರನ್ನು ಪತ್ತೆ ಮಾಡಿ ಕ್ವಾರಂಟೈನ್‌ ಮಾಡುವಂತೆ ಬಿಬಿಎಂಪಿಗೆ ಸಲಹೆ ನೀಡಲಾಗಿದೆ. ಹೀಗಾಗಿ, ಬಿಬಿಎಂಪಿ ಮುಂದಿನ ಒಂದು ವಾರದಲ್ಲಿ 40 ಸಾವಿರ ಮಂದಿಯನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸುವುದಕ್ಕೆ ತೀರ್ಮಾನಿಸಿದೆ.

ನೂತನ ಬಿಬಿಎಂಪಿ ಆಯುಕ್ತರ ಖಡಕ್ ವಾರ್ನಿಂಗ್‌ಗೆ ಪತರುಗುಟ್ಟಿದ ಖಾಸಗಿ ಆಸ್ಪತ್ರೆಗಳು

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌, ತಜ್ಞರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಪರೀಕ್ಷೆಗೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ವಾರದಲ್ಲಿ 40 ಸಾವಿರ ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗುವುದು. ಅದಕ್ಕಾಗಿ 125 ವಾಹನ ವ್ಯವಸ್ಥೆ ಮಾಡಲಾಗಿದೆ. ಆದರೆ, ಸೋಂಕು ಪರೀಕ್ಷೆಗೆ ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಅದಕ್ಕಾಗಿ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಲಾಕ್‌ಡೌನ್‌: ಸರ್ಕಾರದ ಅದೇಶದಂತೆ ಕ್ರಮ

ಲಾಕ್‌ಡೌನ್‌ ಇಲ್ಲದೆಯೂ ನಗರದಲ್ಲಿ ಕೊರೋನಾ ಸೋಂಕು ನಿಯಂತ್ರಣ ಮಾಡಬಹುದು. ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಮುಂದುವರೆಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಸರ್ಕಾರದ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ.