ಆಡಳಿತಾವಧಿಯಲ್ಲಿ ದಿಟ್ಟ ತೀರ್ಮಾನಕ್ಕೆ ಸಹಕರಿಸಿದಿರಿ, ಚಹಾಕೂಟ ಏರ್ಪಡಿಸಿ ನಿರ್ಗಮಿತ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧನ್ಯವಾದ ಸಮರ್ಪಣೆ

ಬೆಂಗಳೂರು(ಮೇ.17): ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ಅನೌಪಚಾರಿಕ ಮಾತುಕತೆ ನಡೆಸಿದ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆಡಳಿತಾವಧಿಯಲ್ಲಿ ದಿಟ್ಟ ತೀರ್ಮಾನ ಕೈಗೊಳ್ಳಲು ಸಹಕಾರ ನೀಡಿದ್ದಕ್ಕೆ ಧನ್ಯವಾದಗಳನ್ನು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಚಹಾಕೂಟ ಏರ್ಪಡಿಸಿ ಅನೌಪಚಾರಿಕವಾಗಿ ಮಾತನಾಡಿದರು. ಈ ವೇಳೆ ನನ್ನ ಆಡಳಿತವಧಿಯಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಸಹಕಾರ ನೀಡಿರುವುದಕ್ಕೆ ಧನ್ಯವಾದಗಳು. ನಾವು ಸಂವಿಧಾನ ಒಪ್ಪಿಕೊಂಡಿದ್ದೇವೆ. ಆಡಳಿತದಲ್ಲಿ ಕಾರ್ಯಾಂಗ, ಶಾಸಕಾಂಗ, ಎರಡೂ ಪ್ರಮುಖ ಪಾತ್ರ ವಹಿಸುತ್ತವೆ. ನಾವು ಅದರಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಸೋಲಿನ ಬಗ್ಗೆ ಆರ್‌ಎಸ್‌ಎಸ್‌ಗೆ ಬೊಮ್ಮಾಯಿ ವಿವರಣೆ

‘ನಾನು ಆಧಿಕಾರಕ್ಕೆ ಬಂದಾಗ ಕೋವಿಡ್‌, ಪ್ರವಾಹ ಸಂದರ್ಭ ಎದುರಾಯಿತು. ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ್ದೇವೆ. ನಮ್ಮ ಆಡಳಿತದಲ್ಲಿ ಯಾವುದೇ ಹಿಂಸಾತ್ಮಕ ಚಟುವಟಿಕೆಗಳು ನಡೆಯಲಿಲ್ಲ. ಚುನಾವಣೆ ಸಂದರ್ಭದಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಗೃಹ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. ನಾವು ಅನೇಕ ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ. ಮೀಸಲಾತಿ ಹೆಚ್ಚಳ, ಸರ್ಕಾರಿ ನೌಕರ ಸವಾಲು, ಹೊಸ ನೀತಿಗಳನ್ನು ಜಾರಿಗೆ ತಂದಿದ್ದೇವೆ. ಉದ್ಯೋಗ ನೀತಿ, ಕೈಗಾರಿಕಾ ನೀತಿ ಎಲ್ಲಾ ಹೊಸ ಯೋಜನೆಗಳನ್ನು ತರಲು ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ನಿಮ್ಮ ಸಹಕಾರ ಅತ್ಯಂತ ಮುಖ್ಯವಾಗಿತ್ತು’ ಎಂದರು.

‘ನಾವು ಐದು ವರ್ಷಕ್ಕೆ ಬರುವವರು, ಅಧಿಕಾರಿಗಳು ಸುದೀರ್ಘ ಅಧಿಕಾರದಲ್ಲಿರುವವರು. ರಾಜ್ಯದ ಏಳ್ಗೆಗೆ ಎಲ್ಲರೂ ಶ್ರಮಿಸೋಣ. ಕೆಲಸ ವೇಗವಾಗಿ ಆಗಲಿ ಎಂದು ನಾನು ಗಟ್ಟಿದನಿಯಲ್ಲಿ ಹೇಳಿರಬಹುದು. ಆದರೆ, ಯಾವುದೇ ವೈಯಕ್ತಿಕ ಅಭಿಪ್ರಾಯ ಇರಲಿಲ್ಲ. ಕರ್ನಾಟಕ ಹಲವಾರು ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಜೆಎಸ್‌ಟಿಯಲ್ಲಿ ಮುಂಚೂಣಿಯಲ್ಲಿದ್ದೇವೆ. ಬಂಡವಾಳ ಸೆಳೆಯುವಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ಕರ್ನಾಟಕ ಅಭಿವೃದ್ಧಿಗೆ ಅಧಿಕಾರಿಗಳ ಪಾತ್ರ ಮುಖ್ಯವಾಗಿದ್ದು, ರಾಜ್ಯದ ಅಭಿವೃದ್ಧಿಗೆ ಎಲ್ಲರೂ ಕೆಲಸ ಮಾಡೋಣ’ ಎಂದು ಹೇಳಿದರು.