Asianet Suvarna News Asianet Suvarna News

ತಮ್ಮದೇ ಸರ್ಕಾರದ ವಿರುದ್ಧ ಬಿಜೆಪಿಗರಿಂದ ಮೀಸಲು ಧರಣಿ!

* ಪಂಚಮಸಾಲಿ 2ಎ ಮೀಸಲಿಗೆ ಯತ್ನಾಳ್‌ ಆಗ್ರಹ

* ಎಸ್‌ಟಿ ಮೀಸಲಾತಿ ಹೆಚ್ಚಿಸದ್ದಕ್ಕೆ ರಾಜುಗೌಡ ಕಿಡಿ

* ಸದನದಲ್ಲಿ ಯತ್ನಾಳ್‌, ಬೆಲ್ಲದ್‌ರಿಂದ ಪ್ರತಿಭಟನೆ

* ಬಿಜೆಪಿಗರಿಂದಲೇ ಮೀಸಲು ಧರಣಿ

Basangouda Patil Yatnal Aravind Bellad Stage Dharna against Karnataka govt In The Assembly pod
Author
Bangalore, First Published Sep 24, 2021, 7:45 AM IST

ವಿಧಾನಸಭೆ(ಸೆ.24): ಮೀಸಲಾತಿಗೆ(Reservation) ಆಗ್ರಹಿಸಿ ಆಡಳಿತ ಪಕ್ಷದ ಸದಸ್ಯರೇ ಸರ್ಕಾರದ ವಿರುದ್ಧ ಸದನದ ಬಾವಿಗಿಳಿದು ಧರಣಿ ನಡೆಸಿದರೆ, ಮುಖ್ಯಮಂತ್ರಿಯವರ ಗೈರಿನಲ್ಲಿ ಧರಣಿ ನಡೆಸಿ ಸದನದ ಸಮಯ ಹಾಳು ಮಾಡಬೇಡಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ಚಾಟಿ ಬೀಸಿ ಧರಣಿ ಹಿಂಪಡೆಯುವಂತೆ ಮಾಡಿದ ಘಟನೆ ವಿಧಾನಸಭೆಯಲ್ಲಿ ಗುರುವಾರ ನಡೆಯಿತು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಪಂಚಮಸಾಲಿ ಸಮುದಾಯವನ್ನು 2-ಎ ಪ್ರವರ್ಗಕ್ಕೆ ಸೇರಿಸುವುದು, ಕುರುಬ ಸಮುದಾಯವನ್ನು ಎಸ್‌.ಟಿ.ಗೆ ಸೇರಿಸುವುದು ಮತ್ತು ಎಸ್‌.ಟಿ. ಮೀಸಲಾತಿಯನ್ನು ಹೆಚ್ಚಳ ಮಾಡುವ ಭರವಸೆ ಈಡೇರಿಸದ ಸರ್ಕಾರದ(karnataka Govt) ಧೋರಣೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಈ ವೇಳೆ ಆಡಳಿತ ಪಕ್ಷದ ಸದಸ್ಯ ರಾಜುಗೌಡ ಅವರು ಎಸ್‌.ಟಿ.ಮೀಸಲಾತಿ ಹೆಚ್ಚಳದ ಬಗ್ಗೆ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು. ಒಂದು ಹಂತದಲ್ಲಂತೂ ‘ಶ್ರೀರಾಮಚಂದ್ರನ ಹೆಸರೇಳಿ ಅಧಿಕಾರಕ್ಕೆ ಬಂದ ನಿಮಗೆ ಶ್ರೀರಾಮನನ್ನು ವಿಶ್ವಕ್ಕೆ ಪರಿಚಯಿಸಿದ ವಾಲ್ಮೀಕಿ ಸಮಾಜದ ಬಗ್ಗೆ ಇಷ್ಟು ನಿರ್ಲಕ್ಷ್ಯವೇ’ ಎಂದು ಪ್ರಶ್ನಿಸಿದರು.

ಆರಂಭದಲ್ಲಿ ಮಾತನಾಡಿದ ಯತ್ನಾಳ್‌ ಅವರು, ಪಂಚಮಸಾಲಿ ಸಮುದಾಯವನ್ನು 2-ಎ ಪ್ರವರ್ಗಕ್ಕೆ ಸೇರಿಸುವುದು, ಕುರುಬ ಸಮುದಾಯವನ್ನು ಎಸ್‌.ಟಿ.ಗೆ ಸೇರಿಸುವುದು ಮತ್ತು ಎಸ್‌.ಟಿ. ಮೀಸಲಾತಿಯನ್ನು ಹೆಚ್ಚಳ ಮಾಡುವ ಕುರಿತು ಆರು ತಿಂಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಹೇಳಿದ್ದರು. ಅದರಂತೆ ನೀಡಲಾಗಿದ್ದ ಸೆಪ್ಟೆಂಬರ್‌ 15ಕ್ಕೆ ಗಡುವು ಮುಗಿದಿದೆ. ಸದನದಲ್ಲಿ ನೀಡಿದ್ದ ಭರವಸೆಯಂತೆ ಕೂಡಲೇ ಕ್ರಮ ಕೈಗೊಳ್ಳಬೇಕು. ಹಾಲಿ ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟಭರವಸೆ ನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮುಖ್ಯಮಂತ್ರಿಗಳು ಸದನದಲ್ಲಿ ಇಲ್ಲ ಎಂದ ಸ್ಪೀಕರ್‌ ಮಾತಿಗೆ ಸಮಾಧಾನರಾಗದ ಬಸನಗೌಡ ಪಾಟೀಲ್‌ ಯತ್ನಾಳ್‌(Basangouda Patil Yatnal) ಸದನದ ಬಾವಿಗಿಳಿದು ಧರಣಿ ನಡೆಸಿದರು. ಬಿಜೆಪಿಯ ಅರವಿಂದ ಬೆಲ್ಲದ್‌, ಕಾಂಗ್ರೆಸ್‌ನ(Congress) ಕಂಪ್ಲಿ ಗಣೇಶ್‌ ಸೇರಿದಂತೆ ಹಲವರು ಸಭಾಧ್ಯಕ್ಷರ ಪೀಠದ ಎದುರು ಬಂದು ಮೀಸಲಾತಿಗೆ ಒತ್ತಾಯ ಮಾಡಿದರು.

ಹೋರಾಟದ ಎಚ್ಚರಿಕೆ:

ಬಸನಗೌಡ ಯತ್ನಾಳ್‌, ವೀರಶೈವ ಲಿಂಗಾಯತ ಸಮಾಜದ ಪಂಚಮಸಾಲಿ(Panchamasali) ಸಮುದಾಯ ಈಗಾಗಲೇ ಬೃಹತ್‌ ಹೋರಾಟಗಳನ್ನು ಸಂಘಟಿಸಿದೆ. ಮಲೆಮಹದೇಶ್ವರ ಬೆಟ್ಟದಿಂದ 5ನೇ ಹಂತದ ಹೋರಾಟವನ್ನು ಆರಂಭಿಸಿದ್ದೇವೆ. ಪಂಚಮಸಾಲಿ ಜನಜಾಗೃತಿ ಪಂಚಾಯತ್‌ ಮೂಲಕ ಶಾಂತಿಯುತ ಹೋರಾಟ ನಡೆಸಲಾಗುತ್ತಿದೆ. ಹೋರಾಟದ ಸ್ವರೂಪ ಬದಲಾಗದೆ ಇರಬೇಕಾದರೆ ಕೂಡಲೇ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದನ್ನು ತಿಳಿಸಬೇಕು ಎಂದು ಎಚ್ಚರಿಕೆ ನೀಡಿದರು.

ರಾಜುಗೌಡ ಅಸಮಾಧಾನ:

ಎಸ್‌.ಟಿ. ಮೀಸಲಾತಿ ಹೆಚ್ಚಳ ವಿಳಂಬದ ಬಗ್ಗೆ ಚರ್ಚೆಗೆ ಅವಕಾಶ ನೀಡದ ಬಗ್ಗೆ ಸ್ಪೀಕರ್‌ ವಿರುದ್ಧ ರಾಜುಗೌಡ ಅಸಮಾಧಾನ ವ್ಯಕ್ತಪಡಿಸಿದರು. ‘ಕೆ.ಆರ್‌.ರಮೇಶ್‌ಕುಮಾರ್‌ ಅವರ ರೀತಿ ಯಾವಾಗ ಬೇಕಾದರೂ ಎದ್ದು ನಿಂತು ಮಾತನಾಡಲು ನಮಗೂ ಒಂದು ಪಾಸ್‌ ಕೊಡಿ’, ‘ಈ ಸರ್ಕಾರಕ್ಕೆ ಶ್ರೀರಾಮಚಂದ್ರನ ಹೆಸರು ಹೇಳಿ ಅಧಿಕಾರಕ್ಕೆ ಬರುವುದು ಗೊತ್ತಿದೆ. ರಾಮನನ್ನು ಬೆಳಕಿಗೆ ತಂದ ವಾಲ್ಮೀಕಿ ಜನಾಂಗದ ಬಗ್ಗೆ ಏಕೆ ಇಷ್ಟುನಿರ್ಲಕ್ಷ್ಯ’ ಎಂದು ಪ್ರಶ್ನಿಸಿದರು. ಶೇ.7.5ರಷ್ಟುಮೀಸಲಾತಿ ಕಲ್ಪಿಸಲು ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಸಮಿತಿ ಶಿಫಾರಸು ಮಾಡಿದೆ. ಆದರೂ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಸದನದ ಸಮಯ ಹಾಳು ಮಾಡಬೇಡಿ:

ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah), ಮುಖ್ಯಮಂತ್ರಿ ಬಂದು ಉತ್ತರಿಸಬೇಕು ಎಂದು ಹೇಳುತ್ತೀರಿ. ಮುಖ್ಯಮಂತ್ರಿಗಳು ಇಲ್ಲಿ ಇಲ್ಲ. ಹೀಗಾಗಿ ಅವರು ಬರುವವರೆಗೂ ಕಾಯಿರಿ, ಇಲ್ಲದಿದ್ದರೆ ಸಚಿವರಿಂದ ಉತ್ತರ ಕೇಳಿ. ಸುಖಾಸುಮ್ಮನೆ ಧರಣಿ ನಡೆಸಿ ಸದನದ ಸಮಯ ಹಾಳು ಮಾಡಬೇಡಿ ಎಂದು ಹೇಳಿದರು. ಆಗ ಯತ್ನಾಳ್‌, ಬೆಲ್ಲದ್‌, ಕಂಪ್ಲಿ ಗಣೇಶ್‌ ಧರಣಿ ಹಿಂಪಡೆದರು.

- ಪಂಚಮಸಾಲಿ 2ಎ ಮೀಸಲು ವಿಷಯ ಪ್ರಸ್ತಾಪಿಸಿದ ಯತ್ನಾಳ್‌

- ಕುರುಬರನ್ನು ಎಸ್‌ಟಿಗೆ ಸೇರಿಸುವ ಭರವಸೆ ಈಡೇರಿಲ್ಲ ಎಂದು ಕಿಡಿ

- ಯಡಿಯೂರಪ್ಪ ನೀಡಿದ್ದ 6 ತಿಂಗಳ ಗಡುವು ಮುಗಿದಿದೆ ಎಂದು ವಾದ

- ಹಾಲಿ ಸಿಎಂ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹ, ಧರಣಿ

- ಎಸ್‌ಟಿ ಮೀಸಲು ಹೆಚ್ಚಿಸಲು ತಡ ಮಾಡ್ತಿದೆ ಎಂದು ರಾಜುಗೌಡ ಆಕ್ರೋಶ

- ಸಿಎಂ ಇಲ್ಲ, ಸಮಯ ಹಾಳು ಮಾಡಬೇಡಿ ಎಂದ ಸಿದ್ದು. ಧರಣಿ ವಾಪಸ್‌

Follow Us:
Download App:
  • android
  • ios