ಬೆಂಗಳೂರು, [ಡಿ.29]: ಮಹಾನ್ ಸಂತ ಉಡುಪಿ ಕೃಷ್ಣಮಠದ ಪೇಜಾವರ ಶ್ರೀ ಕೃಷ್ಣೈಕ್ಯರಾಗಿದ್ದರಿಂದ ರಾಜ್ಯ ಸರ್ಕಾರ 3 ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ.

ಈ ಹಿನ್ನೆಲೆಯಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ವರ್ಷದ ಕೊನೆಯಲ್ಲಿ ದಿನಾಂಕ  31/12/2019 ರಂದು ಆಯೋಜಿಸಿದ್ದ ಹೊಸ ವರ್ಷಾಚರಣೆ ಸಂಭ್ರಮ, ವರ್ಷದ ವ್ಯಕ್ತಿ ಪ್ರಶಸ್ತಿ ಸಮಾರಂಭ ಹಾಗೂ ಇನ್ನಿತರ ಎಲ್ಲ ಕಾರ್ಯಕ್ರಮಗಳನ್ನು ಮುಂದೂಡಿದೆ.  

ಪೇಜಾವರ ಶ್ರೀಗಳ ನಿಧನಕ್ಕೆ ಸಿಎಂ ಕಂಬನಿ, ರಾಜ್ಯದಲ್ಲಿ 3 ದಿನ ಶೋಕಾಚರಣೆ!

ಈ ಬಗ್ಗೆ  ಪ್ರೆಸ್ ಕ್ಲಬ್ ಆಫ್  ಅಧ್ಯಕ್ಷ ಸದಾಶಿವ ಶೆಣೈ.ಕೆ ಅವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. "ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ಬೌದ್ಧಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿ ಸಮಾಜಕ್ಕೆ ಮಾರ್ಗದರ್ಶನ, ಸಲಹೆ, ಸೂಚನೆಯನ್ನು ಕಳೆದ ಅನೇಕ ದಶಕಗಳಿಂದ ನೀಡುತ್ತ ಬಂದಿರುವ ಶ್ರೀಯುತರು ನಮ್ಮ ಸಮಾಜದ ಸಾಕ್ಷಿಪ್ರಜ್ಞೆಯೆಂದೇ ನಾವು ಭಾವಿಸಿದ್ದೇವೆ.

ಇವರ ನಿಧನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 3 ದಿನಗಳ ಕಾಲ ಶೋಕಾಚರಣೆ ಘೋಷಿಸಿರುವುದರಿಂದ ಶ್ರೀಯತರ ಆತ್ಮಕ್ಕೆ ಶಾಂತಿ ಕೊರುತ್ತ ಅವರ ನಿಧನದ ಗೌರವಾರ್ಥ ಎಲ್ಲ ಕಾರ್ಯಕ್ರಮಗಳನ್ನು ಮುಂದೂಡಲಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದ ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು" ಎಂದು ತಿಳಿಸಿದ್ದಾರೆ.

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪೇಜಾವರ ಮಠದ ಹಿರಿಯ ಯತಿಗಳಾದ ವಿಶ್ವೇಶತೀರ್ಥ ಸ್ವಾಮೀಜಿ ಇಂದು [ಭಾನುವಾರ] ಅಸ್ತಂಗತರಾದರು. ಈ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಉಡುಪಿಯಲ್ಲೇ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ರಾಜ್ಯಾದ್ಯಂತ 3 ದಿನಗಳ ಶೋಕಾಚರಣೆ ಘೋಷಿಸಿದ್ದರು.

ಹೆಗ್ಗಡೆ, ಜಿವಿ, ಜೆಪಿ ಶೆಟ್ಟಿಗೆ ಪ್ರೆಸ್‌ಕ್ಲಬ್‌ ಪ್ರಶಸ್ತಿ

ಶೋಕಾಚರಣೆ ಇರುವುದರಿಂದ ರಾಜ್ಯಾದ್ಯಂತ ಯಾವುದೇ ಮನೋರಂಜನೆ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಇದ್ರಿಂದ ಬೆಂಗಳೂರು ಪ್ರೆಸ್ ಕ್ಲಬ್ ತನ್ನೆಲ್ಲಾ ನಿಯೋಜಿತ ಕಾರ್ಯಕ್ರಮಗಳನ್ನು ರದ್ದು ಮಾಡಿದೆ.

ಬೆಂಗಳೂರು ಪ್ರೆಸ್‌ ಕ್ಲಬ್‌ ಕೊಡಮಾಡುವ 2019ನೇ ಸಾಲಿನ ‘ಪ್ರೆಸ್‌ ಕ್ಲಬ್‌ ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ‘ಯುಗದ ಸಾಧಕ ಪ್ರಶಸ್ತಿ’ಗೆ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ಸಮಾರಂಭ 31/12/2019 ರಂದು ನಡೆಯಬೇಕಿತ್ತು.