ಶೀಘ್ರದಲ್ಲೇ ಕಾಫಿ, ಟೀ, ತಿಂಡಿ ಬೆಲೆ ಏರಿಕೆ; ಸೂಚನೆ ನೀಡಿದ ಬೆಂಗಳೂರು ಹೋಟೆಲ್ ಮಾಲೀಕರ ಸಂಘ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ ಬೆನ್ನಲ್ಲಿಯೇ ರಾಜ್ಯ ಸರ್ಕಾರ ದಿನಬಳಕೆಯ ಇನ್ನೊಂದು ಅಗತ್ಯ ವಸ್ತುವಾದ ಹಾಲಿನ ಬೆಲೆಯಲ್ಲೂ ಏರಿಕೆ ಮಾಡಿದೆ. ಹಾಲಿನ ಬೆಲೆಯಲ್ಲಿ 2 ರೂಪಾಯಿ ಏರಿಕೆ ಮಾಡಲಾಗಿದೆ.
ಬೆಂಗಳೂರು (ಜೂ.25): ಚುನಾವಣೆ ಮುಗಿದ ಬೆನ್ನಲ್ಲಿಯೇ ಒಂದೊಂದಾಗಿ ಎಲ್ಲರದ ದರದಲ್ಲೂ ಏರಿಕೆ ಆಗುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ 3 ರೂಪಾಯಿ ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಈಗ ದಿನಬಳಕೆಯ ಮತ್ತೊಂದು ಅಗತ್ಯವಸ್ತುವಾದ ಹಾಲಿನ ದರದಲ್ಲೂ ಏರಿಕೆ ಮಾಡಿದೆ. ಕರ್ನಾಟಕ ಹಾಲು ಮಹಾಮಂಡಳ ಹಾಲಿನ ಬೆಲೆ ಮೇಲೆ 2 ರೂಪಾಯಿ ಏರಿಕೆ ಮಾಡಿ ಪ್ರಕಟಣೆ ಹೊರಡಿಸಿದ್ದು, ನಾಳೆಯಿಂದಲೇ ಈ ದರ ಜಾರಿಯಾಗಲಿದೆ. ಇದರ ಬೆನ್ನಲ್ಲಿಯೇ ಹೋಟೆಲ್ ಉದ್ಯಮಿಗಳು ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಶೀಘ್ರದಲ್ಲಿಯೇ ಕಾಫಿ, ಟೀ, ತಿಂಡಿ ಬೆಲೆಯ ಏರಿಕೆಯ ಮೇಲೂ ಇದು ಪರಿಣಾಮ ಬೀರಲಿದೆ ಎಂದಿದ್ದಾರೆ.
ಹಾಲಿನ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮಿಗಳಿಗೆ ನಷ್ಟವಾಗಲಿದೆ. ನಂದಿನಿ ಹಾಲನ್ನು ಅತೀ ಹೆಚ್ಚು ಬಳಕೆ ಮಾಡೋದು ಹೋಟೆಲ್ ಉದ್ಯಮಿಗಳು. ಈಗಾಗಲೇ ಸಾಕಷ್ಟು ಬೆಲೆ ಏರಿಕೆಯಿಂದ ಹೋಟೆಲ್ ನಡೆಸೋದೇ ಕಷ್ಟವಾಗಿದೆ. ಕಳೆದವಾರ ಪೆಟ್ರೋಲ್ ಬೆಲೆ ಏರಿಕೆ ಮಾಡಲಾಗಿದೆ. ಇದೀಗ ಹಾಲಿನ ಬೆಲೆ ಏರಿಕೆ ಹೋಟೆಲ್ ಉದ್ಯಮಕ್ಕೆ ನುಂಗಲಾರದ ತುತ್ತಾಗಿದೆ ನಾವು ಹೋಟೆಲ್ ಗಳಲ್ಲಿ ಕಾಫಿ,ಟೀ ತಿಂಡಿ ಬೆಲೆ ಏರಿಕೆ ಬಗ್ಗೆ ಸಭೆ ಕರೆದು ಚರ್ಚಿಸಿ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಬೆಂಗಳೂರು ಹೋಟೆಲ್ ಮಾಲಿಕರ ಸಂಘಟನೆ ಅಧ್ಯಕ್ಷ ಪಿಸಿರಾವ್ ಹೇಳಿದ್ದಾರೆ.