ಬೆಳವಣಿಗೆ ಹಾದಿಯಲ್ಲಿ ಸಾಗುತ್ತಿರುವ ಬೆಂಗಳೂರು ನಗರ ವಿವಿಗೆ ಕಾಯಂ ಬೋಧಕರು, ಸಿಬ್ಬಂದಿಯೇ ಇಲ್ಲ!

ಇನ್ನೂರಕ್ಕೂ ಹೆಚ್ಚು ಸಂಯೋಜಿತ ಕಾಲೇಜುಗಳು, ಉತ್ತಮ ಆದಾಯ, ವಿದ್ಯಾರ್ಥಿಗಳ ದಾಖಲಾತಿ ಏರಿಕೆ ಸೇರಿ ಕೆಲ ವರ್ಷಗಳಲ್ಲೇ ಉತ್ತಮ ಬೆಳವಣಿಗೆ ಹಾದಿಯಲ್ಲಿ ಸಾಗುತ್ತಿರುವ ಬೆಂಗಳೂರು ನಗರ ವಿಶ್ವವಿದ್ಯಾಲಯ(ಬಿಸಿಯು) ಕಾಯಂ ಬೋಧಕರು, ಅಧಿಕಾರಿ, ಸಿಬ್ಬಂದಿಯ ತೀವ್ರ ಕೊರತೆ ಎದುರಿಸುತ್ತಿದೆ.

Bangalore City University has no permanent lecturers and staff

ಲಿಂಗರಾಜು ಕೋರಾ

ಬೆಂಗಳೂರು (ಮಾ.13): ಇನ್ನೂರಕ್ಕೂ ಹೆಚ್ಚು ಸಂಯೋಜಿತ ಕಾಲೇಜುಗಳು, ಉತ್ತಮ ಆದಾಯ, ವಿದ್ಯಾರ್ಥಿಗಳ ದಾಖಲಾತಿ ಏರಿಕೆ ಸೇರಿ ಕೆಲ ವರ್ಷಗಳಲ್ಲೇ ಉತ್ತಮ ಬೆಳವಣಿಗೆ ಹಾದಿಯಲ್ಲಿ ಸಾಗುತ್ತಿರುವ ಬೆಂಗಳೂರು ನಗರ ವಿಶ್ವವಿದ್ಯಾಲಯ(ಬಿಸಿಯು) ಕಾಯಂ ಬೋಧಕರು, ಅಧಿಕಾರಿ, ಸಿಬ್ಬಂದಿಯ ತೀವ್ರ ಕೊರತೆ ಎದುರಿಸುತ್ತಿದೆ. ಹಿರಿಯ ಕಾಯಂ ಪ್ರಾಧ್ಯಾಪಕರ ಕೊರತೆಯಿಂದ ಒಂದೆಡೆ ಸಂಶೋಧನಾ ಚಟುವಟಿಕೆಗಳಿಗೆ ಭಾರೀ ಹಿನ್ನಡೆಯಾಗುತ್ತಿದೆ. ಮತ್ತೊಂದೆಡೆ ಆಡಳಿತದಲ್ಲಿ ಲೋಪಗಳಾಗದಂತೆ ಜವಾಬ್ದಾರಿ, ಹೊಣೆಗಾರಿಕೆ ಯಾರಿಗೆ ನೀಡುವುದು ಎಂದು ತಿಳಿಯದೆ ಗೊಂದಲದಲ್ಲಿ ಉನ್ನತ ಅಧಿಕಾರಿಗಳಿದ್ದಾರೆ.

ಬಿಸಿಯು ಆರಂಭವಾಗಿ ಏಳು ವರ್ಷ ಕಳೆದಿದ್ದರೂ ಸರ್ಕಾರ ಮಂಜೂರು ಮಾಡಿರುವ 163 ಬೋಧಕ ಹಾಗೂ 123 ಬೋಧಕೇತರ ಹುದ್ದೆಗಳ ಪೈಕಿ ಕೇವಲ 10 ಬೋಧಕ ಮತ್ತು ನಾಲ್ವರು ಬೋಧಕೇತರ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಬಹುತೇಕ ಅತಿಥಿ ಶಿಕ್ಷಕರು, ಗುತ್ತಿಗೆ, ಹೊರಗುತ್ತಿಗೆ ನೌಕರರೇ ವಿವಿಗೆ ಆಸರೆಯಾಗಿದ್ದಾರೆ. ಇದರಿಂದ ಪಿಎಚ್‌.ಡಿ ಹಾಗೂ ಇತರೆ ಸಂಶೋಧನಾ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ. ಪಿಎಚ್‌.ಡಿ ಅಧ್ಯಯನಕ್ಕೆ ಕಳೆದ ವರ್ಷ ಕೇವಲ ನಾಲ್ವರು, ಈ ವರ್ಷ 120 ಮಂದಿ ನೋಂದಣಿ ಮಾಡಿದ್ದಾರೆ. ಇವರಿಗೆ ಹಿರಿಯ ಮಾರ್ಗದರ್ಶಕರಿಲ್ಲ. ಆದರೂ ವಿವಿ ಪ್ರತಿಷ್ಠಿತ ಕಾಲೇಜುಗಳನ್ನು ಸಂಶೋಧನಾ ಕೇಂದ್ರಗಳಾಗಿ ಗುರುತಿಸಿ, ಹಿರಿಯ ಪ್ರಾಧ್ಯಾಪಕರನ್ನು ಪಿಎಚ್‌.ಡಿ ಮಾರ್ಗದರ್ಶಕರನ್ನಾಗಿ ನಿಯೋಜಿಸಲಾಗಿದೆ.

ರಾಜ್ಯದ ಶ್ರೀಮಂತ ಬೆಂವಿವಿಗೆ ಈಗ ಪಿಂಚಣಿಗಾಗಿ ಕೈಚಾಚುವ ಸ್ಥಿತಿ!

2017ರಲ್ಲಿ ವಿಭಜನೆ: ಬೆಂಗಳೂರು ವಿಶ್ವವಿದ್ಯಾಲವನ್ನು 2017ರಲ್ಲಿ ಅಂದಿನ ಸರ್ಕಾರ ಮೂರು ಭಾಗ ಮಾಡಿದ್ದರಿಂದ ರಾಜಧಾನಿಯ ಹೃದಯಭಾಗದ ಸೆಂಟ್ರಲ್‌ ಕಾಲೇಜು ಕ್ಯಾಂಪಸ್‌ನಲ್ಲಿ ಜನ್ಮತಾಳಿದ್ದು ಬೆಂಗಳೂರು ನಗರ ವಿವಿ, ಮತ್ತೊಂದು ಬೆಂ.ಉತ್ತರ ವಿವಿ ಕೋಲಾರದಲ್ಲಿ ಆರಂಭಿಸಲಾಯಿತು. 2018ರಲ್ಲಿ ಅಧಿಕೃತವಾಗಿ ಶೈಕ್ಷಣಿಕ ಚಟುವಟಿಕೆ ಆರಂಭಿಸಿದ ಬೆಂ.ನಗರ ವಿವಿಯು ಏಳೇ ವರ್ಷದಲ್ಲಿ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿಯ(ನ್ಯಾಕ್‌) ಮಾನ್ಯತೆ ಮತ್ತು ಶ್ರೇಯಾಂಕಕ್ಕೆ ಅರ್ಜಿ ಸಲ್ಲಿಸಲು ಅರ್ಹವಾಗಿದೆ. 

ಆದರೆ, ಈ ಮಾನ್ಯತೆಗೆ ಪ್ರಮುಖ ಮಾನದಂಡವಾದ ಶೇ.75ರಷ್ಟು ಕಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರಬೇಕು. ಸಂಶೋಧನಾ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯುತ್ತಿರಬೇಕು. ಆದರೆ, ಸದ್ಯ ಮಂಜೂರಾಗಿರುವ ಹುದ್ದೆಗಳ ಪೈಕಿ 59 ಬೋಧಕ ಹಾಗೂ 47 ಬೋಧಕೇತರ ಹುದ್ದೆಗಳ ಭರ್ತಿಗೆ ಅನುಮತಿ ಈಗಷ್ಟೇ ಸಿಕ್ಕಿದೆ. ಹಾಲಿ ಕುಲಪತಿ ಅಧಿಕಾರಾವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಹೊಸ ಕುಲಪತಿ ನೇಮಕವಾಗುವವರೆಗೆ ಈ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಕಡಿಮೆ ಎನ್ನುತ್ತವೆ ವಿವಿ ಮೂಲಗಳು.

232 ಕೋಟಿ ರು.ಬಜೆಟ್‌ಗೆ ಸಿದ್ಧತೆ: ಬೆಂಗಳೂರು ನಗರ ವಿವಿ ಸ್ವಂತ ಆದಾಯದಿಂದಲೇ ಸುಸೂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. 2025-26ನೇ ಸಾಲಿನಲ್ಲಿ 232 ಕೋಟಿ ರು. ಮೊತ್ತದ ಬಜೆಟ್‌ ಮಂಡನೆಗೆ ವಿವಿಯ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ವಿವಿಗಳಿಗೆ ನೀಡಿದಂತೆ ಸರ್ಕಾರ ಈ ವಿವಿಯ ಕಾಯಂ ನೌಕರರಿಗೆ ಅನುಗುಣವಾಗಿ ವಾರ್ಷಿಕ 10 ಕೋಟಿ ರು.ನಷ್ಟು ವೇತನ ನೀಡುತ್ತಿದೆ. ಏಳೇ ವರ್ಷದಲ್ಲಿ ಖರ್ಚುವೆಚ್ಚಗಳ ನಡುವೆಯೂ 120 ಕೋಟಿ ರು.ಅನುದಾವನ್ನು ಠೇವಣಿಯಾಗಿ ಹೊಂದಿದೆ. ನಿವೃತ್ತರ ಪಿಂಚಣಿಗಾಗಿ ಸುಮಾರು 8 ಕೋಟಿ ರು. ಮೂಲ ನಿಧಿಯನ್ನೂ ಸ್ಥಾಪಿಸಿದೆ.

ಬೆಂ.ವಿವಿ ವಿಭಜನೆ ಬಳಿಕ ಪ್ರತಿಷ್ಠಿತ ಕಾಲೇಜುಗಳೆಲ್ಲ ಬೆಂ.ನಗರ ವಿವಿ ಜೋಳಿಗೆಗೆ ಬಿದ್ದ ಪರಿಣಾಮ ಹಾಗೂ ರಾಜಧಾನಿಯ ಕೇಂದ್ರ ಭಾಗದಲ್ಲಿ ಕ್ಯಾಂಪಸ್‌, ವಿದ್ಯಾರ್ಥಿಗಳ ದಾಖಲಾತಿ ಏರಿಕೆ, ಜ್ಞಾನಜ್ಯೋತಿ ಆಡಿಟೋರಿಯಂ ಸೇರಿ ಒಂದಷ್ಟು ಆಂತರಿಕ ಸಂಪನ್ಮೂಲದ ಆಸ್ತಿಗಳು ಇರುವುದರಿಂದ ಆದಾಯ ಹೆಚ್ಚಾಗಿ ಬಜೆಟ್‌ ಗಾತ್ರವೂ ಹೆಚ್ಚುತ್ತಿದೆ. ಭವಿಷ್ಯದಲ್ಲಿ ಬೆಂಗಳೂರು ವಿವಿಗಿಂತಲೂ ಆರ್ಥಿಕವಾಗಿ ಸದೃಢವಾಗಿ ಬೆಳೆಯಬಹುದಾದ ಎಲ್ಲ ಅವಕಾಶಗಳು ಇವೆ ಎನ್ನುತ್ತಾರೆ ತಜ್ಞರು.

ವಿವಿ ಕೈ ಹಿಡಿದ ಹೊಸ ತಲೆಮಾರಿನ ಪದವಿ ಕೋರ್ಸು!: ಆರಂಭದಲ್ಲಿ 470 ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಏಳು ವರ್ಷದಲ್ಲಿ 5000ಕ್ಕೆ ಏರಲು ಪ್ರಮುಖ ಕಾರಣ ಸ್ನಾತಕೋತ್ತರ ಕೋರ್ಸುಗಳ ಜೊತೆಗೆ ಪದವಿ ವಿಭಾಗದಲ್ಲಿ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌, ಬಿಸಿಎ ಫೈನಾನ್ಷಿಯಲ್‌ ಸರ್ವಿಸಸ್‌ನಂಥ ಹೊಸ ತಲೆಮಾರಿನ ಕೋರ್ಸುಗಳ ಆರಂಭ. ಹಾಗೂ ವಿವಿಧ ವಿದೇಶಿ ಭಾಷಾ ಅಧ್ಯಯನ ಕೋರ್ಸುಗಳಿಗೆ ಆದ್ಯತೆ. ವಿದೇಶಿ ವಿವಿಗಳ ಜೊತೆಗೆ ವಿದ್ಯಾರ್ಥಿ, ಪ್ರಾಧ್ಯಾಪಕರ ವಿನಿಮಯ ಒಡಂಬಡಿಕೆ ಕಾರಣ ಎನ್ನುವುದು ವಿವಿ ಅಧಿಕಾರಿಗಳ ಹೇಳಿಕೆ.

ಸೆಂಟ್ರಲ್‌ ಕಾಲೇಜಿಂದ ಜನಿಸಿದ 2ನೇ ವಿವಿ: 1886ರಲ್ಲಿ ಬ್ರಿಟಿಷ್‌ ಆಡಳಿತದಲ್ಲಿ ಸ್ಥಾಪನೆಯಾದ ಸೆಂಟ್ರಲ್‌ ಕಾಲೇಜು ಭಾರತದ ಅತ್ಯಂತ ಹಳೆಯ ಕಾಲೇಜು. ಈ ಕಾಲೇಜಿನಲ್ಲಿ ಜನ್ಮ ತಾಳಿದ 2ನೇ ವಿವಿ ಬೆಂಗಳೂರು ನಗರ ವಿವಿ. ಹಿಂದೆ ಮೈಸೂರು ವಿವಿಯ ಸಂಯೋಜನೆಗೆ ಒಳಪಟ್ಟಿದ್ದ ಸೆಂಟ್ರಲ್‌ ಕಾಲೇಜಿನಲ್ಲಿ 1964ರಲ್ಲಿ ಬೆಂಗಳೂರು ವಿವಿ ಆರಂಭವಾಗಿದ್ದರಿಂದ ವಿಶ್ವವಿದ್ಯಾಲಯವಾಯಿತು. 2017ರಲ್ಲಿ ಬೆಂಗಳೂರು ವಿವಿಯನ್ನು ಮೂರು ಭಾಗ ಮಾಡಿದ್ದರಿಂದ ರಚನೆಯಾದ ಬೆಂಗಳೂರು ನಗರ ವಿವಿಗೆ ಈ ಕಾಲೇಜು ಕ್ಯಾಂಪಸ್‌ ಅನ್ನು ನೀಡಲಾಯಿತು. ಬೆಂ.ನಗರ ವಿವಿಯ ಮೊದಲ ಕುಲಪತಿಯಾಗಿ ಪ್ರೊ. ಜಾಫೆಟ್‌ ಕಾರ್ಯನಿರ್ವಹಿಸಿದ್ದರು.

ರಾಜ್ಯದ ಬಹುತೇಕ ವಿವಿಗಳಲ್ಲಿ ಕಾಯಂ ಬೋಧಕ, ಬೋಧಕೇತರ ನೌಕರರ ಹುದ್ದೆಗಳು ಶೇ.50ಕ್ಕೂ ಹೆಚ್ಚು ಖಾಲಿ ಇವೆ. ಕೆಲ ವರ್ಷಗಳ ಹಿಂದೆ ಆರಂಭವಾದ ಬೆಂಗಳೂರು ನಗರ ವಿವಿ ಹಾಗೂ ಇತರೆ ವಿವಿಗಳಿಗೆ ಹುದ್ದೆಗಳು ಮಂಜೂರಾದರೂ ನೇಮಕಾತಿ ಆಗಿಲ್ಲ. ಹಾಗಾಗಿ ಸರ್ಕಾರ ನೇಮಕ ಆಗುವವರೆಗೆ ನುರಿತ, ವಿಷಯ ಪ್ರಾವೀಣ್ಯತೆ ಹಾಗೂ ಸಂಶೋಧನಾ ಮಾರ್ಗದರ್ಶನಕ್ಕೆ ಅರ್ಹರಾದ ಅತಿಥಿ ಉಪನ್ಯಾಸಕರು/ಪ್ರಾಧ್ಯಾಪಕರನ್ನು ನೇಮಿಸಿಕೊಂಡು ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳನ್ನು ನಡೆಸಬೇಕು. ಸರ್ಕಾರ ಆದಷ್ಟು ಬೇಗ ಈ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಬೇಕು.
 ಪ್ರೊ.ವೈ.ಎಸ್‌.ಸಿದ್ದೇಗೌಡ, ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ನಿವೃತ್ತ ಉಪಾಧ್ಯಕ್ಷ

ರಾಜ್ಯದ ನೂತನ ವಿಶ್ವವಿದ್ಯಾಲಯಗಳ ಸಂಕಷ್ಟ ಸಂಸತ್ತಲ್ಲಿ ಬಿಚ್ಚಿಟ್ಟ ದೇವೇಗೌಡ

ಆಂತರಿಕ ಸಂಪನ್ಮೂಲದಿಂದಲೇ ಉತ್ತಮ ಆದಾಯ, ಯುಜಿ ಜೊತೆಗೆ ಪಿಜಿ ಕೋರ್ಸುಗಳ ಆರಂಭ, ಅದರಲ್ಲೂ ಹೊಸ ತಲೆಮಾರಿನ ಕೋರ್ಸುಗಳಿಂದ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಗಣನೀಯ ಏರಿಕೆಯಿಂದ ವಿವಿಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಕಾಯಂ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಂಖ್ಯೆ ತೀರಾ ಕಡಿಮೆ ಇರುವುದು ಸಂಶೋಧನಾ ಚಟುವಟಿಕೆಗೆ ಹಿನ್ನಡೆಯಾಗಿದೆ. ಹೊಣೆಗಾರಿಕೆ ನಿಗದಿಪಡಿಸುವ ವಿಚಾರದಲ್ಲಿ ಸಂದಿಗ್ಧತೆ ಇದೆ. ಸರ್ಕಾರ ಆದಷ್ಟು ಬೇಗ ಮಂಜೂರಾಗಿರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಬೇಕು.
-ಪ್ರೊ.ಲಿಂಗರಾಜ ಗಾಂಧಿ, ಬೆಂ.ನಗರ ವಿವಿ ಕುಲಪತಿ

Latest Videos
Follow Us:
Download App:
  • android
  • ios