ಬೆಂಗಳೂರು :  ‘ನೋಡಿ, ಕೆಲವೇ ದಿನಗಳ ಹಿಂದೆಯಷ್ಟೆ ನನ್ನ ಕ್ಯಾಮೆರಾದಲ್ಲಿ ಸೆರೆಯಾಗಿರುವ ಬಂಡೀಪುರ ಇದು. ಪ್ರಾಣಿ, ಪಕ್ಷಿಗಳು, ಹಸಿರಿನ ಕಾಡು, ಮರ-ಗಿಡ ಎಷ್ಟುಚೆನ್ನಾಗಿವೆ ನೋಡಿ. ಇದೇ ಕಾಡು, ಇದೇ ಪ್ರಾಣಿಗಳು ಬೆಂಕಿಯಲ್ಲಿ ಜೀವಂತವಾಗಿ ಕರಕಲಾಗಿವೆ ಎಂದರೆ ಮನಸ್ಸಿಗೆ ಎಷ್ಟು ನೋವಾಗಬೇಡ ಹೇಳಿ.’

- ಹೀಗೆ ಬೇಸರ ತೋಡಿಕೊಂಡಿದ್ದು ನಟ ದರ್ಶನ್‌. ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ಅವರನ್ನು ಬಂಡೀಪುರ ಕಾಡ್ಗಿಚ್ಚಿನ ಬಗ್ಗೆ ಕೇಳಿದಾಗ ದೊರೆತ ಮೊದಲ ಪ್ರತಿಕ್ರಿಯೆ ಇದು.

ಕೆಲವು ದಿನಗಳ ಹಿಂದೆಯಷ್ಟೇ ಬಂಡೀಪುರ ಕಾಡಿಗೆ ಹೋಗಿ ಬಂದಿದ್ದೆ. ಹಲವು ಪ್ರಾಣಿಗಳ ಫೋಟೋ ತೆಗೆದಿದ್ದೆ. ಆ ಫೋಟೋಗಳನ್ನು ಮಾರ್ಚ್ 1ರಂದು ಪ್ರದರ್ಶನ ಮಾಡಿ ಅದರಿಂದ ಬರುವ ಹಣವನ್ನು ಬಂಡೀಪುರ ಕಾಡಿನಲ್ಲಿರುವ ಅದಿವಾಸಿಗಳಿಗೆ ಕೊಡುವ ಯೋಜನೆ ಹಾಕಿಕೊಂಡಿದ್ದೆ. ಇಷ್ಟರಲ್ಲಿ ಕಾಡ್ಗಿಚ್ಚು. ನನ್ನ ಫೋಟೋಗಳಲ್ಲಿ ಕಾಣಿಸಿಕೊಂಡ ಪ್ರಾಣಿಗಳು ಇಲ್ಲ ಎನ್ನುವುದು ದುಃಖದ ಸಂಗತಿ. ಈ ಕಾರಣಕ್ಕೆ ಫೋಟೋ ಪ್ರದರ್ಶನವನ್ನು ರದ್ದುಗೊಳಿಸಿದ್ದೇನೆ. ಬಂಡೀಪುರ ನೆನೆದಾಗ ಬೇಸರವಾಗುತ್ತದೆ. ಈ ದುರಂತಕ್ಕೆ ಮನುಷ್ಯರೇ ಕಾರಣ. ಮನುಷ್ಯರ ಮನಸ್ಥಿತಿ ಬದಲಾಗದಿದ್ದರೆ ಇಂಥ ದುರಂತಗಳನ್ನು ತಡೆಯಲು ಸಾಧ್ಯವಿಲ್ಲ ಎಂದರು.

ಆನೆಲದ್ದಿ ಮೂಲಕ ಕಾಡ್ಗಿಚ್ಚು:

‘ಕಾಡನ್ನು ನಾಶ ಮಾಡುವುದು, ಕಾಡು ಪ್ರಾಣಿಗಳನ್ನು ಕೊಲ್ಲುವುದು ಕಾಡಿನಲ್ಲಿ ವಾಸಿಸುವ ಜನ ಅಲ್ಲ. ನಗರದಲ್ಲಿರುವ ಮನುಷ್ಯರು. ಇವರೇ ಕಾಡುಗಳ್ಳರು. ಕಾಡ್ಗಿಚ್ಚು ಸೃಷ್ಟಿಗೆ ಇಂಥ ಕಾಡುಗಳ್ಳರೇ ಕಾರಣ. ನಾನು ಮೊನ್ನೆ ಬಂಡೀಪುರಕ್ಕೆ ಹೋದಾಗ ಗೊತ್ತಾದ ಸಂಗತಿ ಏನೆಂದರೆ, ಆನೆಲದ್ದಿಯನ್ನು ಬಳಸಿಕೊಂಡು ಕಾಡ್ಗಿಚ್ಚು ಉಂಟುಮಾಡುತ್ತಾರೆ. ಆನೆಲದ್ದಿ ಮೂಲಕ ಹೊತ್ತಿಕೊಳ್ಳುವ ಬೆಂಕಿ ನಂದಿಸಲು ಕನಿಷ್ಠ ಮೂರು ದಿನವಾದರೂ ಬೇಕಾಗುತ್ತದೆ. ಈ ವಿಷಯ ಕೇಳಿಯೇ ನನಗೆ ಭಯ ಆಯ್ತು. ಬೀಡಿ ಅಥವಾ ಸಿಗರೇಟು ಸೇದಿ ಅದರ ಬೆಂಕಿಯನ್ನು ಲದ್ದಿಯೊಳಗೆ ಹಾಕಿ ಕಾಡಿಗೆ ಬಿಸಾಕಿದರೆ ಅದು ಮೂರುದಿನದ ನಂತರ ಬ್ಲಾಸ್ಟ್‌ ಆಗುತ್ತದೆ. ಹಾಗೆ ಬ್ಲಾಸ್ಟ್‌ ಆದಾಗ ಇಡೀ ಕಾಡಿಗೆ ಬೆಂಕಿ ಹತ್ತಿಕೊಳ್ಳುತ್ತದೆ. ಈ ಹೀನ ಕೃತ್ಯ ಮಾಡುವುದು ಕಾಡಿನಲ್ಲಿ ವಾಸಿಸುವ ಜನ ಅಲ್ಲ. ಕಾಡಿನಿಂದ ಹೊರಗಿದ್ದವರ ಕೃತ್ಯವಿದು’ ಎಂದರು.

ಕಾಡಿನ ವಾಸಿಗಳನ್ನು ಎತ್ತಂಗಡಿ ಮಾಡುವ ಸಂಚು:

‘ಯಾವ ಕಾರಣಕ್ಕೆ ಇಂಥ ದುರಂತ ಮಾಡುತ್ತಾರೆ ನನಗೆ ಗೊತ್ತಿಲ್ಲ. ಬಹುಶಃ ಕಾಡಿನಲ್ಲಿ ವಾಸಿಸುವ ಜನರನ್ನು ಆ ಕಾಡಿನಿಂದ ಅಕ್ರಮವಾಗಿ ಹೊರ ಹಾಕುವ ಭಾಗವಾಗಿಯೂ ಇಂಥ ಸಂಚುಗಳನ್ನು ಮಾಡುತ್ತಿರಬಹುದು ಅಥವಾ ಮಾಡಿಸುತ್ತಿರಬಹುದು. ಈ ಬಗ್ಗೆ ಮತ್ತಷ್ಟುತನಿಖೆ ಆಗಬೇಕಿದೆ ಎಂದು ದರ್ಶನ್‌ ಹೇಳಿದರು.

ಪ್ರಾಣಿಗಳು ಊರುಗಳಿಗೆ ನುಗ್ಗುತ್ತವೆ:

‘ಈಗ ಕಾಡಿಗೆ ಬೆಂಕಿ ಬಿದ್ದಿದೆ. ಕಾಡಿನಿಂದ ಓಡಿ ಹೋಗಿರುವ ಪ್ರಾಣಿಗಳು ಎಲ್ಲಿಗೆ ಹೋಗಬೇಕು? ಅವು ಸೀದಾ ಊರು, ನಗರಕ್ಕೆ ನುಗ್ಗುತ್ತವೆ. ಪ್ರಾಣಾಪಾಯದಿಂದ ಪಾರಾಗಿರುವ ಪ್ರಾಣಿಗಳು ಮೊದಲೇ ರೊಚ್ಚಿಗೆದ್ದಿರುತ್ತವೆ. ಸಾವು- ನೋವುಗಳಿಗೆ ಕಾರಣವಾಗುತ್ತವೆ. ಮರುದಿನ ನಗರದಲ್ಲಿ ಪ್ರಾಣಿಗಳ ಉಪಟಳ, ಆನೆ ತುಳಿತಕ್ಕೆ ಸಾವು ಎಂದು ಪತ್ರಿಕೆಗಳಲ್ಲಿ ಸುದ್ದಿ ಬರುತ್ತದೆ. ಕಾಡಿನ ಪ್ರಾಣಿಗಳು ಊರುಗಳಿಗೆ ನುಗ್ಗುವುದಕ್ಕೆ ಕಾರಣ ಮನುಷ್ಯರೇ ತಾನೆ? ಹೀಗಾಗಿ ಕಾಡು ಹಾಗೂ ಪ್ರಾಣಿಗಳ ಸಂರಕ್ಷಣೆಗೆ ಏನೇ ಕಾನೂನು, ಕಾಯ್ದೆ ತಂದರೂ ಆಗದು. ಮನುಷ್ಯರ ಮನಸ್ಥಿತಿ ಬದಲಾಗಬೇಕು. ಕಾಡನ್ನು ಪ್ರೀತಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಕಾಡನ್ನು ಕಾಪಾಡಬಹುದು’ ಎಂದು ಅವರು ಹೇಳಿದರು.

ಅಗತ್ಯ ವಸ್ತುಗಳ ಪೂರೈಕೆ:

‘ಕಾಡಿಗೆ ಬೆಂಕಿ ಬೀಳುತ್ತಿದಂತೆ ಅರಣ್ಯ ಸಿಬ್ಬಂದಿ ಜತೆ ಪರಿಸರ ಪ್ರೇಮಿಗಳು, ಸುತ್ತಮುತ್ತಲ ಗ್ರಾಮಸ್ಥರು, ಸ್ವಯಂ ಸೇವಕರು ಕೈಜೋಡಿಸಿ ಬಂಡೀಪುರಕ್ಕೆ ಹೋಗಿದ್ದಾರೆ. ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ನನ್ನಿಂದ ಪೂರೈಕೆ ಮಾಡಿದ್ದೇನೆ. ಜ್ಯೂಸ್‌, ನೀರು, ಆಹಾರ ಮತ್ತು ಬೆಂಕಿಯಿಂದ ರಕ್ಷಣೆ ಮಾಡುವಂಥ ವಸ್ತುಗಳನ್ನು ಅರಣ್ಯ ಅಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದೇನೆ. ಅವರು ಯಾವೆಲ್ಲ ನೆರವು ಕೇಳುತ್ತಾರೋ ಅದನ್ನು ಕೊಡಲು ನಾನು ಸಿದ್ಧನಾಗಿದ್ದೇನೆ. ಒಂದಷ್ಟುಕಾಡು ಉಳಿಯಲಿ ಎನ್ನುವುದೇ ನನ್ನ ಪ್ರಾರ್ಥನೆ’ ಎಂದರು.

ಮಾ.1ಕ್ಕೆ ಬಂಡೀಪುರ ಭೇಟಿ

‘ನಾನು ಬಂಡೀಪುರಕ್ಕೆ ಮಾ.1ರಂದು ಭೇಟಿ ನೀಡುತ್ತಿದ್ದೇನೆ. ಒಂದು ವಾರ ಅಲ್ಲೇ ಇರುತ್ತೇನೆ. ಕಾಡು ಬೆಳೆಸುವುದು ಅಂದರೆ ಸುಲಭದ ಮಾತಲ್ಲ. ಒಂದು ಮರ ಬೆಳೆಯುವುದಕ್ಕೆ ತುಂಬಾ ವರ್ಷಗಳೇ ಬೇಕು. ಎಲ್ಲೋ ಒಂದು ಕಡೆ ಸಸಿ ಬೆಳೆಸಿ, ನಾವು ಅರಣ್ಯ ಬೆಳೆಸುತ್ತಿದ್ದೇವೆ ಎಂದು ಆ ಗಿಡದ ಜತೆ ಸೆಲ್ಫಿ ತೆಗೆಸಿಕೊಂಡರೆ ಆಗಲ್ಲ. ಇದನ್ನು ಕಾಡುಗಳ್ಳರು ಅರ್ಥ ಮಾಡಿಕೊಳ್ಳಬೇಕು’ ಎಂದು ದರ್ಶನ್‌ ಹೇಳಿದರು. ಮಾ.1ರಿಂದ 3ರವರೆಗೆ ನನ್ನ ಫೋಟೋ ಪ್ರದರ್ಶನ ನಿಗದಿಯಾಗಿತ್ತು. ಅದನ್ನೂ ರದ್ದುಗೊಳಿಸಿದ್ದೇನೆ. ಮಾ.1ರಂದು ನಿಗದಿ ಆಗಿದ್ದ ವೈಲ್ಡ್‌ ಲೈಫ್‌ ಫೋಟೋಗ್ರಫಿ ಪ್ರದರ್ಶನವನ್ನು ಸ್ಥಗಿತ ಮಾಡಿ ನಾನು ಬಂಡೀಪುರಕ್ಕೆ ಹೋಗುತ್ತಿದ್ದೇನೆ ಎಂದರು.