ಮಂಟೂರ ಮಠದಲ್ಲಿ ಭಾವೈಕ್ಯತೆಯ ಭಾವನೆ: ಆರೂಢ ಧಾಮ ಎಂಬ 'ನಮ್ಮನೆ'!
ಹಿಂದೂ-ಮುಸ್ಲಿಂರ ಭಾವೈಕ್ಯತೆ ತಾಣವಾದ ಮಂಟೂರ ಮಠದಲ್ಲಿ ಅದ್ಭುತ ಅಕ್ಷರಧಾಮ ಮಾದರಿ| ಸದಾನಂದ ಸ್ವಾಮಿಜಿಗಳ ನೇತೃತ್ವದಲ್ಲಿ ಭಕ್ತರ ದೇಣಿಗೆಯಿಂದಲೇ ನಿರ್ಮಾಣವಾಗಿರೋ ಪ್ರವಾಸಿ ತಾಣ| ಸ್ವಾಮೀಜಿ ರಜತಮಹೋತ್ಸವಕ್ಕೆ ಮುಸ್ಲಿಂ ಭಾಂದವರಿಂದ 251 ಉಚಿತ ಸಾಮೂಹಿಕ ವಿವಾಹ| ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ಕಂಗೊಳಿಸುತ್ತಿದೆ ಮಂಟೂರ ಆರೂಢ ಧಾಮ| ಶಿವಲೋಕ, ಪಕ್ಷಿಧಾಮಗಳ ಮಧ್ಯೆ ಇದೀಗ ಸಿದ್ದಾರೂಢರ ಸಾಂಸ್ಕೃತಿಕ ವಿಹಾರ ಉದ್ಘಾಟನೆ
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಫೆ.14): ಅದೊಂದು ಪುಟ್ಟ ಗ್ರಾಮ, ಆ ಗ್ರಾಮದಲ್ಲಿ ಗ್ರಾಮಸ್ಥರ ಸಹಕಾರದಿಂದ ಹುಟ್ಟಿಕೊಂಡದ್ದು ಸಿದ್ದಾರೂಢರ ಮಠ, ಈ ಮಠದ ಸ್ವಾಮಿಜಿಯೊಬ್ರು ಗ್ರಾಮದ ಹಿಂದೂ-ಮುಸ್ಲಿಂ ಸೇರಿದಂತೆ ಎಲ್ಲ ಧರ್ಮಿಯರು ಜಾತಿ ಭೇದ ಎನ್ನದೆ ದೇಣಿಗೆ ಸಂಗ್ರಹಿಸಿ ಇದೀಗ ಇಡೀ ರಾಜ್ಯವೇ ನೋಡುವಂತಹ ಅದ್ಭುತ ಪ್ರವಾಸಿತಾಣವನ್ನಾಗಿ ರೂಪಿಸಿದ್ದಾರೆ. ಈ ಮಧ್ಯೆ ದೆಹಲಿಯ ಅಕ್ಷರಧಾಮ ಮಾದರಿ ಹೋಲುವ ಕಟ್ಟಡ ಇದೀಗ ರಾಜ್ಯ ಹೊರರಾಜ್ಯದ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.
ಹೀಗೆ ಎತ್ತ ನೋಡಿದ್ರೂ ವಿಶಿಷ್ಟ ಕಲಾಕೃತಿಗಳ ಸೊಬಗು, ಒಂದೆಡೆ ಸಂಗೀತ ಕಾರಂಜಿ ನೃತ್ಯ, ಮತ್ತೊಂದೆಡೆ ಶಿವಲೋಕ ಮತ್ತು ಪಕ್ಷಿಲೋಕ, ಇವುಗಳ ಮಧ್ಯೆ ಸರ್ವಧರ್ಮಿಯರೊಂದಿಗೆ ಸಮಾಲೋಚನೆ ಮಾಡ್ತಿರೋ ಸ್ವಾಮೀಜಿಗಳು.
ಇಂತಹವೊಂದು ದೃಶ್ಯಗಳು ಕಂಡು ಬರೋದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರ ಸಿದ್ದಾರೂಢರ ಮಠದಲ್ಲಿ. ಗ್ರಾಮದ ಸಿದ್ದಾರೂಢರ ಮಠಕ್ಕೆ ಸದಾನಂದ ಸ್ವಾಮೀಜಿಗಳನ್ನ ಕಳೆದ 25 ವರ್ಷದ ಹಿಂದೆ ಪೀಠಾಧಿಪತಿಗಳನ್ನಾಗಿ ಮಾಡಲಾಯಿತು. ಸದಾ ಒಂದಿಲ್ಲೊಂದು ಹೊಸತನದೆಡೆಗೆ ಯೋಚಿಸೋ ಶ್ರೀಗಳು ಒಮ್ಮೆ ಉತ್ತರ ಭಾರತದ ಪ್ರವಾಸಕ್ಕೆ ಹೋದಾಗ ಅವರ ಕಣ್ಮುಂದೆ ಬಂದಿದ್ದು ದೆಹಲಿ ಮತ್ತು ಗುಜರಾತಿನ ಅಕ್ಷರಧಾಮ ಕಟ್ಟಡಗಳು.
"
ಇದನ್ನ ಕಂಡ ಸದಾನಂದ ಶ್ರೀಗಳು ತಮ್ಮ ಮಠದಲ್ಲಿ ಇಂತಹ ಅಕ್ಷರಧಾಮ ಮಾದರಿ ಕಟ್ಟಡ ಕಟ್ಟೋ ಸಂಕಲ್ಪ ಮಾಡಿದ್ರು. ಇದಕ್ಕಾಗಿ ಸಕಲ ಭಕ್ತರ ಸಹಾಯವನ್ನ ಪಡೆದು,ಮಠದ ಆವರಣದಲ್ಲಿ ಒಂದಿಲ್ಲೊಂದು ಹೊಸ ಕಟ್ಟಡಗಳನ್ನ ಕಟ್ಟುತ್ತಾ ಶಿವಲೋಕ, ಪಕ್ಷಿಲೋಕ, ಸಂಗೀತ ಕಾರಂಜಿ, ಭೂತದ ಮನೆ ಹೀಗೆ ಅನೇಕ ಕಟ್ಟಡಗಳ್ನ ನಿರ್ಮಿಸಿ ಇದೀಗ ದೋಣಿ ಮೂಲಕ ನಾಡಿನ ಸಂಸ್ಕೃತಿ ಪರಂಪರೆಯನ್ನ ಸಾರುವ ಸಿದ್ದಾರೂಢರ ಸಾಂಸ್ಕೃತಿಕ ವಿಹಾರ ನಿರ್ಮಿಸಿದ್ದು, ಶ್ರೀಗಳ ಪಟ್ಟಾಧಿಕಾರದ ರಜತಮಹೋತ್ಸವ ನೆನಪಿಗಾಗಿ ಅದನ್ನ ಲೋಕರ್ಪಣೆ ಮಾಡಲು ಭಕ್ತರು ಸಜ್ಜುಗೊಳಿಸಿದ್ದಾರೆ.
"
ಇನ್ನು ಸದಾನಂದ ಶ್ರೀಗಳು ಶಿಕ್ಷಣ ಸಂಸ್ಥೆ ತೆರೆದು ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯ ಮಾಡೋದ್ರ ಜೊತೆಗೆ ಈ ಮಂಟೂರ ಮಠ ಭಾವೈಕ್ಯತೆಯ ತಾಣವಾಗುವಂತೆ ಮಾಡಿದ್ದು ನಿತ್ಯವೂ ಸಾವಿರಾರು ಜನ ಹಿಂದೂ ಮುಸ್ಲಿಂ ಭಕ್ತರು ಬಂದು ಭೇಟಿ ನೀಡ್ತಾರೆ. ಈ ಬಾರಿ ವಿಶೇಷ ಅಂದ್ರೆ ಫೆ.15ರಿಂದ ಸದಾನಂದ ಶ್ರೀಗಳ ಪಟ್ಟಾಧಿಕಾರದ ರಜತಮಹೋತ್ಸವ ಕಾರ್ಯಕ್ರಮಕ್ಕೆ ಈಗಾಗಲೇ ತಯಾರಿ ಆರಂಭವಾಗಿದ್ದು, ಇತ್ತ ಮುಸ್ಲಿಂ ಜನಾಂಗದವರೇ ಮುಂದೆ ನಿಂತು 251 ಉಚಿತ ಸಾಮೂಹಿಕ ವಿವಾಹ ಮಾಡಿಕೊಡಲು ನಿರ್ಧರಿಸಿದ್ದಾರೆ.
"
ಮುಸ್ಲಿಂ ಭಾಂದವರಿಂದಲೇ ವಧುವಿಗೆ ತಾಳಿ, ಕಾಲುಂಗರಗಳನ್ನ ನೀಡಲಾಗುತ್ತೇ. ಹೀಗಾಗಿ ಈ ಮಠ ಮತ್ತೊಮ್ಮೆ ಬಾವೈಕ್ಯತೆ ಸಂದೇಶ ಸಾರಲು ಸಜ್ಜಾಗಿದೆ. ಇನ್ನು ಮಂಟೂರ ಮಠ ಇದೀಗ ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿ ರೂಪಗೊಂಡಿದ್ದು, ನಿತ್ಯವೂ ಸಾವಿರಾರು ಜನ ಅದ್ರಲ್ಲೂ ಶಾಲಾ ಮಕ್ಕಳು ಸೇರಿದಂತೆ ಪ್ರವಾಸಿಗರು ರಾಜ್ಯವಲ್ಲದೆ ಮಹಾರಾಷ್ಟ್ರ,ಆಂದ್ರಪ್ರದೇಶ ಸೇರಿ ಹೊರರಾಜ್ಯಗಳಿಂದಲೂ ಆಗಮಿಸ್ತಾರೆ. ಇಂತಹ ಧಾರ್ಮಿಕ ತಾಣದಲ್ಲಿ ನಾವಿರೋದೆ ನಮ್ಮ ಪುಣ್ಯ ಅಂತಾರೆ ಮುಸ್ಲಿಂ ಭಾಂಧವರು.
"
ಒಟ್ಟಿನಲ್ಲಿ ಐತಿಹಾಸಿಕ ಪರಂಪರೆ ಸಾರುವ ಪ್ರವಾಸಿ ತಾಣಗಳನ್ನ ಹೊಂದಿರೋ ಬಾಗಲಕೋಟೆ ಜಿಲ್ಲೆಗೆ ಇದೀಗ ಮಂಟೂರ ಸದಾನಂದ ಸ್ವಾಮೀಜಿಗಳ ಅಭಿವೃದ್ಧಿಯ ನೋಟದ ಫಲವಾಗಿ ಮತ್ತೊಂದು ಭಾವೈಕ್ಯತೆ ಸಾರುವ ಪ್ರವಾಸಿ ತಾಣವೊಂದು ಸಿದ್ದಾರೂಢರ ಮಠದಲ್ಲಿ ತಲೆ ಎತ್ತಿ ನಿಂತಿದೆ. ಇಂತಹ ತಾಣಕ್ಕೆ ಸರ್ಕಾರ ಕೈ ಜೋಡಿಸೋ ಮೂಲಕ ಇನ್ನಷ್ಟು ಅಭಿವೃದ್ಧಿಯಾಗಿ,ಹಿಂದೂ ಮುಸ್ಲಿಂ ಭಾವೈಕ್ಯತೆ ಸಂದೇಶ ಸಾರುವ ಈ ಮಠ ಅಭಿವೃದ್ಧಿ ಪಥದತ್ತ ಸಾಗಲಿ ಅನ್ನೋದೆ ಭಕ್ತರ ಆಶಯ.