Panchamasali 2A ಮೀಸಲಿಗೆ ಹಿಂದುಳಿದ ಜಾತಿಗಳ ವಿರೋಧ: ಆಯೋಗಕ್ಕೆ ಮನವಿ!

ಒಟ್ಟು ಮೀಸಲಾತಿ ಪ್ರಮಾಣ ಹೆಚ್ಚಳ ಮಾಡದ ಹೊರತು ಇತರೆ ಯಾವುದೇ ಜಾತಿಯನ್ನು ‘ಪ್ರವರ್ಗ 2ಎ’ಗೆ ಸೇರಿಸಬಾರದು ಎಂದು  ರಾಜ್ಯದ ವಿವಿಧ ಹಿಂದುಳಿದ ಜಾತಿ ಸಂಘಟನೆಗಳು ಆಗ್ರಹಿಸಿವೆ.

Backward castes Opposing 2A Reservation for Panchamasali in Karnataka mnj

ಬೆಂಗಳೂರು (ಜ.4): ಪ್ರಬಲವಾಗಿರುವ ಪಂಚಮಸಾಲಿ ಲಿಂಗಾಯತ (Panchamasali Lingayata) ಸಮುದಾಯವನ್ನು ‘ಪ್ರವರ್ಗ 2ಎ’ ವರ್ಗಕ್ಕೆ ಸೇರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರಾಜ್ಯದ ವಿವಿಧ ಹಿಂದುಳಿದ ಜಾತಿ ಸಂಘಟನೆಗಳು, ಒಟ್ಟು ಮೀಸಲಾತಿ (Reservation) ಪ್ರಮಾಣ ಹೆಚ್ಚಳ ಮಾಡದ ಹೊರತು ಇತರೆ ಯಾವುದೇ ಜಾತಿಯನ್ನು ‘ಪ್ರವರ್ಗ 2ಎ’ಗೆ ಸೇರಿಸಬಾರದು ಎಂದು ಆಗ್ರಹಿಸಿವೆ. ಪ್ರಸ್ತುತ ‘ಪ್ರವರ್ಗ 2ಎ’ರಲ್ಲಿ 102 ಜಾತಿಗಳಿಗೆ ಒಟ್ಟು ಮೀಸಲಾತಿಯಲ್ಲಿ ಶೇ.15ರಷ್ಟುಮಾತ್ರ ನೀಡಲಾಗಿದೆ. ಇದೀಗ ಇದೇ ಪ್ರವರ್ಗಕ್ಕೆ ಮತ್ತಷ್ಟುಜಾತಿಗಳನ್ನು ಸೇರಿಸಿದಲ್ಲಿ ಬಡ ವರ್ಗದವರು (Poor) ಮೀಸಲಾತಿಯಿಂದ ವಂಚಿತರಾಗಲಿದ್ದಾರೆ. ಆದ್ದರಿಂದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡದ ಹೊರತು ಇತರೆ ಯಾವುದೇ ಜಾತಿಯನ್ನು ‘ಪ್ರವರ್ಗ 2ಎ’ ಗೆ ಸೇರಿಸಬಾರದು ಎಂದು ಸಂಘಟನೆಗಳು ಹಿಂದುಳಿದ ವರ್ಗಗಳ ಆಯೋಗಕ್ಕೆ ಆಗ್ರಹಿಸಿವೆ.

ಆಯೋಗಕ್ಕೆ ಮನವಿ!

ಈ ಕುರಿತಂತೆ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ರಾಜ್ಯ ತೊಗಟವೀರ ಕ್ಷತ್ರಿಯ ಸಂಘ, ಹಿಂದುಳಿದ ವರ್ಗಗಳ ಪ್ರವರ್ಗ 2ಎ ಹಿತರಕ್ಷಣಾ ವೇದಿಕೆ, ರಾಜ್ಯ ಕಾಯಕ ಸಮಾಜಗಳ ಒಕ್ಕೂಟ, ಹಾಲುಮತ ಮಹಾಸಭಾ, ರಾಜ್ಯ ನೇಕಾರರ ಸಂಘ, ದೇವಾಂಗ ಸಂಘ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಆಯೋಗಕ್ಕೆ ಮನವಿ ಮಾಡಿದ್ದಾರೆ. ತಮಿಳುನಾಡು ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.69ಕ್ಕೆ ಹೆಚ್ಚಳ ಮಾಡಿದ ರೀತಿಯಲ್ಲಿ ರಾಜ್ಯದಲ್ಲಿಯೂ ಒಟ್ಟು ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು. ಆ ನಂತರ ಪಂಚಮಸಾಲಿ ಲಿಂಗಾಯತರನ್ನು ‘ಪ್ರವರ್ಗ 2ಎ’ಗೆ ಸೇರಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಇದನ್ನೂ ಓದಿ: Panchamasali Reservation: ಮಾಜಿ ಸಿಎಂ ಬಿಎಸ್‌ವೈ ಕೈಕೊಟ್ಟಿದ್ದಾರೆ: ಕೂಡಲ ಶ್ರೀ

ರಾಜ್ಯದಲ್ಲಿ ವಿವಿಧ ಕುಲಕಸುಬುಗಳನ್ನು ಮುಂದುವರೆಸಿಕೊಂಡು ಬಂದಿರುವ ಜಾತಿಗಳನ್ನು ಮಾತ್ರ ‘ಪ್ರವರ್ಗ 2ಎ’ರಲ್ಲಿ ಸೇರಿಸಲಾಗಿತ್ತು. ಇದೀಗ ಪ್ರಬಲ ಸಮುದಾಯದವರನ್ನು ಸೇರಿಸಲು ಸರ್ಕಾರ ಮುಂದಾಗಿದೆ. ಇದರಿಂದ ನೂರಾರು ವರ್ಷಗಳ ಕಾಲ ಕುಲಕಸಬಿನಲ್ಲಿ ತೊಡಗಿರುವವರು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಉನ್ನತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಾವಕಾಶಗಳನ್ನು ಪಡೆಯಲು ಅಡ್ಡಿಯಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಪಂಚಮಸಾಲಿ ಲಿಂಗಾಯತರನ್ನು ಪ್ರವರ್ಗ 2ಎಗೆ ಸೇರಿಸಬಾರದು ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ವೆಂಕಟರಾಮಯ್ಯ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ವರದಿ ಅನುಷ್ಠಾನ ಮಾಡಿ:

ಹಿಂದುಳಿದ ವರ್ಗಗಳ ಆಯೋಗ ರಾಜ್ಯದಲ್ಲಿ ಎಲ್ಲ ಸಮುದಾಯಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ (Economical, Social, Educational) ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ವರದಿಯನ್ನು (Report) ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿ ಆಧಾರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಸೌಲಭ್ಯ ಮಂಜೂರು ಮಾಡಬೇಕು. ಆದರೆ, ರಾಜಕೀಯ ಕಾರಣಗಳಿಗೆ ಮೀಸಲಾತಿ ನೀಡುವುದು ಕಾನೂನು ಬಾಹಿರ ಎಂದು ಅವರು ಹೇಳಿದರು.

ಮೀಸಲಾತಿ ಪ್ರಮಾಣ ಹೆಚ್ಚಿಸಿ:

ಪ್ರಸ್ತುತ ತಮಿಳುನಾಡಿದಲ್ಲಿ (Tamil Nadu) ಶೇ.69 ರಷ್ಟುಮೀಸಲಾತಿ ನೀಡಲಾಗುತ್ತಿದೆ. ಅದೇ ರೀತಿಯಲ್ಲಿ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು. ಆ ಬಳಿಕ ಎಲ್ಲ ಜಾತಿಗಳ ಜನಸಂಖ್ಯೆಗೆ (Population) ಅನುಗುಣವಾಗಿ ಸಮೀಕ್ಷೆ (Survey) ನಡೆಸಿ ಮೀಸಲಾತಿ ಪ್ರಮಾಣವನ್ನು ಮರುನಿಗದಿ ಪಡಿಸಬೇಕು ಎಂದು ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮೇನಾರಾಯಣ ತಮ್ಮ ಮನವಿಯಲ್ಲಿ ಕೋರಿದ್ದಾರೆ.

Latest Videos
Follow Us:
Download App:
  • android
  • ios