ಬೆಂಗಳೂರು(ಸೆ.09): ಕರ್ನಾಟಕ ತಂತ್ರಜ್ಞಾನ, ಔದ್ಯೋಗಿಕ, ವಾಣಿಜ್ಯ, ಪ್ರವಾಸೋದ್ಯಮ ಕ್ಷೇತ್ರ ಸೇರಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡು ಮುನ್ನಡೆಯುತ್ತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಅಕ್ಕ ವರ್ಚುಯಲ್‌ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವದ ಗಮನ ಸೆಳೆಯಲು ಇಬ್ಬರು ಭಾರತದ ಸುಪುತ್ರರಿಗೆ ಅಮೆರಿಕದ ನೆಲ ವೇದಿಕೆ ಕಲ್ಪಿಸಿಕೊಟ್ಟಿದೆ. ಒಬ್ಬರು ಅಂದಿನ ನರೇಂದ್ರ (ಸ್ವಾಮಿ ವಿವೇಕಾನಂದ) ಹಾಗೂ ಮತ್ತೊಬ್ಬರು ಇಂದಿನ ನರೇಂದ್ರ ಅಂದರೆ ಪ್ರಧಾನಿ ನರೇಂದ್ರ ಮೋದಿ. ಅಮೆರಿಕಾದ ಶಿಕಾಗೋ ನೆಲದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ ಇಂದಿಗೂ ನಮಗೆ ಸ್ಫೂರ್ತಿಯ ಸೆಲೆ. ಅಂದು ಯುವಶಕ್ತಿಯನ್ನು ತಮ್ಮತ್ತ ಸೆಳೆದುಕೊಂಡ ವಿವೇಕಾನಂದರ ನಂತರ ವಿಶ್ವವೇ ನಿಬ್ಬೆರಗಾಗುವಂತೆ ಯುವ ಜನರನ್ನು ಆಕರ್ಷಿಸಿದ್ದು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಮಾತ್ರ. ಅವರಿಗೆ ಸಿಕ್ಕ ವಿಶ್ವಮಾನ್ಯತೆ ಒಂದು ವಿಶ್ವದಾಖಲೆ ಎಂದರು.

ನನ್ನ ಗುರಿ ಸ್ಪಷ್ಟವಾಗಿದೆ ಎಂದ ವಿಜಯೇಂದ್ರ: ಏನಿರಬಹುದು ತಂತ್ರ..?

ಭಾರತವನ್ನು ಮುಂಚೂಣಿ ಸ್ಥಾನದಲ್ಲಿ ನಿಲ್ಲಿಸುವಲ್ಲಿ ಸಮರ್ಥ ರಾಜಕೀಯ ನಾಯಕತ್ವ ಮೋದಿ ಅವರ ಮೂಲಕ ದೊರಕಿದೆ. ಅವರ ಸ್ವಾವಲಂಬಿ, ಸ್ವಾಭಿಮಾನಿ ಭಾರತ ನಿರ್ಮಾಣದ ಸಂಕಲ್ಪಕ್ಕೆ ದನಿಗೂಡಿಸಿ ಈಗಾಗಲೇ ಪ್ರಶಂಸೆಗೆ ಒಳಗಾಗಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಲಿಷ್ಠ ಭಾರತ, ಸಮೃದ್ಧ ಕರ್ನಾಟಕವನ್ನು ಸಜ್ಜುಗೊಳಿಸಲು ಪಣತೊಟ್ಟು ನಿಂತಿದ್ದಾರೆ. ಪ್ರಧಾನಿ ಮೋದಿ ಅವರ ಸಂಕಲ್ಪದ ರಥ, ಸಾರ್ಥಕ ಗುರಿ ತಲುಪಲು ಮುಂಚೂಣಿಯಲ್ಲಿದ್ದು ಹೆಗಲು ಕೊಡುವ ಕಾಯಕ ತಮ್ಮದಾಗಬೇಕು ಎಂಬುದು ಯಡಿಯೂರಪ್ಪ ಅವರ ಪ್ರತಿಜ್ಞೆಯಾಗಿದೆ ಎಂದು ತಿಳಿಸಿದರು.

ಹಲವು ದೇಶಗಳು ಕೊರೋನಾ ನಂತರ ಭಾರತದತ್ತ ಭರವಸೆಯ ದೃಷ್ಟಿಹರಿಸುತ್ತಿವೆ. ವಿಶ್ವ ಜನಸಂಖ್ಯೆಯಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಭಾರತ ಮಾತ್ರ ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡುವ ಶಕ್ತಿ ಹೊಂದಿದೆ. ಹಾಗಾಗಿ ಭಾರತಕ್ಕೆ ಪರ್ವ ಕಾಲ ಆರಂಭವಾಗಿದ್ದು, ವಿಶ್ವದೆಲ್ಲೆಡೆ ಹರಿದು ಹಂಚಿ ಹೋಗಿರುವ ಭಾರತೀಯರು ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ಒಗ್ಗೂಡಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.