Bengaluru: ಮೇಲ್ಸೇತುವೆಯಿಂದ ಬಿದ್ದು ಆಟೋ ಚಾಲಕ ಸಾವು: ಹೃದಯಾಘಾತ ಶಂಕೆ
ಶ್ರೀರಾಮಪುರ ಸಮೀಪದ ವೆಳ್ಳಿಪುರದ ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಆಟೋ ಚಾಲಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ಬೆಂಗಳೂರು (ಏ.4) : ಶ್ರೀರಾಮಪುರ ಸಮೀಪದ ವೆಳ್ಳಿಪುರದ ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಆಟೋ ಚಾಲಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ಸ್ವತಂತ್ರಪಾಳ್ಯದ ನಿವಾಸಿ ಅಬ್ರಾಹಂ (30) ಮೃತ ದುರ್ದೈವಿ. ಮೇಲ್ಸೇತುವೆಯಿಂದ ಕೆಳಗೆ ಅಪರಿಚಿತ ಮೃತದೇಹ ನೋಡಿ ಪೊಲೀಸರಿಗೆ ಸ್ಥಳೀಯರು ತಿಳಿಸಿದ್ದಾರೆ. ಈ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲಿಸಿದಾಗ ಮೃತನ ಗುರುತು ಪತ್ತೆಯಾಗಿದೆ. ಮೃತದೇಹದ ಮೇಲೆ ಗಂಭೀರ ಸ್ವರೂಪದ ಯಾವುದೇ ಗಾಯದ ಕುರುಹು ಪತ್ತೆಯಾಗಿಲ್ಲ. ಹೀಗಾಗಿ ಮೇಲ್ಸೇತುವೆಯಲ್ಲಿದ್ದಾಗ ಹೃದಯಾಘಾತ ಸಂಭವಿಸಿ ಅಬ್ರಾಹಂ ಕೆಳಗೆ ಬಿದ್ದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ತಲೆಗೆ 25 ಲಕ್ಷ ಬಹುಮಾನ ಘೋಷಿಸಲ್ಪಟ್ಟಿದ್ದ ಇಬ್ಬರೂ ಸೇರಿ ಐವರು ನಕ್ಸಲರ ಹತ್ಯೆ
ಮೃತ ಅಬ್ರಾಹಂ ಆಟೋ ಚಾಲಕ(Auto driver abrahm)ನಾಗಿದ್ದು, ತನ್ನ ಕುಟುಂಬದ ಜತೆ ಆತ ವಾಸವಾಗಿದ್ದ. ಕೆಲ ದಿನಗಳ ಹಿಂದೆ ಮಾದಕ ವ್ಯಸನ ಹಿನ್ನಲೆಯಲ್ಲಿ ವ್ಯಸನ ಮುಕ್ತ ಕೇಂದ್ರಕ್ಕೆ ಆತನನ್ನು ಸೇರಿಸಿದ್ದರು. ಆದರೆ ಅಬ್ರಾಹಂ ವಿರುದ್ಧ ಮಾದಕ ವಸ್ತು ಸಂಬಂಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆರ್‌ಎಂಸಿ ಯಾರ್ಡ್ ಹಾಗೂ ಶ್ರೀರಾಮಪುರ ಠಾಣೆಗಳಲ್ಲಿ ಅಬ್ರಾಹಂ ಮೇಲೆ ಬೇರೆ ಅಪರಾಧ ಪ್ರಕರಣಗಳಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೆಳ್ಳಿಪುರ ಮೇಲ್ಸೇತುವೆ(Vellipur flyover) ಬಳಿಕ ಮಧ್ಯಾಹ್ನ 2ರ ಸುಮಾರಿಗೆ ಅಬ್ರಾಹಂ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷಾ ವರದಿ ಸಿಕ್ಕ ಬಳಿಕ ಘಟನೆಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಬೆನ್ನಟ್ಟಿದಾಗ ಕೆಳಗೆ ಬಿದ್ದ: ಆರೋಪ
ಗಾಂಜಾ ಸೇವನೆ ಸಂಬಂಧ ಪೊಲೀಸರು ಬಂಧಿಸಲು ತೆರಳಿದ್ದಾಗ ಭಯಗೊಂಡು ಮೇಲ್ಸೇತುವೆಯಿಂದ ಅಬ್ರಾಹಂ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಮೃತನ ಕುಟುಬಂದವರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.
ವೆಳ್ಳಿಪುರ ಮೇಲ್ಸೇತುವೆ ಬಳಿ ಪುಂಡರು ಗಾಂಜಾ ಸೇವಿಸುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಮಲ್ಲೇಶ್ವರ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ಮೇಲ್ಸೇತುವೆ ಬಳಿ ಪೊಲೀಸರು ದಾಳಿ ನಡೆಸಿದಾಗ ಇಬ್ಬರು ಗಾಂಜಾ ಪೆಡ್ಲರ್‌ಗಳು ಸಿಕ್ಕಿಬಿದ್ದಿದ್ದಾರೆ. ಆ ವೇಳೆ ಪೊಲೀಸರ ಭಯದಿಂದ ಓಡಿ ಹೋಗಲು ಯತ್ನಿಸಿದ ಅಬ್ರಾಹಂ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನಲ್ಲಿ ವಿವಾಹಿತ ಮಹಿಳೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಅಳಿಯನ ವಿರುದ್ಧ ಕೊಲೆ ಆರೋಪ
‘ಪೊಲೀಸರ ದಾಳಿಗೂ ಅಬ್ರಾಹಂ ಸಾವಿಗೂ ಸಂಬಂಧವಿಲ್ಲ. ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಕರುಣಾಕರ್ ಸೇರಿ ಇಬ್ಬರನ್ನು ಬಂಧಿಸಿದ್ದೇವೆ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಗ್ನಿಕೊಂಡ ಹಾಯುವ ವೇಳೆ ಕುಸಿದು ಬಿದ್ದು ಅರ್ಚಕ ಸಾವು:
ಕನಕಪುರ (ಏ.4): ಅಗ್ನಿಕೊಂಡ ನೆರವೇರುವ ಮುನ್ನವೇ ಅರ್ಚಕ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಾವತ್ತೂರು ಗ್ರಾಮದಲ್ಲಿ ನಡೆದಿದೆ. ಬೂದಿಗೂಪ್ಪೆ ಗ್ರಾಮ ಪಂಚಾಯಿತಿಯ ಮಾವತ್ತೂರು ಗ್ರಾಮದಲ್ಲಿ ಮಾವತ್ತೂರಮ್ಮ ದೇವಾಲಯದ ಅರ್ಚಕ ನಾಗರಾಜು ಮೃತರು. ಸೋಮವಾರ ಬೆಳಗ್ಗೆ ಮಾವತ್ತೂರಮ್ಮ ದೇವಿಯ ಅಗ್ನಿ ಕೊಂಡೋತ್ಸವದ ಅಂಗವಾಗಿ ಗ್ರಾಮದಲ್ಲಿ ಮೆರವಣಿಗೆ ಮೂಲಕ ದೇವರನ್ನು ಅಗ್ನಿಕೊಂಡಕ್ಕೆ ಕರೆತರುವ ವೇಳೆ ಗ್ರಾಮದ ಮಹಿಳೆಯೊಬ್ಬಳು ಕಳಶಹೊತ್ತ ಅರ್ಚಕನ ಮುಂದೆ ವಿಚಿತ್ರವಾಗಿ ಕುಣಿಯಲಾರಂಭಿಸಿದರು. ಈ ವೇಳೆ ಅರ್ಚಕ ನಾಗರಾಜು ಮಹಿಳೆಗೆ ಬೆತ್ತದಿಂದ ಒಡೆಯುತ್ತಿದ್ದಂತೆ ಮಹಿಳೆ ಅರ್ಚಕರ ಕಾಲಿಗೆ ಬಿದ್ದಿದ್ದಾಳೆ. ಈ ವೇಳೆ ಅರ್ಚಕ ನಾಗರಾಜು ಕುಸಿದು ಕೆಳಗೆ ಬಿದ್ದಿದ್ದಾರೆ. ಭಕ್ತರು ತಕ್ಷಣ ಅರ್ಚಕರನ್ನು ನಗರದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.