ಬೆಂಗಳೂರು, (ಮೇ.18):  ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ 5000 ಪರಿಹಾರ ಧನ ಫಲಾನುಭವಿಗಳಿಗೆ ಸಿಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಆದ್ಮೇಲೆ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ರಾಜ್ಯದ ಆಟೋ ಮತ್ತು ಟ್ಯಾಕ್ಸಿ, ಕ್ಯಾಬ್ ಚಾಲಕರಿಗೆ 5 ಸಾವಿರ ರೂಪಾಯಿಯ ಪರಿಹಾರ ಕೊಡುತ್ತೇವೆ ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದರು.

ಆದ್ರೆ, 11 ದಿನವಾಗಿದ್ದರೂ ಇದುವರೆಗೂ ಅದು ಟ್ಯಾಕ್ಸಿ ಮತ್ತು ಆಟೋ ಚಾಲಕರ ಕೈ ಸೇರಿಲ್ಲ. ಇದರಿಂದ 11ನೇ ದಿನದ ತಿಥಿ ಕಾರ್ಯ ಮಾಡಿ, ಎಳ್ಳು ನೀರು ಬಿಟ್ಟು, ಆಟೋ, ಟ್ಯಾಕ್ಸಿ ಚಾಲಕ ಆಸೋಸಿಯೇಷನ್ ವಿನೂತನವಾಗಿ ಪ್ರತಿಭಟನೆ ಮಾಡಿದೆ.

ಲಾಕ್‌ಡೌನ್ 4.0: ಬಸ್, ಆಟೋ, ಟ್ಯಾಕ್ಸಿ ರಸ್ತೆಗಿಳಿಯೋದು ಪಕ್ಕಾ!

ಬೆಂಗಳೂರಿನ ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯ ಮುಂದೆ ಚಾಲಕರು ಪ್ರತಿಭಟನೆ ಮಾಡಿದ್ದು, ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಅಸಮಾಧಾನ ಹೊರಹಾಕಿದರು.

ಈ ವೇಳೆ ಮಾತನಾಡಿದ ಓಲಾ, ಊಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್, ಪ್ರತಿ ಚಾಲಕನಿಗೂ 5 ಸಾವಿರ ರುಪಾಯಿ ಹಣ ಘೋಷಣೆ ಮಾಡಿದ್ದಾರೆ. ಬೆಂಗಳೂರಲ್ಲಿ ಏಳು ಲಕ್ಷದ ಎಪ್ಪತ್ತೈದು ಸಾವಿರ ಚಾಲಕರಿದ್ದಾರೆ. ಅವರೆಲ್ಲರಿಗೂ ಪರಿಹಾರ ನೀಡುವುದಾಗಿ ಸ್ವತಃ ಸಿಎಂ ಘೋಷಣೆ ಮಾಡಿದ್ರು. ಆದ್ರೆ ಸದ್ಯ 20 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇವೆ ಅಂತಾ ಕಳಿಸಿದ್ದಾರೆ. 20 ಕೋಟಿಯಲ್ಲಿ 7 ಲಕ್ಷ ಚಾಲಕರಿಗೂ ಹಂಚಿದ್ರೆ 40 ರೂಪಾಯಿ ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಾಲಕರ ಮೇಲೆ ಪ್ರತಿ ದಿನ ಮಾನದಂಡಗಳನ್ನಾ ಏರುತ್ತಲೇ ಹೋಗುತ್ತಿದ್ದಾರೆ. ಸರ್ಕಾರ ಚಾಲಕರಿಗೆ ಮೋಸ ಮಾಡುತ್ತಿದ್ದಾರೆ. ಇದರ ವಿರುದ್ದ ನಾವು ಮುಂದಿನ ದಿನಗಳಲ್ಲಿ ತೀರ್ವವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.