2023-24ನೇ ಸಾಲಿನಲ್ಲಿ ಏಪ್ರಿಲ್‌ರಿಂದ ಜುಲೈವರೆಗೆ ನಾಲ್ಕು ತಿಂಗಳ ಅವಧಿಗೆ ವಿವಿಧ ಕಂತುಗಳಲ್ಲಿ ಹಣ ಬಿಡುಗಡೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. 

ಬೆಂಗಳೂರು(ಏ.02): ರಾಜ್ಯದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ 2023-24ನೇ ಸಾಲಿನ ಬಜೆಟ್‌ಗೆ ಸಂಬಂಧಪಟ್ಟಂತೆ ಅನಿವಾರ್ಯವಾಗಿ ಹಣ ಬಿಡುಗಡೆ ಮಾಡಬೇಕಿರುವ ಯೋಜನೆಗಳಿಗೆ ಹಣ ಒದಗಿಸಲು ಸಂಬಂಧಪಟ್ಟಅಧಿಕಾರಿಗಳಿಗೆ ಆರ್ಥಿಕ ಅಧಿಕಾರ ನೀಡಿ ಹಣಕಾಸು ಇಲಾಖೆ ಆದೇಶ ಹೊರಡಿಸಿದೆ.

2023-24ನೇ ಸಾಲಿನಲ್ಲಿ ಏಪ್ರಿಲ್‌ರಿಂದ ಜುಲೈವರೆಗೆ ನಾಲ್ಕು ತಿಂಗಳ ಅವಧಿಗೆ ವಿವಿಧ ಕಂತುಗಳಲ್ಲಿ ಹಣ ಬಿಡುಗಡೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಆದರೆ, ಯಾವುದೇ ಯೋಜನೆಯಡಿ ಹಣ ಬಿಡುಗಡೆ ಮಾಡುವಾಗ ಚುನಾವಣಾ ಆಯೋಗ ಹೊರಡಿಸಿರುವ ನೀತಿ ಸಂಹಿತೆ ಮಾರ್ಗಸೂಚಿ ಗಮನದಲ್ಲಿಡಬೇಕು ಎಂದು ಆದೇಶದಲ್ಲಿ ತಿಳಿಸಿದೆ.

Udupi: ಚುನಾವಣೆ ನೀತಿ ಸಂಹಿತೆ ಹಿನ್ನೆಲೆ, ಶಸ್ತಾಸ್ತ್ರಗಳ ಠೇವಣಿಗೆ ಜಿಲ್ಲಾಧಿಕಾರಿ ಸೂಚನೆ

ಕಳೆದ ಆರ್ಥಿಕ ವರ್ಷದಿಂದ ಮುಂದುವರಿದ ಯೋಜನೆಗಳಿಗೆ ಮಾತ್ರ ಹಣವನ್ನು ಬಿಡುಗಡೆಗೊಳಿಸಬಹುದು. ಹೊಸ ಯೋಜನೆಗಳಿಗೆ ಚುನಾವಣಾ ನೀತಿ ಸಂಹಿತೆ ಅನ್ವಯವಾಗುತ್ತದೆ. ಹೀಗಾಗಿ ಹೊಸ ಯೋಜನೆಗಳಿಗೆ ಬಿಡುಗಡೆ ಮಾಡಲು ಅಧಿಕಾರ ಇರುವುದಿಲ್ಲ. ಕಾಮಗಾರಿ ಅಂದಾಜುಗಳ ಅನುಮೋದನೆಗೆ 10 ಕೋಟಿ ರು.ವರೆಗೆ ಹಾಗೂ ಸರಕು, ಸೇವೆಗಳ ಸಂಗ್ರಹಣೆಗೆ 10 ಕೋಟಿ ರು.ವರೆಗೆ ಆರ್ಥಿಕ ಇಲಾಖೆಯ ಅನುಮೋದನೆ ಇದೆ ಎಂದು ಭಾವಿಸಿ ಕೆಟಿಪಿಪಿ ಷರತ್ತುಗಳೊಂದಿಗೆ ಅನುದಾನ ನೀಡಬಹುದು.

ಬಜೆಟ್‌ನಲ್ಲಿ ಒದಗಿಸಿರುವ 1ನೇ 3 ಭಾಗದಷ್ಟುಮೊತ್ತ ಏಪ್ರಿಲ್‌ನಿಂದ ಜುಲೈವರೆಗೆ ಒಂದು ಕಂತಿನಲ್ಲಿ ಬಿಡುಗಡೆ ಮಾಡಬಹುದು. ವೈದ್ಯಕೀಯ ವೆಚ್ಚ ಮರುಪಾವತಿಯಲ್ಲಿ ಒದಗಿಸಿರುವ ಅನುದಾನದ 3ನೇ 1 ಭಾಗವನ್ನು ಮೊತ್ತವನ್ನು ಮೊದಲ ಕಂತಿನಲ್ಲಿ ಬಿಡುಗಡೆ ಮಾಡಿ, ಬಳಿಕ ಬೇಡಿಕೆಯನುಸಾರ ಬಿಡುಗಡೆ ಮಾಡಬೇಕು. ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಆಹಾರಧಾನ್ಯ ಒದಗಿಸುವ ಸಹಾಯಧನವನ್ನು ನಾಲ್ಕು ಕಂತುಗಳಲ್ಲಿ ಪಾಗಿಸಬೇಕು ಎಂದು ಹೇಳಲಾಗಿದೆ.

ಲೋಕೋಪಯೋಗಿ ಇಲಾಖೆಯಡಿ ಮುಂದುವರೆದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಬೇಕು. ಇನ್ನು ಐಪಿ ಸೆಟ್‌ಗಳಿಗೆ ಸಬ್ಸಿಡಿ, ಭಾಗ್ಯಜ್ಯೋತಿ, ಕುಟೀರ ಜ್ಯೋತಿಯಂತಹ ಯೋಜನೆಗಳಿಗೆ ಸಂಬಂದಪಟ್ಟಇಲಾಖೆಗಳೊಂದಿಗೆ ಸಮನ್ವಯದೊಂದಿಗೆ ಚುನಾವಣಾ ನೀತಿ ಸಂಹಿತೆ ಅಡಿಯಲ್ಲಿ ಹಣ ಬಿಡುಗಡೆ ಮಾಡಬೇಕು. ಯಾವುದೇ ಕಾರಣಕ್ಕೂ ಹಣ ಬಿಡುಗಡೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಬಾರದು ಎಂದು ಸ್ಪಷ್ಟಪಡಿಸಲಾಗಿದೆ.