* ಸಂಕಷ್ಟದಲ್ಲಿದ್ದ ಶಶಿಕಲಾ ಮಂಜುನಾಥ್ ಕುಟುಂಬ* ಬಿಲ್ ಕಟ್ಟದಿದ್ದರೆ ಶವ ನೀಡಲ್ಲ ಎಂದಿದ್ದ ಆಸ್ಪತ್ರೆ* ತೆಲಂಗಾಣ ಸಿಎಂಗೆ ಡಿಕೆಶಿ ಟ್ವೀಟ್, ಶವ ಹಸ್ತಾಂತರ
ಬೆಂಗಳೂರು(ಮೇ.31): ಹೈದರಾಬಾದ್ ಆಸ್ಪತ್ರೆ ಒಂದರ ಬಿಲ್ ಕಟ್ಟಲಾಗದೆ ಒದ್ದಾಡುತ್ತಿದ್ದ ಮಂಡ್ಯ ಮೂಲದ ಕುಟುಂಬವೊಂದರ ನೆರವಿಗೆ ಧಾವಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾಡಿಕೊಂಡ ಮನವಿಗೆ ತೆಲಂಗಾಣ ಸರ್ಕಾರ ತಕ್ಷಣ ಸ್ಪಂದಿಸಿದ ಹಿನ್ನೆಲೆಯಲ್ಲಿ ಮಂಡ್ಯ ವ್ಯಕ್ತಿಯ ಶವವನ್ನು ಅವರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.
ಮಂಡ್ಯ ಮೂಲದ ಮಂಜುನಾಥ್ ಎಂಬುವರು ಹೈದರಾಬಾದ್‌ನ ಮೆಡಿಕವರ್ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದರು. ಅವರ ಚಿಕಿತ್ಸೆಗೆ 7.50 ಲಕ್ಷ ರು. ವೆಚ್ಚವಾಗಿತ್ತು. ಆದರೆ ಮಂಜುನಾಥ್ ಅವರ ಪತ್ನಿ ಶಶಿಕಲಾ ಅವರಿಗೆ 2 ಲಕ್ಷ ಮಾತ್ರ ಕಟ್ಟಲು ಸಾಧ್ಯವಾಗಿತ್ತು. ಉಳಿದ ಹಣ ಕಟ್ಟದೆ ಶವ ನೀಡುವುದಿಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿ ಪಟ್ಟು ಹಿಡಿದಿತ್ತು.
ಯೋಗಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಿಎಂಗೆ ಹೇಳಿದ ಡಿಕೆಶಿ
ಈ ವಿಚಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ 6.45ಕ್ಕೆ ತೆಲಂಗಾಣ ಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದ ಶಿವಕುಮಾರ್ ಅವರು, ಶಶಿಕಲಾ ಮಂಜುನಾಥ್ ಅವರ ಕುಟುಂಬ ಸಂಕಷ್ಟದಲ್ಲಿದೆ. ಮೆಡಿಕವರ್ ಆಸ್ಪತ್ರೆ ಆಡಳಿತ ಮಂಡಳಿಯಿಂದ ಮಂಜುನಾಥ್ ಮೃತದೇಹ ಕೊಡಿಸಿ ಎಂದು ಮನವಿ ಮಾಡಿದ್ದರು. ಇದಕ್ಕೆ ಅರ್ಧ ಗಂಟೆಯಲ್ಲಿ ಸ್ಪಂದಿಸಿದ ತೆಲಂಗಾಣ ಟಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಸಚಿವ ಕಲ್ವಕುಂಟ್ಲ ತಾರಕ ರಾಮರಾವ್ (ಕೆಟಿಆರ್)
‘ಶಿವಕುಮಾರ್ ಅವರೇ, ನಾವು ಆ ಕುಟುಂಬದ ಬಗ್ಗೆ ಕಾಳಜಿ ವಹಿಸುತ್ತೇವೆ. ದಯವಿಟ್ಟು ಅವರ ಸಂಪರ್ಕ ವಿವರ ನೀಡಿ. ನಮ್ಮ ಕಚೇರಿ ಅಧಿಕಾರಿಗಳು ಕೂಡಲೇ ಆಸ್ಪತ್ರೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯುವರು’ ಎಂದು ಭರವಸೆ ನೀಡಿದರು. ಡಿ.ಕೆ. ಶಿವಕುಮಾರ್ ಅವರು ವಿವರಗಳನ್ನು ನೀಡಿದ ಫಲವಾಗಿ ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
