ಕರ್ನಾಟಕ ಮೂಲದ ಸೆಲ್ಕೋ ಸೋಲಾರ್‌ ಲೈಟ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗೆ 2025ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ‘ಆಶ್ಡೆನ್‌ ಪ್ರಶಸ್ತಿ’ಯ ಗೌರವ ಸಂದಿದೆ.

ಬೆಂಗಳೂರು (ಜೂ.13): ಕರ್ನಾಟಕ ಮೂಲದ ಸೆಲ್ಕೋ ಸೋಲಾರ್‌ ಲೈಟ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗೆ 2025ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ‘ಆಶ್ಡೆನ್‌ ಪ್ರಶಸ್ತಿ’ಯ ಗೌರವ ಸಂದಿದೆ. ಗ್ರೀನ್‌ ಆಸ್ಕರ್ ಎಂಬ ಹೆಗ್ಗಳಿಕೆ ಹೊಂದಿರುವ ಈ ಪ್ರಶಸ್ತಿಯನ್ನು ಮೂರನೇ ಬಾರಿ ಮುಡಿಗೇರಿಸಿಕೊಂಡ ಗೌರವ ಸೆಲ್ಕೊ ಸಂಸ್ಥೆಗೆ ಸಲ್ಲುತ್ತಿದೆ. ಈ ಮುಂಚೆ 2005 ಹಾಗೂ 2007ರಲ್ಲಿ ಸಂಸ್ಥೆಗೆ ಪ್ರಶಸ್ತಿ ಬಂದಿತ್ತು.

ಈ ಬಾರಿಯದ್ದು 25ನೇ ಆಶ್ಡೆನ್‌ ಪ್ರಶಸ್ತಿಯಾಗಿದ್ದು, ಜೂ.11ರಂದು ಲಂಡನ್‌ನ ರಾಯಲ್‌ ಜಿಯಾಗ್ರಫಿಕಲ್‌ ಸೊಸೈಟಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಹಸಿರು ಇಂಧನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 2005 ಮತ್ತು 2027ರಲ್ಲೂ ಸೆಲ್ಕೊ ಸಂಸ್ಥೆಗೆ ಆಶ್ಡೆನ್‌ ಪ್ರಶಸ್ತಿ ಲಭಿಸಿತ್ತು. 1995ರಲ್ಲಿ ಡಾ.ಹರೀಶ್‌ ಹಂದೆ ಮತ್ತು ನೆವಿಲ್ಲೆ ವಿಲಿಯಮ್ಸ್‌ ಸ್ಥಾಪಿಸಿದ ಸೆಲ್ಕೊ ಕರ್ನಾಟಕದ ಮನೆಗಳಿಗೆ ಕೈಗೆಟಕುವಂತೆ ಸೌರಬೆಳಕು ಒದಗಿಸುವಲ್ಲಿ ಕಾರ್ಯರ್ನಿಹಿಸುತ್ತಿರುವ ಸಂಸ್ಥೆಯಾಗಿದೆ.

ಪ್ರಶಸ್ತಿ ಕುರಿತು ಮಾತನಾಡಿರುವ ಸೆಲ್ಕೊ ಸಿಇಒ ಮೋಹನ್ ಭಾಸ್ಕರ್‌ ಹೆಗಡೆ, ನಮ್ಮ ಸಂಸ್ಥೆಗೆ ಸಂದ ಈ ಪ್ರಶಸ್ತಿಯ ಗೌರವ ನಮ್ಮ ಆಡಳಿತ ಮಂಡಳಿ, ಡಿಜಿಎಂಗಳಾದ ಗುರುಪ್ರಕಾಶ್‌ ಶೆಟ್ಟಿ, ಪ್ರಸನ್ನ ಹೆಗಡೆ, ಸುದೀಪ್ತ್ ಘೋಷ್‌ ಹಾಗೂ ನಮ್ಮೆಲ್ಲ ಸಹೋದ್ಯೋಗಿಗಳ ಹಾಗೂ ನಮ್ಮ ಸಂಸ್ಥೆಯೊಂದಿಗೆ ವ್ಯವಹರಿಸುವ ಬಂಧುಗಳಿಗೆ ಮತ್ತು ಮಾರ್ಗದರ್ಶನ ಮಾಡಿದ ಆಡಳಿತ ಮಂಡಳಿಗಳಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.

ಸೌರವಿದ್ಯುತ್‌ ಬಳಕೆ, ಪ್ರಯೋಗ ಮತ್ತು ಪ್ರಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಉತ್ತಮ ನೆರವು ಮತ್ತು ಬೆಂಬಲ ದೊರೆಯುತ್ತಿದೆ ಎಂದು ಸ್ಮರಿಸಿದ ಅವರು, ಬಡತನದ ಸವಾಲು ಎದುರಿಸುವ ಹಾಗೂ ಸಹಜ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಪರ್ಯಾಯ ಇಂಧನ ಶಕ್ತಿ ಬಳಕೆ ಅತ್ಯಂತ ಮುಖ್ಯ. ಇದು ಅಭಿವೃದ್ಧಿ , ಸುಸ್ಥಿತರ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.

ಆಶ್ಡೆನ್‌ ಸಿಇಒ ಡಾ.ಶೋಕ್‌ ಸಿನ್ಹಾ ಮಾತನಾಡಿ, 2025ನೇ ಆಶ್ಡೆನ್‌ ಪ್ರಶಸ್ತಿ ವಿಜೇತರು ನಮ್ಮನ್ನೆಲ್ಲ ಆಶಾದಾಯಕವಾದ ಉತ್ತಮ ಭವಿಷ್ಯದತ್ತ ಮುನ್ನಡೆಸುತ್ತಿದ್ದಾರೆ. ಸೆಲ್ಕೊ ಮೂಲಕ ರೂಪುಗೊಂಡ ಪರಿಹಾರೋಪಾಯಗಳು ಅಗಾಧವಾಗಿ ಪರಿಣಾಮ ಬೀರಬಲ್ಲವು ಎಂದು ಸಾಬೀತಾಗಿದೆ ಎಂದರು.