ದೇಶದಲ್ಲಿ ಅಕ್ರಮ ನುಸುಳುಕೋರರ ಹಾವಳಿ ತಡೆಯಲು 1955ರಲ್ಲಿ ಕಾನೂನು ತಿದ್ದುಪಡಿಯಾಗಿದೆ. ಬಳಿಕ, 2025 ಬಂದರೂ, ಈ ಕಾನೂನಿನಲ್ಲಿ ಬದಲಾವಣೆ ಆಗಿಲ್ಲ.

ಸಕಲೇಶಪುರ (ಜು.18): ದೇಶದಲ್ಲಿ ಅಕ್ರಮ ನುಸುಳುಕೋರರ ಹಾವಳಿ ತಡೆಯಲು 1955ರಲ್ಲಿ ಕಾನೂನು ತಿದ್ದುಪಡಿಯಾಗಿದೆ. ಬಳಿಕ, 2025 ಬಂದರೂ, ಈ ಕಾನೂನಿನಲ್ಲಿ ಬದಲಾವಣೆ ಆಗಿಲ್ಲ. ಇದರಿಂದ ಎಲ್ಲೆಡೆ ಅಕ್ರಮ ಬಾಂಗ್ಲಾ ನುಸುಳುಕೋರರು ಹೆಚ್ಚಿದ್ದು, ನಕಲಿ ದಾಖಲೆ ಇಟ್ಟುಕೊಂಡಿದ್ದಾರೆ. ಹೀಗಾಗಿ, ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಕೂಂಬಿಂಗ್‌ ಶುರುವಾಗಬೇಕು ಎಂದು ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಹಾಗೂ ಕುಮಾರ್‌ ಬಂಗಾರಪ್ಪ ಆಗ್ರಹಿಸಿದ್ದಾರೆ.

ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧದ ಜಾಗೃತಿ ಅಭಿಯಾನದ ಅಂಗವಾಗಿ ಗುರುವಾರ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕುಂಬ್ರಳ್ಳಿ, ಕೆಂಚಮ್ಮನ ಹೊಸಕೋಟೆ ಹೋಬಳಿಯ ವಾಟೆಪುರ ಕಾಫಿ ಎಸ್ಟೇಟ್‌ಗಳಿಗೆ ಭೇಟಿ ನೀಡಿ, ತೋಟದ ಕಾರ್ಮಿಕರೊಂದಿಗೆ ಅವರು ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಮಿಕರು ಹಲವು ಸಮಸ್ಯೆಗಳನ್ನು ತಂಡದ ಮುಂದೆ ತೆರೆದಿಟ್ಟರು. ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಲಿಂಬಾವಳಿ, ಈ ಮೊದಲು ತಮಗೆ ವಾರಪೂರ್ತಿ ಕೆಲಸ ಸಿಗುತ್ತಿತ್ತು. ಬಾಂಗ್ಲಾ ವಲಸಿಗರಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಕಾರ್ಮಿಕರು ನಮ್ಮ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದರು.

ಬಾಂಗ್ಲಾ ವಲಸಿಗರು ಇಲ್ಲಿಗೆ ಬಂದು, ತಾವು ಅಸ್ಸಾಂ, ಬಿಹಾರ್‌ನವರು ಎಂದು ಹೇಳುತ್ತಿದ್ದಾರೆ. ಅದಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಈ ರೀತಿ ಒಳನುಸುಳಲು ಅವರಿಗೆ ಟ್ರೈನಿಂಗ್ ಕೂಡ ಕೊಡಲಾಗುತ್ತಿದೆ. ಹೀಗಾಗಿ, ಅವರನ್ನು ಪತ್ತೆಹಚ್ಚಲು ಗ್ರಾಮ ಪಂಚಾಯಿತಿಯಿಂದ ಕೂಂಬಿಂಗ್ ನಡೆಸಬೇಕು. ಯಾವುದೇ ಕಾರಣಕ್ಕೂ ನಮ್ಮ ಕನ್ನಡಿಗರಿಗೆ ಅನ್ಯಾಯ ಆಗಬಾರದು. ನುಸುಳುಕೋರರ ವಂಶವೃಕ್ಷ ಪರಿಶೀಲಿಸಬೇಕು. ಗಡಿಭಾಗದಲ್ಲಿಯೇ ಅಕ್ರಮ ನುಸುಳುವಿಕೆಯನ್ನು ತಡೆಯಬೇಕು. ಸರ್ಕಾರ, ಗ್ರಾ.ಪಂ.ಗಳು ತ್ವರಿತವಾಗಿ ಅವರ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.