ಬೆಂಗಳೂರು[ಜ.30]: ಸಿಎಎ ಮತ್ತು ಎನ್‌ಆರ್‌ಸಿಯನ್ನು ವಿರೋಧಿಸಿ ದೇಶಾದ್ಯಂತ ಬುಧವಾರ ಬಹುಜನ ಕ್ರಾಂತಿ ಮೋರ್ಚಾ ಹಮ್ಮಿಕೊಂಡ ಭಾರತ ಬಂದ್‌ಗೆ ಬುಧವಾರ ಭಟ್ಕಳ, ರಾಯಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಉಡುಪಿ, ಬೆಳಗಾವಿ ಸೇರಿದಂತೆ ವಿವಿಧೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಷ್ಟ್ರವ್ಯಾಪಿ ಆಂದೋಲನ ನಡೆಸಿದ ಮೋರ್ಚಾ ಬುಧವಾರ ಮೂರನೇ ಹಂತದ ಹೋರಾಟದ ಅಂಗವಾಗಿ ಭಾರತ ಬಂದ್‌ಗೆ ಕರೆ ನೀಡಿತ್ತು. ಬಹುಜನ ಕ್ರಾಂತಿ ಮೋರ್ಚಾದ ಕರೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ ಭಟ್ಕಳ, ರಾಯಭಾಗದಲ್ಲಿ ಹಲವಾರು ಮಂದಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆಯದೇ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಭಟ್ಕಳದಲ್ಲಿ ಮುಸ್ಲಿಮೇತರರು ಭಾರತ ಬಂದ್‌ಗೆ ಬೆಂಬಲ ವ್ಯಕ್ತಪಡಿಸದೇ ಪಟ್ಟಣದಲ್ಲಿ ಎಂದಿನಂತೆ ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆದಿದ್ದರು. ಉಡುಪಿಯಲ್ಲಿ ಕೂಡ ಮುಸ್ಲಿಂ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಬಂದ್‌ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಕೆಲವು ಅಂಗಡಿ ಮುಂಗಟ್ಟುಗಳು ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದ್ದವು. ಉಳಿದಂತೆ ಅಥಣಿ, ಘಟಪ್ರಭಾ, ಗೋಕಾಕ್‌, ಹುಕ್ಕೇರಿಯಲ್ಲಿಯೂ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಜಯಪುರ ಜಿಲ್ಲೆಯಲ್ಲಿಯೂ ನಗರ ಸೇರಿದಂತೆ ದೇವರಹಿಪ್ಪರಗಿ, ಆಲಮೇಲ, ಚಡಚಣದಲ್ಲಿಯೂ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಜಮಖಂಡಿಯಲ್ಲಿಯೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲೆಡೆ ಬಿಗಿ ಬಂದೋಬಸ್‌್ತ ಕೈಗೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆಯ ವರದಿಯಾಗಿಲ್ಲ.