ಮಂಗಳೂರು ಗಲಭೆ: ಆರೋಪಿಗಳ ಪತ್ತೆಗೆ ಪೊಲೀಸರ ಹೊಸ ಐಡಿಯಾ, ಸಿಕ್ತು 30,000 ವಿಡಿಯೋ!
ಗೋಲೀಬಾರ್ ಸಂಬಂಧ 30000 ವಿಡಿಯೋ ಲಭ್ಯ| ವಾಟ್ಸಾಪ್ ಗ್ರೂಪ್‌ಗೆ 750 ಬೀಟ್‌ಗಳಲ್ಲಿ ಅರ್ಧ ಲಕ್ಷ ಮಂದಿಯಿಂದ ವಿಡಿಯೋ| ಪೊಲೀಸರಿಂದ ಆರೋಪಿಗಳ ಪತ್ತೆಗೆ 30 ಸಾವಿರಕ್ಕೂ ಅಧಿಕ ದೃಶ್ಯಗಳ ಪರಿಶೀಲನೆ
ಮಂಗಳೂರು[ಡಿ.28]: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿ.19ರಂದು ಮಂಗಳೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಪೊಲೀಸರ ವಾಟ್ಸಾಪ್ ಗ್ರೂಪ್‌ಗೆ ಸಾರ್ವಜನಿಕರು ಮೂವತ್ತು ಸಾವಿರಕ್ಕೂ ಅಧಿಕ ವಿಡಿಯೋಗಳನ್ನು ಕಳುಹಿಸಿದ್ದಾರೆ.
ಅಂದು, ಪ್ರತಿಭಟನೆ ತೀವ್ರ ಸ್ವರೂಪ ಪಡೆದಿರುವುದರಿಂದ ಪೊಲೀಸರು ಗೋಲಿಬಾರ್ ನಡೆಸಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿರುವುದ್ದಕ್ಕೆ ರಾಜ್ಯ ಸರ್ಕಾರ ಮತ್ತು ಪೊಲೀಸರ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. ಇದೇ ವೇಳೆ ಗಲಭೆಗೆ ಕಾರಣರಾದವರನ್ನು ಗುರುತಿಸುವ ಉದ್ದೇಶದಿಂದ ಪೊಲೀಸರು ಸಾರ್ವಜನಿಕರ ಬಳಿ ವಿಡಿಯೋಗಳು ಇದ್ದರೇ ಕಳುಹಿಸಿ ಎಂದು ಕೋರಿದ್ದರು. ಇದಕ್ಕೆ ಸಾರ್ವಜನಿಕರಿಂದ ಅದ್ಭುತ ಸ್ಪಂದನೆ ವ್ಯಕ್ತವಾಗಿದೆ.
ನೇರವಿಗೆ ಬಂದ ಬೀಟ್ ವಾಟ್ಸಾಪ್ ಗ್ರೂಪ್:
ಮಂಗಳೂರು ಪೊಲೀಸ್ ಕಮಿಷನರ್ ಡಾ.ಹರ್ಷ ಅವರು ಕೆಲವು ತಿಂಗಳ ಹಿಂದೆ ಪೊಲೀಸ್ ಹಾಗೂ ನಾಗರಿಕರ ಸಹಭಾಗಿತ್ವದಲ್ಲಿ ಹೊಸ ಬೀಟ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಈ ವ್ಯವಸ್ಥೆಯಲ್ಲಿ ಕಮಿಷನರೇಟ್ ವ್ಯಾಪ್ತಿಯ 14 ಪೊಲೀಸ್ ಠಾಣೆಯ ಪ್ರತಿ ಬೀಟ್ ವ್ಯಾಪ್ತಿಯಲ್ಲಿ ನಾಗರಿಕರ ಸಹಭಾಗಿತ್ವವನ್ನು ಮಾಡಲಾಗಿತ್ತು. ಅದರಂತೆ ಒಟ್ಟು 750 ಬೀಟ್‌ಗಳಲ್ಲಿ 52 ಸಾವಿರ ಮಂದಿ ನಾಗರಿಕರನ್ನು ಬೀಟ್ ವಾಟ್ಸಾಪ್ ಗ್ರೂಪ್‌ಗೆ ಸೇರಿಸಲಾಗಿತ್ತು. ಇದು ಗಲಭೆಕೋರರ ಪತ್ತೆಗೆ ನೆರವಿಗೆ ಬಂದಿದೆ. ಸುಮಾರು 30 ಸಾವಿರಕ್ಕೂ ಅಧಿಕ ವಿಡಿಯೋಗಳನ್ನು ನಾಗರಿಕರು ಈ ಗ್ರೂಪ್ ಮೂಲಕ ಕಳುಹಿಸಿದ್ದಾರೆ. ನಾಗರಿಕರು ಸಲ್ಲಿಸಿದ ವಿಡಿಯೋಗಳನ್ನು ಸೈಬರ್ ಪೊಲೀಸರು ಪರಿಶೀಲಿಸುತ್ತಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಮಿಷನರ್‌ಗೆ ಬೆದರಿಕೆ ಕರೆ:
ಗೋಲಿಬಾರ್ ಘಟನೆ ಬಳಿಕ ಪೊಲೀಸ್ ಕಮಿಷನರ್, ಪೊಲೀಸ್ ಅಧಿಕಾರಿಗಳು ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿಗೆ ನಿರಂತರವಾಗಿ ವಿದೇಶದಿಂದ ಬೆದರಿಕೆ ಕರೆಗಳು ಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಅಧಿಕಾರಿಗಳು, ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಜೀವ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆಯಿಂದ ಇರುವಂತೆ ಉನ್ನತಾಧಿಕಾರಿಗಳು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಕಮಿಷನರ್‌ಗೆ ಭದ್ರತೆ ಹೆಚ್ಚಳಗೊಳಿಸಲಾಗಿದೆ.
ಡಿಸೆಂಬರ್ 28ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ