ಕರ್ನಾಟಕದ ಎಲ್ಲ ನಿರೀಕ್ಷೆಗೂ ಬಜೆಟ್‌ನಲ್ಲಿ ಸ್ಪಂದನೆ: ಸಿಎಂ ಬೊಮ್ಮಾಯಿ
ಸಮತೋಲಿತ, ಅತ್ಯಂತ ಪ್ರಗತಿಪರ, ಸರ್ವಸ್ಪರ್ಶಿ, ಸರ್ವವ್ಯಾಪಿ ಬಜೆಟ್ ಅನ್ನು ಕೇಂದ್ರ ಸರ್ಕಾರವು ಮಂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಅತ್ಯಂತ ವೇಗವಾಗಿ ಪ್ರಗತಿಯತ್ತ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದಾರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು(ಫೆ.03): ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಅಮೃತ ಕಾಲದಲ್ಲಿ ರಾಷ್ಟ್ರದ ಪ್ರಗತಿಗೆ ಭದ್ರ ಬುನಾದಿ ಹಾಕುವ ಎಲ್ಲಾ ಅಂಶಗಳಿದ್ದು, ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದ ಪ್ರಗತಿಪರ ಬಜೆಟ್ ಆಗಿದೆ. ರಾಜ್ಯದ ಎಲ್ಲಾ ನಿರೀಕ್ಷೆಗಳಿಗೂ ಸ್ಪಂದನೆ ಸಿಕ್ಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಕೇಂದ್ರ ಬಜೆಟ್‌ಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಮತೋಲಿತ, ಅತ್ಯಂತ ಪ್ರಗತಿಪರ, ಸರ್ವಸ್ಪರ್ಶಿ, ಸರ್ವವ್ಯಾಪಿ ಬಜೆಟ್ ಅನ್ನು ಕೇಂದ್ರ ಸರ್ಕಾರವು ಮಂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಅತ್ಯಂತ ವೇಗವಾಗಿ ಪ್ರಗತಿಯತ್ತ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದಾರೆ. ಸ್ವಚ್ಛ ಭಾರತದಿಂದ ಹಿಡಿದು ಆರ್ಥಿಕ ಸುಧಾರಣೆಗಾಗಿ ದಿಟ್ಟಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಬಜೆಟ್‌ನಲ್ಲಿನ ಎಲ್ಲಾ ಯೊಜನೆಗಳಿಂದ ರಾಜ್ಯದ ಪಾಲು ಬರಲಿದೆ. ಎಂಎಸ್‌ಎಂಇ, ಜಲಜೀವನ್ ಮಿಷನ್, ಗ್ರಾಮೀಣಾಭಿವೃದ್ಧಿ, ಪ್ರಧಾನಮಂತ್ರಿ ಆವಾಸ್ ಯೋಜನೆ, ನಗರ ಮೂಲಸೌಕರ್ಯ ಸೇರಿದಂತೆ ಹಲವು ಯೋಜನೆಗಳಿಂದ ರಾಜ್ಯಕ್ಕೆ ಪಾಲು ದೊರೆಯಲಿದೆ ಎಂದು ತಿಳಿಸಿದರು.
ಕೇಂದ್ರ ಬಿಜೆಟ್‌ನಲ್ಲಿ ಕನ್ನಡಿಗರಿಗೆ ಮೋಸ: ಪ್ರಿಯಾಂಕ್ ಖರ್ಗೆ
ನಮ್ಮ ಆದ್ಯತೆ ವಲಯಗಳಾದ ಗ್ರಾಮೀಣಾಭಿವೃದ್ಧಿ, ಕೃಷಿ, ರೈಲ್ವೆ ಮತ್ತು ಇತರ ಆರ್ಥಿಕ ಮೂಲಸೌಕರ್ಯ, ವಸತಿ, ನೀರಾವರಿ, ಎಂಎಸ್‌ಎಂಇ ಸೇರಿದಂತೆ ಎಲ್ಲೆಲ್ಲಿ ನಮಗೆ ನಿರೀಕ್ಷೆ ಇತ್ತು. ಅದಕ್ಕೆ ಅನುದಾನ ಬಂದಿದೆ. ವಿಶ್ವದ ಇತರ ಪ್ರಗತಿ ಹೊಂದಿರುವ ದೇಶಗಳಿಗೆ ಆರ್ಥಿಕ ಸ್ಥಿತಿಯನ್ನು ಹೋಲಿಸಿದಾಗ ನಮ್ಮ ದೇಶ ಪ್ರಗತಿಯಾಗುತ್ತಿರುವುದು ಗೊತ್ತಾಗುತ್ತದೆ. ನಮ್ಮ ಬೆಳವಣಿಗೆ ಪ್ರಮಾಣ ಶೇ.6ರಿಂದ ಶೇ.6.8ರಷ್ಟಿದೆ. ಜಿಡಿಪಿ ಆರೋಗ್ಯಕರವಾಗಿದ್ದು, ದೇಶದ ಆರ್ಥಿಕತೆ ವೃದ್ಧಿಗೆ ಇನ್ನಷ್ಟುಬಲ ನೀಡುತ್ತದೆ. ಬಜೆಟ್‌ನಲ್ಲಿ ಬಂಡವಾಳ ವೆಚ್ಚ 10 ಲಕ್ಷ ಕೋಟಿ ರು. ಹೆಚ್ಚಳವಾಗಿದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ 25 ಸಾವಿರ ಕೋಟಿ ರು.ನಷ್ಟುಹೆಚ್ಚಳವಾಗುತ್ತಿತ್ತು. ಈಗಿನ ಹೆಚ್ಚಳ ಮಾದರಿ ಬದಲಾವಣೆಯಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ವಸತಿ ಸಚಿವ ವಿ.ಸೋಮಣ್ಣ, ಗೃಹ ಸಚಿವ ಆರಗ ಜ್ಞಾನೇಂದ್ರ, ಕ್ರೀಡಾ ಸಚಿವ ನಾರಾಯಣಗೌಡ, ವಿಧಾನಪರಿಷತ್ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನರೇಗಾಕ್ಕೆ ಕಡಿಮೆಯಾಗಿಲ್ಲ
ನರೇಗಾಕ್ಕೆ ದೊಡ್ಡ ಮೊತ್ತವೇನೂ ಕಡಿಮೆಯಾಗಿಲ್ಲ. ಗ್ರಾಮೀಣ ಮೂಲಸೌಕರ್ಯದಲ್ಲಿ ಈಗಾಗಲೇ ಆಸ್ತಿ ಸೃಜನೆಯಾಗಿದ್ದು, ಆಸ್ತಿ ಸೃಜನೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಇದೇ ವೇಳೆ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಎಲ್ಲ ಯೋಜನೆಗಳಿಗೂ ಒಂದು ಕಾಲಾವಧಿ ಇರುತ್ತದೆ. ಅದನ್ನು ಯೋಜನಾ ಆಯೋಗಗಳು ಮಾಡುತ್ತವೆ. ಹಲವರು ಯೋಜನೆಗಳನ್ನು ನರೇಗಾದೊಂದಿಗೆ ಸೇರಿ ಮಾಡುತ್ತಿರುವುದರಿಂದ ಯಾವುದೇ ರೀತಿಯ ಗ್ರಾಮೀಣ ಆಸ್ತಿ ಸೃಜನೆಗೆ ತೊಂದರೆಯಾಗುವುದಿಲ್ಲ ಎಂಬ ವಿಶ್ವಾಸ ಇದೆ ಎಂದರು.