ಹುಬ್ಬಳ್ಳಿ :  ಬಹು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ರಾಜ್ಯದ ಮತ್ತೊಂದು ಐಎಎಸ್‌ ಜೋಡಿ ಇದೀಗ ವಿವಾಹ ಬಂಧನಕ್ಕೊಳಗಾಗಿದೆ. ಬಾಗಲಕೋಟೆಯ ಕೃಷ್ಣಾ ಮೇಲ್ದಂಡೆ ಪುನರ್ವಸತಿ ಯೋಜನೆ ಆಯುಕ್ತ ಉಜ್ವಲ ಕುಮಾರ್‌ ಘೋಷ್‌ ಮತ್ತು ಉಡುಪಿ ಜಿಲ್ಲಾಧಿಕಾರಿ ಹೆಫ್ಸಿಬಾರಾಣಿ ಕೊರ್ಲಪಾಟಿ ಸೋಮವಾರ ಇಲ್ಲಿನ ಉಪನೋಂದಣಿ ಕಚೇರಿಯಲ್ಲಿ ಅತ್ಯಂತ ಸರಳವಾಗಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಮೊದಲು ವಿವಾಹ ನೋಂದಣಿ ಮಾಡಿಸಿದರು. ಬಳಿಕ ಪರಸ್ಪರ ಮಾಲೆ ಬದಲಾಯಿಸಿದರು. ಈ ಮದುವೆಗೆ ಸಾಕ್ಷಿಯಾಗಿದ್ದ ಬೆರಳೆಣಿಕೆಯಷ್ಟು ಬಂಧುಗಳು, ಆಪ್ತೇಷ್ಟರಿಗೆ ಸಿಹಿ ಹಂಚಿ ಆಶೀರ್ವಾದ ಪಡೆದರು. ಯಾವುದೇ ಆಡಂಬರ ಇರಲಿಲ್ಲ. ದುಬಾರಿ ಬಟ್ಟೆ, ಚಿನ್ನಾಭರಣವನ್ನೂ ಅವರು ಧರಿಸಿರಲಿಲ್ಲ. ಸರಳ, ಮಾದರಿ ಮದುವೆ ಇದಾಗಿತ್ತು.

ಜಾರ್ಖಂಡ್‌ ರಾಜ್ಯದವರಾದ ಉಜ್ವಲಕುಮಾರ್‌ ಘೋಷ್‌ 2008ರಲ್ಲಿ ಐಎಎಸ್‌ ಪಾಸ್‌ ಮಾಡಿ ಕರ್ನಾಟಕದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಸದ್ಯ ಬಾಗಲಕೋಟೆಯ ಕೃಷ್ಣಾ ಮೇಲ್ದಂಡೆ ಪುನರ್ವಸತಿ ಯೋಜನೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಂಧ್ರಪ್ರದೇಶದ ಹೆಫ್ಸಿಬಾರಾಣಿ ಕೊರ್ಲಪಾಟಿ 2012ರ ಐಎಎಸ್‌ ಬ್ಯಾಚ್‌. ಕರ್ನಾಟಕ ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಸದ್ಯ ಉಡುಪಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹಿರಿಯ ಐಎಎಸ್‌ ಅಧಿಕಾರಿಗಳಾದ ಆರ್‌.ವಿಶಾಲ್‌, ಪಿ.ಸಿ.ಜಾಫರ್‌, ಸುನಿಲ್‌ ಪನವಾರ್‌, ಡಿ.ಮಹೇಶ್‌ಕುಮಾರ್‌, ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್‌, ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌, ಪತ್ರಕರ್ತ ಹೃಷಿಕೇಶ ಬಹಾದ್ದೂರ ದೇಸಾಯಿ ಮತ್ತಿತರರು ನೂತನ ದಂಪತಿಗೆ ಶುಭ ಕೋರಿದರು.

ಇತ್ತೀಚೆಗಷ್ಟೆಪ್ರೇಮಿಗಳ ದಿನದಂದು ವಿವಾಹವಾಗುವ ಮೂಲಕ ಸುದ್ದಿ ಮಾಡಿದ್ದ ದಾವಣಗೆರೆ ಐಎಎಸ್‌ ಜೋಡಿಯ ಬಳಿಕ ಈ ಐಎಎಸ್‌ ಜೋಡಿ ಸರಳ ವಿವಾಹವಾಗುವ ಮೂಲಕ ಗಮನ ಸೆಳೆದಿದೆ.