ಶನಿವಾರ ರಾಜ್ಯದ ಹಲವೆಡೆ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದು, ಉತ್ತರ ಕನ್ನಡ ಜಿಲ್ಲಾಡಳಿತ ಮುದ್ರಿಸಿದ ಆಹ್ವಾನ ಪತ್ರಿಕೆಯಲ್ಲಿ ಅನಂತ್ ಕುಮಾರ್ ಹೆಗಡೆ ಹೆಸರನ್ನು ಕೈ ಬಿಡಲಾಗಿದೆ.
ಕಾರವಾರ: ಉತ್ತರ ಕನ್ನಡ ಜಿಲ್ಲಾಡಳಿತ ಮುದ್ರಿಸಿದ ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೆಸರು ಹೊರತಾಗಿ ಉಳಿದ ಶಾಸಕರ ಹೆಸರನ್ನು ಮುದ್ರಿಸಲಾಗಿದೆ.
ಅನಂತಕುಮಾರ ಹೆಗಡೆ ಸರ್ಕಾರಕ್ಕೆ ಪತ್ರ ಬರೆದಿದ್ದರಿಂದ ಅವರ ಹೆಸರನ್ನು ಕೈಬಿಡಲಾಗಿದ್ದು, ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕುಮಟಾ ಶಾಸಕ ದಿನಕರ ಶೆಟ್ಟಿ, ಭಟ್ಕಳ ಶಾಸಕ ಸುನೀಲ್ ನಾಯ್ಕ ಹಾಗೂ ಕಾರವಾರ ಶಾಸಕಿ ರೂಪಾಲಿ ನಾಯ್ಕ ಅವರ ಹೆಸರನ್ನು ನಮೂದಿಸಲಾಗಿದೆ. ಭಟ್ಕಳ ಶಾಸಕ ಸುನೀಲ್ ನಾಯ್ಕ ತಮ್ಮ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಸೇರಿಸದಂತೆ ಜಿಲ್ಲಾಡಳಿತಕ್ಕೆ, ಸರ್ಕಾರಕ್ಕೆ ಪತ್ರ ಬರೆದಿದ್ದರೂ ಅವರ ಹೆಸರನ್ನು ನಮೂದಿಸಲಾಗಿದೆ.
ನ.10ರಂದು ನಡೆಯುವ ಜಯಂತಿಯಲ್ಲಿ ಬಿಜೆಪಿ ಶಾಸಕರು ಗೈರಾಗುವ ಸಾಧ್ಯತೆ ಇದೆ. ಕಳೆದ ವರ್ಷ 2 ಬಾರಿ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿತ್ತು. ಮೊದಲು ಅನಂತಕುಮಾರ ತಮ್ಮ ಹೆಸರನ್ನು ಬರೆಯದಂತೆ ಪತ್ರ ಬರೆದಿದ್ದರು. ಅವರ ಹೆಸರನ್ನು ಕೈಬಿಟ್ಟು ಉಳಿದ ಗಣ್ಯರ ಹೆಸರು ಸೇರಿಸಲಾಗಿತ್ತು. ತರುವಾಯ ವಿಶ್ವೇಶ್ವರ ಹೆಗಡೆ ಪತ್ರ ಬರೆದಿದ್ದರು. ಇದರಿಂದಾಗಿ ಹೆಸರನ್ನು ತೆಗೆದು ಹೊಸದಾಗಿ ಮುದ್ರಣ ಮಾಡಲಾಗಿತ್ತು.
