ಬೆಂಗಳೂರು (ಡಿ.19): ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಹಾಗೂ ನಿರುಪಯುಕ್ತವಾಗಿರುವ ಸರ್ಕಾರದ ಬಿ-ಖರಾಬು ಭೂಮಿಯನ್ನು ಖಾಸಗಿಯವರಿಗೆ ಹಣ ಪಡೆದು ಮಂಜೂರು ಮಾಡಲು ಹಾಗೂ ಗುತ್ತಿಗೆಗೆ ನೀಡಲು ‘ಕರ್ನಾಟಕ ಭೂ ಮಂಜೂರಾತಿ ನಿಯಮಗಳು-1969’ಕ್ಕೆ ತಿದ್ದುಪಡಿ ಮಾಡಿ ಮಂಜೂರಾತಿ ನಿಯಮಗಳನ್ನು ರೂಪಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಬಿಬಿಎಂಪಿ ವ್ಯಾಪ್ತಿ ಹಾಗೂ ವ್ಯಾಪ್ತಿಯಿಂದ 18 ಕಿ.ಮೀ., ರಾಜ್ಯದ ವಿವಿಧ ನಗರಸಭೆ ವ್ಯಾಪ್ತಿ ಹಾಗೂ ವ್ಯಾಪ್ತಿಯಿಂದ 5 ಕಿ.ಮೀ. ದೂರದವರೆಗೆ ಒತ್ತುವರಿಗೆ ಗುರಿಯಾಗಿರುವ ಬಿ-ಖರಾಬು ಭೂಮಿಯನ್ನು ಅತಿ ಕಡಿಮೆ ಬೆಲೆಗೆ ಮಾರಾಟಕ್ಕೆ ಮುಂದಾಗಿದೆ. ಅಲ್ಲದೆ, ಉಭಯ ಸದನಗಳಲ್ಲಿ ಮಂಡನೆ ಮಾಡಿದ್ದ ತಿದ್ದುಪಡಿ ಕಾಯಿದೆ ಪ್ರಸ್ತಾಪಕ್ಕೂ ರೂಪಿಸಿರುವ ನಿಯಮಾವಳಿಗೂ ಅಜಗಜಾಂತರ ವ್ಯತ್ಯಾಸವಿದೆ. ನಿಯಮಾವಳಿಯಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಮಂಜೂರಾತಿ ಆದೇಶ ದುರುಪಯೋಗ ಆಗಿ ಸಾವಿರಾರು ಎಕರೆ ಸರ್ಕಾರಿ ಜಾಗ ಖಾಸಗಿಯವರ ಪಾಲಾಗಲಿದೆ ಎಂದು ಕಾಂಗ್ರೆಸ್‌ ಹಾಗೂ ನಗರಾಭಿವೃದ್ಧಿ ತಜ್ಞರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಿಯಮಾವಳಿಗಳು ವಿವಾದಾತ್ಮಕ ಸ್ವರೂಪ ಪಡೆದುಕೊಂಡಿವೆ.

ಬರಡು ಭೂಮಿಯನ್ನು ಹಸಿರಾಗಿಸಿದ ನಟ ಮಾಧವನ್ ...

ಈ ಬಗ್ಗೆ ಮಾತನಾಡಿರುವ ವಿಧಾನಪರಿಷತ್‌ ಸದಸ್ಯ ಪಿ.ಆರ್‌. ರಮೇಶ್‌, ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಖರಾಬು ಭೂಮಿ ಮಾರಾಟಕ್ಕೆ ನಿರ್ಧರಿಸಲಾಗಿತ್ತು. ಈ ವೇಳೆ ಸಂಪುಟ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ, ನಗರ ಪ್ರದೇಶದಲ್ಲಿ ಒತ್ತುವರಿಯಾಗಿರುವ ಹಾಗೂ ಕಟ್ಟಡಗಳ ನಡುವೆ ಸಿಲುಕಿರುವ ನಿರುಪಯುಕ್ತ ಬಿ- ಖರಾಬು ಭೂಮಿಯನ್ನು ಮಾರಾಟ ಮಾಡಲಾಗುವುದು. ಇದಕ್ಕಾಗಿ ಮಾರ್ಗಸೂಚಿ ದರದ ನಾಲ್ಕು ಪಟ್ಟು ಹೆಚ್ಚು ದರ ನಿಗದಿ ಮಾಡಲಾಗುವುದು ಎಂದು ಹೇಳಿದ್ದರು.

ನವೆಂಬರ್‌ 21ರಂದು ಈ ಕುರಿತ ಕರಡು ನಿಯಮಗಳನ್ನು ಪ್ರಕಟಿಸಿದ್ದ ಕಂದಾಯ ಇಲಾಖೆ ಡಿ.16ರಂದು ಕರ್ನಾಟಕ ಭೂ ಮಂಜೂರಾತಿ ನಿಯಮ -1969ರ 22-ಎ ಉಪ ನಿಯಮ 1ಕ್ಕೆ ತಿದ್ದುಪಡಿ ತಂದು ಅಂತಿಮ ನಿಯಮಾವಳಿ ಪ್ರಕಟಿಸಿದೆ. ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯಿಂದ 18 ಕಿ.ಮೀ. ಎಂದು ತಿಳಿಸಿರುವುದರಿಂದ ಗ್ರಾಮೀಣ ಭಾಗದಲ್ಲಿನ ಖರಾಬು ಸಹ ಮಂಜೂರು ಮಾಡಲು ಅವಕಾಶ ಲಭಿಸಲಿದೆ. ಇದರಿಂದ ಸ್ಥಳೀಯ ಅಧಿಕಾರಿಗಳು ಹಾಗೂ ಭೂ ಕಬಳಿಕೆದಾರರು ಗೋಮಾಳ, ನೆಡುತೋಪುಗಳನ್ನೂ ಗುಳುಂ ಮಾಡಬಹುದು. ಜಿಲ್ಲಾಧಿಕಾರಿಗಳು ಒತ್ತುವರಿಯಾಗಿರುವ ಕಾಲುವೆ, ಚರಂಡಿಗಳಿಗೂ ನಿರುಪಯುಕ್ತ ಎಂದು ವರದಿ ನೀಡಿ ಮಾರಾಟಕ್ಕೆ ಮುಂದಾಗಬಹುದು ಎಂದು ಕಿಡಿ ಕಾರಿದ್ದಾರೆ.

ನಿಯಮಗಳು ತುಂಬಾ ಅಸ್ಪಷ್ಟವಾಗಿದ್ದು, ಇಂತಹ ನಿಯಮಾವಳಿ ಅಧಿಕಾರಿಗಳಿಗೆ ದೊರೆತರೆ ಬೇಕಾದಂತೆ ತಿರುಚಿ ಕೆರೆ, ಕುಂಟೆಗಳನ್ನೂ ಮಾರಾಟ ಮಾಡಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ದರ ನಿಗದಿಗೆ ಮಾನದಂಡಗಳು

ನಿಯಮಗಳಲ್ಲಿ ಕಾಲುವೆಗಳು, ಮಳೆ ನೀರು ಕಾಲುವೆ, ಚರಂಡಿಗಳು, ಕೆರೆಗಳು, ಜಲಮೂಲಗಳನ್ನು ಮಾರಾಟ ಮಾಡುವಂತಿಲ್ಲ ಅಥವಾ ಗುತ್ತಿಗೆಗೆ ನೀಡುವಂತಿಲ್ಲ ಎಂಬ ಷರತ್ತು ವಿಧಿಸಿದೆ. ಉಳಿದಂತೆ ಕೃಷಿ ಭೂಮಿ ನಡುವಿನ ಖರಾಬು ಭೂಮಿಗೆ ಸುತ್ತಮುತ್ತಲಿನ ಕೃಷಿ ಭೂಮಿಯ ಮಾರ್ಗಸೂಚಿ ದರದ ಆಧಾರದ ಮೇಲೆ ಮಾರ್ಗಸೂಚಿ ದರ ನಿಗದಿ ಮಾಡಬೇಕು.

ಭೂ ಪರಿವರ್ತನೆಯಾಗಿ ನಕ್ಷೆ ಮಂಜೂರಾತಿ ಪಡೆಯದ ನಿವೇಶನಗಳಿಗೆ ಕೇಂದ್ರ ಮೌಲ್ಯಮಾಪನ ಸಮಿತಿಯು ಆಯಾ ಸಮಯದಲ್ಲಿ ದರ ನಿಗದಿ ಮಾಡಬೇಕು. ಭೂ ಪರಿವರ್ತನೆಯಾಗಿ ನಕ್ಷೆ ಮಂಜೂರಾತಿ ಪಡೆದ ಬಡಾವಣೆಗಳ ನಡುವಿನ ಖರಾಬು ಭೂಮಿಗೆ ಬಡಾವಣೆಯಲ್ಲಿನ ಪ್ರತಿ ಚದರಡಿಯ ಮಾರ್ಗಸೂಚಿ ದರದ ಆಧಾರದ ಮೇಲೆ ದರ ನಿಗದಿ ಮಾಡಬೇಕು ಎಂದು ಆದೇಶಿಸಲಾಗಿದೆ.

ವಿವಿಧ ಬಳಕೆದಾರರಿಗೆ ಪ್ರತ್ಯೇಕ ದರ ನಿಗದಿ:

ಉದ್ಯಮ ಬಳಕೆಗಾಗಿ ಖರೀದಿಸುವ ಎಸ್‌ಸಿ, ಎಸ್‌ಟಿಗೆ ಮಾರ್ಗಸೂಚಿ ದರದ ಶೇ.50, ಇತರರಿಗೆ ಮಾರುಕಟ್ಟೆದರದಷ್ಟುಪಾವತಿಸುವಂತೆ ನಿಗದಿ ಮಾಡಲಾಗಿದೆ. ಉಳಿದಂತೆ ಗುತ್ತಿಗೆ ಆಧಾರದ ಮೇಲೆ ನೀಡುವುದಾದರೆ ಎಸ್‌ಸಿ, ಎಸ್‌ಟಿ ಅರ್ಜಿದಾರರಿಗೆ ಮಾರ್ಗಸೂಚಿ ದರದ ಶೇ.2.5, ಇತರರಿಗೆ ಮಾರುಕಟೆ ದರದ ಶೇ.2.5ರಷ್ಟುನಿಗದಿ ಮಾಡಲಾಗಿದೆ.

ಶಿಕ್ಷಣ ಸಂಸ್ಥೆಗಳ ಬಳಕೆಗೆ ಎಸ್‌ಸಿ, ಎಸ್‌ಟಿಗೆ ಮಾರ್ಗಸೂಚಿ ದರದ ಶೇ.50, ಇತರರಿಗೆ ಮಾರುಕಟ್ಟೆದರ, ಗುತ್ತಿಗೆಗೆ ನೀಡುವುದಾದರೆ ಎಸ್‌ಸಿ, ಎಸ್‌ಟಿಗೆ ಮಾರ್ಗಸೂಚಿ ದರದ ಶೇ.2.5, ಇತರರಿಗೆ ಮಾರುಕಟ್ಟೆದರದ ಶೇ.2.5ರಷ್ಟುನಿಗದಿಪಡಿಸಲಾಗಿದೆ.

ಕಲ್ಯಾಣ ಕಾರ್ಯಕ್ರಮಗಳ ಅಡಿಗೆ ಬರುವ ವಿದ್ಯಾರ್ಥಿನಿಲಯ, ಆಸ್ಪತ್ರೆ, ಅನಾಥಾಶ್ರಮ, ವೃದ್ಧಾಶ್ರಮದ ಬಳಕೆಗೆ ಎಸ್‌ಸಿ, ಎಸ್‌ಟಿಯವರಿಗೆ ಮಾರ್ಗಸೂಚಿ ದರದ ಶೇ.10, ಇತರರಿಗೆ ಮಾರುಕಟ್ಟೆಬೆಲೆಯ ಶೇ.25, ಗುತ್ತಿಗೆ ಆಧಾರದ ಮೇಲೆ ನೀಡುವುದಾದದರೆಗೆ ಎಸ್‌ಸಿ, ಎಸ್‌ಟಿಗೆ ಮಾರ್ಗಸೂಚಿ ದರದ ಶೇ.2.5, ಇತರರಿಗೆ ಮಾರ್ಗಸೂಚಿ ದರದ ಶೇ.2.5 ಹಾಗೂ ಧಾರ್ಮಿಕ ಟ್ರಸ್ಟ್‌ಗಳಿಗೆ ಎಸ್‌ಸಿ, ಎಸ್‌ಟಿಗೆ ಮಾರ್ಗಸೂಚಿ ದರದ ಶೇ.25, ಇತರರಿಗೆ ಮಾರ್ಗಸೂಚಿ ದರದ ಶೇ.50, ಗುತ್ತಿಗೆಗೆ ನೀಡಲು ಎಸ್‌ಸಿ, ಎಸ್‌ಟಿಗೆ ಹಾಗೂ ಇತರ ವರ್ಗಗಳಿಗೆ ಇಬ್ಬರಿಗೂ ಮಾರ್ಗಸೂಚಿ ದರದ ಶೇ.2.5ರಷ್ಟುದರ ನಿಗದಿ ಮಾಡಲಾಗಿದೆ.

ಕೃಷಿ ಬಳಕೆಗೆ ಹಾಗೂ ಕೃಷಿಯೇತರ ಬಳಕೆಗೆ ಎಸ್ಸಿ, ಎಸ್‌ಟಿ ವರ್ಗದವರಿಗೆ ಮಾರ್ಗಸೂಚಿ ದರದ ಶೇ.25, ಇತರರಿಗೆ ಮಾರ್ಗಸೂಚಿ ದರದ ಶೇ.50ರಷ್ಟು, ಗುತ್ತಿಗೆಗೆ ನೀಡುವುದಾದರೆ ಕೃಷಿ ಬಳಕೆಗೆ ವರ್ಷದ ಭೂಮಿ ಆದಾಯದ 20 ಪಟ್ಟು ಹಣವನ್ನು ನೀಡಬೇಕು ಎಂದು ಸೂಚಿಸಲಾಗಿದೆ.

ಎಷ್ಟುದರ ನಿಗದಿ ಎಂಬುದು ಪ್ರಶ್ನೆಯಲ್ಲ. ಖರಾಬು ಭೂಮಿಯನ್ನು ಈ ರೀತಿ ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿರುವುದು ಅತ್ಯಂತ ದುರದೃಷ್ಟಕರ. ಇದರಿಂದ ಮುಂಬರುವ ದಿನಗಳಲ್ಲಿ ಸಾಕಷ್ಟುಸಮಸ್ಯೆಗಳು ಸೃಷ್ಟಿಯಾಗಲಿವೆ.

- ವಿ. ರವಿಚಂದರ್‌, ನಗರಾಭಿವೃದ್ಧಿ ತಜ್ಞ