Asianet Suvarna News Asianet Suvarna News

ಎಸ್‌ಟಿ ಮೀಸಲು ಹೆಚ್ಚಳಕ್ಕೆ ಸರ್ವಪಕ್ಷ ಸಭೆ: ಸಿಎಂ

  • ಎಸ್‌ಟಿ ಮೀಸಲು ಹೆಚ್ಚಳಕ್ಕೆ ಸರ್ವಪಕ್ಷ ಸಭೆ
  •  ಮೀಸಲಾತಿ ಹೆಚ್ಚಳಕ್ಕೆ ಕಾಂಗ್ರೆಸ್ಸಲ್ಲ, ಬಿಜೆಪಿಯಲ್ಲೂ ಒತ್ತಾಯವಿದೆ: ಸಿಎಂ
  •  ವಿಧಾನಸಭೆಯಲ್ಲಿ ಕಂಪ್ಲಿ ಗಣೇಶ್‌, ಸದಸ್ಯರ ಪ್ರತಿಭಟನೆ
  • ಸ್ಪೀಕರ್‌ ಗರಂ
All party meeting for ST reservation says bommai rav
Author
First Published Sep 15, 2022, 5:00 AM IST

ಬೆಂಗಳೂರು (ಸೆ.15) : ‘ಪರಿಶಿಷ್ಟಪಂಗಡದ ಮೀಸಲಾತಿ ಹೆಚ್ಚಳ ಮಾಡಬೇಕು ಎಂಬ ಬಗ್ಗೆ ನಾವು ಪೂರಕವಾಗಿದ್ದೇವೆ. ಆದರೆ, ಇದು ಏಕಪಕ್ಷೀಯವಾಗಿ ತೆಗೆದುಕೊಳ್ಳುವ ನಿರ್ಧಾರವಲ್ಲ. ಸಂವಿಧಾನ ತಿದ್ದುಪಡಿ ಅಗತ್ಯವಿರುವುದರಿಂದ ಸದ್ಯದಲ್ಲೇ ಸರ್ವಪಕ್ಷಗಳ ಸಭೆ ಕರೆದು ಈ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಾಲ್ಮೀಕಿ ಜನಾಂಗದ ಮೀಸಲಾತಿ ಹೋರಾಟಕ್ಕೆ ಸುದೀಪ್ ಬೆಂಬಲ

ನ್ಯಾ. ನಾಗಮೋಹನದಾಸ್‌ ವರದಿ ಅನ್ವಯ ಪರಿಶಿಷ್ಟಪಂಗಡದ (ಎಸ್‌ಟಿ) ಮೀಸಲಾತಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್‌ನ ಕಂಪ್ಲಿ ಗಣೇಶ್‌ ಸೇರಿದಂತೆ ಕೆಲ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಲು ಯತ್ನಿಸಿದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಪರಿಶಿಷ್ಟಪಂಗಡಕ್ಕೆ ಮೀಸಲಾತಿ ಹೆಚ್ಚಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ವಾಲ್ಮೀಕಿ ಸಮುದಾಯದ ಸ್ವಾಮೀಜಿ ನೂರಕ್ಕೂ ಹೆಚ್ಚು ದಿನದಿಂದ ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ. ಮೀಸಲಾತಿ ಬಗ್ಗೆ ಸದನದಲ್ಲಿ ಕೇಳುವಂತೆ ಶಾಸಕರಿಗೆ ಅವರ ಸಮುದಾಯದವರಿಂದಲೂ ಒತ್ತಡ ಇದೆ. ಹೀಗಾಗಿ ತಡ ಮಾಡದೆ ನ್ಯಾ. ನಾಗಮೋಹನದಾಸ್‌ ವರದಿ ಪ್ರಕಾರ ಮೀಸಲಾತಿ ಹೆಚ್ಚಳ ಮಾಡುವ ಕುರಿತು ಕೂಡಲೇ ನಿರ್ಧಾರ ಮಾಡಬೇಕು ಎಂದು ಆಗ್ರಹಿಸಿದರು.

ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, ಇದು ಕೇವಲ ಕಾಂಗ್ರೆಸ್‌ ಸದಸ್ಯರ ಆಗ್ರಹವಲ್ಲ. ಬಿಜೆಪಿಯಲ್ಲೂ ಎಸ್‌ಟಿ ಮೀಸಲಾತಿ ಹೆಚ್ಚಳಕ್ಕಾಗಿ ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಎರಡು ಬಾರಿ ವಾಲ್ಮೀಕಿ ಶ್ರೀಗಳನ್ನೂ ಭೇಟಿ ಮಾಡಿ ಚರ್ಚಿಸಿದ್ದೇನೆ. ಸದ್ಯದಲ್ಲೇ ಸರ್ವಪಕ್ಷಗಳ ಸಭೆ ಕರೆದು ಅಂತಿಮ ನಿರ್ಧಾರ ಮಾಡೋಣ ಎಂದು ಭರವಸೆ ನೀಡಿದರು.ಅಲ್ಲದೆ, ಎಸ್‌ಟಿ ಮೀಸಲಾತಿ ಹೆಚ್ಚಳದ ಬಗ್ಗೆ ಸದನದಲ್ಲಿ ಚರ್ಚಿಸುವ ಸಲುವಾಗಿ ಅರ್ಧ ಗಂಟೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡುವಂತೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮುಖ್ಯಮಂತ್ರಿಯವರು ಮನವಿ ಮಾಡಿದರು.

 SC-ST Reservation: ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

ಸ್ಪೀಕರ್‌ ಗರಂ:

ಚರ್ಚೆ ವೇಳೆ ಕಾಂಗ್ರೆಸ್‌ನ ಕಂಪ್ಲಿ ಗಣೇಶ್‌ ಸೇರಿದಂತೆ ಕೆಲ ಸದಸ್ಯರು ಏಕಾಏಕಿ ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದಕ್ಕೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಚರ್ಚೆ ವಿಷಯ ನನಗೆ ಗೊತ್ತಿಲ್ಲ, ಕನಿಷ್ಠ ಅನುಮತಿಯನ್ನೂ ಕೇಳಿಲ್ಲ. ಸಭಾ ಸೌಜನ್ಯ ಎಂಬುದನ್ನು ತಿಳಿದು ನಡೆದುಕೊಳ್ಳಬೇಕು. ಈ ರೀತಿ ಅಶಿಸ್ತಿನಿಂದ ವರ್ತಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ಸಮುದಾಯದವರಿಂದ ಶಾಸಕರ ಮೇಲೂ ಒತ್ತಡವಿದೆ. ಜ್ವಲಂತ ಸಮಸ್ಯೆ ಇದು. ಹೀಗಾಗಿ ಇದಕ್ಕೆ ಆದ್ಯತೆ ನೀಡಬೇಕು. ನೀವೇ ತಾಳ್ಮೆ ಕಳೆದುಕೊಂಡರೆ ಹೇಗೆ? ಎಂದು ಸ್ಪೀಕರ್‌ ಅವರನ್ನು ಪ್ರಶ್ನಿಸಿದರು.

Follow Us:
Download App:
  • android
  • ios