ಸಂಸ್ಥೆಯ 35 ಸಾವಿರ ಬಸ್‌ಗಳು ಎಲೆಕ್ಟ್ರಿಕ್‌ ಆಗಿ ಪರಿವರ್ತನೆ, ಡೀಸೆಲ್‌ ಬಸ್‌ ಅನ್ನೇ ಎಲೆಕ್ಟ್ರಿಕ್‌ ಆಗಿಸುತ್ತೇವೆ: ಶ್ರೀರಾಮುಲು 

ವಿಧಾನಸಭೆ(ಸೆ.15):  ರಾಜ್ಯದಲ್ಲಿ 2030ರ ವೇಳೆಗೆ ಸಾರಿಗೆ ಸಂಸ್ಥೆಯ ಎಲ್ಲಾ ಬಸ್‌ಗಳನ್ನು ಎಲೆಕ್ಟ್ರಿಕ್‌ ಬಸ್‌ಗಳನ್ನಾಗಿ ಪರಿವರ್ತಿಸಿ ಕಾರ್ಯಾಚರಣೆ ನಡೆಸುವ ಗುರಿಯನ್ನು ಹೊಂದಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ಸದಸ್ಯ ತನ್ವೀರ್‌ಸೇಠ್‌ ಪ್ರಶ್ನೆಗೆ ಉತ್ತರಿಸಿದ ಅವರು, ಒಂದೆಡೆ ಡೀಸೆಲ್‌ ದರ ಹೆಚ್ಚಳ, ಇನ್ನೊಂದೆಡೆ ನಿರ್ವಹಣೆ ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಹೀಗಾಗಿ ರಾಜ್ಯದ ಸಾರಿಗೆ ನಿಗಮದಲ್ಲಿನ 35 ಸಾವಿರ ಬಸ್‌ಗಳನ್ನು 2030ರ ವೇಳೆಗೆ ಎಲೆಕ್ಟ್ರಿಕ್‌ ಬಸ್‌ಗಳಾಗಿ ಪರಿವರ್ತಿಸಲು ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.

ಬಿಎಂಟಿಸಿ ಸಂಪೂರ್ಣ ಎಲೆಕ್ಟ್ರಿಕ್ ಮಯ, 921 ಟಾಟಾ ಎಲೆಕ್ಟ್ರಿಕ್ ಬಸ್‌ಗೆ ರಾಜ್ಯ ಸರ್ಕಾರ ಆರ್ಡರ್!

ಇಂಧನ ದರ ಹೆಚ್ಚಳದಿಂದ ಸಂಸ್ಥೆಗಳನ್ನು ನಿರ್ವಹಣೆ ಮಾಡುವುದೇ ಸವಾಲಾಗಿದೆ. ಹೀಗಾಗಿ ಡೀಸೆಲ್‌ನಿಂದ ಎಲೆಕ್ಟ್ರಿಕ್‌ ಬಸ್‌ಗಳಾಗಿ ಪರಿವರ್ತಿಸಲಾಗುವುದು. ಇದರಿಂದ ನಿರ್ವಹಣೆ ಸುಲಭವಾಗಲಿದೆ. ಅಲ್ಲದೇ, ಪರಿಸರದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಇದಕ್ಕಾಗಿ ಇಲಾಖೆಯು ಅಗತ್ಯ ಸಿದ್ಧತೆಯನ್ನು ಕೈಗೊಂಡಿದೆ ಎಂದರು.

ಇನ್ನು, ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯಡಿ ಬಿಎಂಟಿಸಿ ಸಂಸ್ಥೆಯು 90 ಎಲೆಕ್ಟ್ರಿಕ್‌ ಬಸ್‌ಗಳನ್ನು 12 ವರ್ಷಗಳ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡು ಕಾರ್ಯಾಚರಣೆ ಮಾಡುತ್ತಿದೆ. ಕೇಂದ್ರ ಸರ್ಕಾರದ ಫೇಮ್‌-2 ಯೋಜನೆಯಡಿ 300 ಎಲೆಕ್ಟ್ರಿಕ್‌ ಬಸ್‌ಗಳನ್ನು ನೀಡಲಾಗಿದೆ. ಈ ಪೈಕಿ 75 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಅಲ್ಲದೇ, ಸಿಇಎಸ್‌ಎಲ್‌ ಮೂಲಕ 921 ಎಲೆಕ್ಟ್ರಿಕ್‌ ಬಸ್‌ಗಳನ್ನು ಕಾರ್ಯಾಚರಣೆ ಮಾಡಲು ಆದೇಶಿಸಲಾಗಿದೆ. ಬಸ್‌ಗಳ ಪ್ರತಿ ಕಿ.ಮೀ. ವೆಚ್ಚವು 54 ರು. ಆಗಿದೆ ಎಂದು ವಿವರಿಸಿದರು.