Asianet Suvarna News Asianet Suvarna News

ಮದ್ಯಪ್ರಿಯರ ಪಾನಕ್ಕೆ ಬ್ರೇಕ್‌: ಈ ನಾಲ್ಕು ದಿನ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ.!

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಹಾಗೂ ಮತ ಎಣಿಕೆ ದಿನಗಳು ಸೇರಿದಂತೆ ಮೇ ತಿಂಗಳಲ್ಲಿ ಒಟ್ಟು ನಾಲ್ಕು ದಿನ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.

Alcoholic drink break Alcohol sale will be banned in state for these 4 days sat
Author
First Published Apr 1, 2023, 9:50 PM IST

ಬೆಂಗಳೂರು (ಏ.01): ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023ರ ದಿನಾಂಕ ಘೋಷಣೆಯಾಗಿದ್ದು, ಈಗಾಗಲೇ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಾಗಿದೆ. ಆದರೆ, ವಿಧಾನಸಭಾ ಚುನಾವಣೆಯ ಮತದಾನದ ದಿನ ಸೇರಿದಂತೆ ಹಿಂದಿನ 2 ದಿನಗಳು ಹಾಗೂ ಮತ ಎಣಿಕೆ ದಿನ ಸೇರಿದಂತೆ ಒಟ್ಟು (ಮೇ 8,9, 10 ಮತ್ತು ಮೇ 13) ನಾಲ್ಕು ದಿನಗಳು ಮದ್ಯ ಮಾರಾಟ ನಿಷೇಧಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳ ನಾಲ್ಕು ದಿನ ಮದ್ಯಪ್ರಿಯರಿಗೆ ಬೇಜಾರು ಆಗುವುದಂತೂ ಗ್ಯಾರಂಟಿಯಾಗಿದೆ.

ಇನ್ನು ರಾಜ್ಯದಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದ್ದು, ನಿಗದಿತ ಮಿತಿಗಿಂತ ಹೆಚ್ಚಿನ ಮದ್ಯ ಸಾಗಣೆಯನ್ನು ನಿರ್ಬಂಧಿಸಲಾಗಿದೆ. ಇದರಿಂದ ಈಗಾಗಲೇ ಅಕ್ರಮ ಮದ್ಯ ಮಾರಾಟ ಮತ್ತು ಸಾಗಣೆಗೆ ಬ್ರೇಕ್‌ ಬಿದ್ದಿದೆ. ಇನ್ನು ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಯ ಪ್ರಮುಖ ಘಟ್ಟಗಳಾದ ಮತದಾನ ಹಾಗೂ ಮತ ಎಣಿಕೆಯ ಫಲಿತಾಂಶದ ದಿನಾಂಕ ನಿಗದಿಯಾಗಿದ್ದು, ಮದ್ಯ ಮಾರಾಟ ಸಂಪೂರ್ಣ ನಿರ್ಬಂಧಿಸಲಾಗುತ್ತಿದೆ. ಮತದಾನದ ಮುಕ್ತಾಯಕ್ಕೆ ನಿಗದಿಪಡಿಸಿದ ಗಂಟೆಯೊಂದಿಗೆ ಕೊನೆಗೊಳ್ಳುವ 48 ಗಂಟೆಗಳ ಅವಧಿಯಲ್ಲಿ ಮತದಾನದ ಪ್ರದೇಶದೊಳಗಿನ ಎಲ್ಲಾ ಸಂಸ್ಥೆಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಅಂದರೆ ಮೇ 10ರಂದು ಮತದಾನ ಇದ್ದು, ಇದಕ್ಕಿಂತ 2 ದಿನ ಮುಂಚಿತವಾಗಿ ಮೇ 8 ಮತ್ತು ಮೇ 9ರಂದು ಮದ್ಯ ಮಾರಾಟ ಮಾಡುವಂತಿಲ್ಲ. ಜೊತೆಗೆ, ಮೇ 13 ರಂದು ಮತ ಎಣಿಕೆ ನಡೆಯಲಿರುವ ದಿನವೂ ಮದ್ಯ ಮಾರಾಟ ಇರುವುದಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ಬೆಂಗಳೂರು: ಮತದಾರರಿಗೆ ಹಂಚಲು ತಂದಿದ್ದ ಹೆಲ್ಮೆಟ್‌, ಮದ್ಯ, 7.50 ಲಕ್ಷ ಜಪ್ತಿ

ಮರು ಮತದಾನ ದಿನಾಂಕಕ್ಕೂ ಅನ್ವಯ: ಇನ್ನು ಮದ್ಯ ಮಾರಾಟ ನಿಷೇಧದ ಹಿನ್ನೆಲೆಯಲ್ಲಿ ಯಾವುದೇ ವ್ಯಕ್ತಿಗಳಿಂದ ಮದ್ಯದ ಸಂಗ್ರಹಣೆ ಮಾಡುವುದನ್ನು ಕೂಡ ನಿಷೇಧಿಸಲಾಗಿದೆ. ಮದ್ಯ ಮರಾಟ ಮಾಡುವವರಿಗೂ ಈ ನಿಯಮ ಅನ್ವಯ ಆಗಲಿದೆ ಎಂದು ಇಸಿಐ ಕಾರ್ಯದರ್ಶಿ ಸಂಜೀವ್ ಕುಮಾರ್ ಪ್ರಸಾದ್ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರದಲ್ಲಿ ತಿಳಿಸಿದ್ದಾರೆ. ಇನ್ನು ಮರು ಮತದಾದನ ದಿನಾಂಕಗಳನ್ನು ಕೂಡ ಒಳಗೊಂಡಿರಲಿದ್ದು, ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಅನ್ವಯವಾಗಲಿದೆ ಎಂದು ನಿರ್ದೇಶನ ನೀಡಲಾಗಿದೆ. 

ವೇತನ ಸಹಿತ ರಜೆ ನೀಡಲು ಆದೇಶ: ರಾಜ್ಯಾದ್ಯಂತ ಮೇ 10ರ ಮತದಾನದ ದಿನದಂದು ಪಾವತಿಸಿದ ರಜೆ ಇರುತ್ತದೆ. ಅಂದು ಎಲ್ಲಾ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡುವಂತೆ ಚುನಾವಣಾ ಆಯೋಗವು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ದಿನಗೂಲಿ ನೌಕರರು, ಅಂಗಡಿಗಳು ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುವವರೂ ಸಹ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಸಂಬಂಧಿತ ಕ್ಷೇತ್ರದ ಹೊರಗಿನ ಪ್ರಾಸಂಗಿಕ ಕೆಲಸಗಾರರು ಸೇರಿದಂತೆ ಆ ಮತದಾರರು ಸಹ ಪಾವತಿಸಿದ ರಜೆಯ ಪ್ರಯೋಜನಕ್ಕೆ ಅರ್ಹರಾಗಿರುತ್ತಾರೆ ಎಂದು ಪತ್ರವು ಜನಪ್ರತಿನಿಧಿಗಳ ಕಾಯಿದೆಯ ಸೆಕ್ಷನ್ 135 ಬಿ ಅನ್ನು ಉಲ್ಲೇಖಿಸಲಾಗಿದೆ.

ಬೆಂಗಳೂರು: ಮದ್ಯದ ಅಮಲಿನಲ್ಲಿ ಮೈಕೈ ತಾಗಿಸಿದ್ದಕ್ಕೆ ನೇಪಾಳಿಯ ಹತ್ಯೆ

ರಾಜ್ಯಾದ್ಯಂತ ಒಂದೇ ಹಂತದ ಮತದಾನ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯು ಮೇ 10ರಂದು ನಡೆಯಲಿದೆ. ಮೇ 13 ರಂದು ಫಲಿತಾಂಶ ಹೊರಬೀಳಲಿದೆ. ಒಂದೇ ಹಂತದಲ್ಲಿ 224 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ. ಏ.20 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏಪ್ರಿಲ್ 21 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಏ.24 ಕೊನೆಯ ದಿನವಾಗಿದೆ. ರಾಜ್ಯದ 224 ಕ್ಷೇತ್ರಗಳಲ್ಲಿ 36 ಪರಿಶಿಷ್ಟ ಜಾತಿ ಹಾಗೂ 15 ಪರಿಶಿಷ್ಟ ಪಂಗಡಗಳಿಗೆ ಮೀಸಲು ಕ್ಷೇತ್ರಗಳಾಗಿವೆ. 5.21 ಕೋಟಿ ಜನ ಮತದಾರರಿದ್ದಾರೆ. 

Follow Us:
Download App:
  • android
  • ios