*   ಗ್ರಾ.ಪಂ.ನಲ್ಲಿ ಸಿಡಿಲು ಮುನ್ಸೂಚನಾ ವ್ಯವಸ್ಥೆ*  ಪ್ರತಿ ಅಲರ್ಟ್‌ ವ್ಯವಸ್ಥೆಗೆ 1.50 ಲಕ್ಷ ರು. ವೆಚ್ಚ*  ಕೇಂದ್ರ ಸರ್ಕಾರದಿಂದ ಅನುದಾನ 

ಬೆಂಗಳೂರು(ಆ.18): ಮೀನುಗಾರರಿಗೆ ಮತ್ತು ಸಮುದ್ರ ತೀರ ಪ್ರದೇಶದ ನಿವಾಸಿಗಳಿಗೆ ಚಂಡಮಾರುತದ ಮುನ್ಸೂಚನೆ ನೀಡುವ ಅಲರ್ಟ್‌ ಅಲಾರಾಂ ವ್ಯವಸ್ಥೆ ಅಳವಡಿಸಲು ತೀರ್ಮಾನಿಸಲಾಗಿದ್ದು, ಆರು ಕಿ.ಮಿ. ದೂರದಿಂದಲೇ ಮುನ್ಸೂಚನೆ ನೀಡುವ ಸೈರನ್‌ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಚಂಡಮಾರುತ ಪೀಡಿತ ಕರಾವಳಿ ಪ್ರದೇಶದ ಒಟ್ಟು 40 ಕಡೆಗಳಲ್ಲಿ ಮುನ್ಸೂಚನೆ ನೀಡುವ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದನ್ನು 60ಕ್ಕೆ ಹೆಚ್ಚಳ ಮಾಡಲು ಚಿಂತನೆ ನಡೆದಿದೆ. ಕೇಂದ್ರ ಸರ್ಕಾರದಿಂದ ಇದಕ್ಕೆ ಅನುದಾನ ಬರಲಿದೆ. ಒಂದೊಂದು ಕೇಂದ್ರಕ್ಕೆ 12 ಕೋಟಿ ರು. ವೆಚ್ಚವಾಗಲಿದೆ. ಈ ಮೂಲಕ ತೀರ ಪ್ರದೇಶದ ಜನರಿಗೆ, ಮೀನುಗಾರಿಕೆಗೆ ಚಂಡಮಾರುತಗಳ ಸುಳಿವನ್ನು ನೀಡಲಾಗುವುದು ಎಂದರು ಇದರಿಂದ ಕರಾವಳಿ ಭಾಗದ ಜನರಿಗೆ ಅನುಕೂಲವಾಗಲಿದೆ. ಅದರಲ್ಲಿಯೂ ಮೀನುಗಾರರಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ತಿಳಿಸಿದರು.

ಭೂಮಿಗಪ್ಪಳಿಸಲಿದೆ ಸೌರ ಚಂಡಮಾರುತ: GPS, ನೆಟ್‌ವರ್ಕ್‌ ಸಮಸ್ಯೆ

ಗ್ರಾ.ಪಂ.ನಲ್ಲಿ ಸಿಡಿಲು ಮುನ್ಸೂಚನಾ ವ್ಯವಸ್ಥೆ:

ರಾಜ್ಯದಲ್ಲಿ ಸಿಡಿಲು ಹೊಡೆದು ಹಲವಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಈ ಸಂಬಂಧ ಒಂದು ತಿಂಗಳಲ್ಲಿ ಸಿಡಿಲು ಹಾವಳಿ ಹೆಚ್ಚಿರುವ ಗ್ರಾಮಗಳಲ್ಲಿ ಮುನ್ಸೂಚನಾ ವ್ಯವಸ್ಥೆ ಅಳವಡಿಕೆ ಮಾಡಲಾಗುವುದು ಎಂದು ಇದೇ ವೇಳೆ ಅಶೋಕ್‌ ಮಾಹಿತಿ ನೀಡಿದರು.

ಈ ವ್ಯವಸ್ಥೆಯಿಂದ ಒಂದೂವರೆ ಕಿ.ಮೀ.ವರೆಗೆ ಕೇಳಿಸುವಷ್ಟುಮೈಕ್‌ ಸಿಸ್ಟಂ ಮೂಲಕ ಅಲರ್ಟ್‌ ಮಾಡಲಾಗುತ್ತದೆ. ಬೆಂಗಳೂರಿನಿಂದ ಕೇಂದ್ರಿಕೃತ ವ್ಯವಸ್ಥೆಯೊಂದಿಗೆ ಸಿಡಿಲು ಬಗ್ಗೆ ಮುನ್ಸೂಚನೆ ನೀಡಲಾಗುತ್ತದೆ. ಪ್ರತಿ ಅಲರ್ಟ್‌ ವ್ಯವಸ್ಥೆಗೆ 1.50 ಲಕ್ಷ ರು. ವೆಚ್ಚವಾಗಲಿದೆ. ಇದು ಗ್ರಾ.ಪಂ.ಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದರು.