ಬೆಂಗಳೂರು(ಮೇ.28): ಗಾಳಿಯ ವಿರುದ್ಧ ದಿಕ್ಕಿಗೆ ಮಿಡತೆಗಳು ಸಂಚರಿಸುವುದಿಲ್ಲ, ಈ ಗಾಳಿ ಕರ್ನಾಟಕದತ್ತ ಬರುವುದಿಲ್ಲ ಅಂತ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಶಾನ್ಯ ಭಾಗದಿಂದ ನೈಋತ್ತ ಭಾಗಕ್ಕೆ ಗಾಳಿ ಬೀಸುತ್ತಿದೆ. ಶೇ.99 ರಷ್ಟು ಮಿಡತೆ ಕರ್ನಾಟಕಕ್ಕೆ ಪ್ರವೇಶ ಆಗುವ ಸಾಧ್ಯತೆಗಳು ಕಡಿಮೆ ಇದೆ. ಹೀಗಾಗಿ ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅವರು ಹೇಳಿದ್ದಾರೆ. 

ಇಂದು(ಗುರುವಾರ) ವಿಕಾಸಸೌಧದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಭೆಯಲ್ಲಿ ಕರ್ನಾಟಕಕ್ಕೆ ಮಿಡತೆ ಕಾಟ ಇದೆ ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಈ ಮಿಡತೆ ದಕ್ಷಿಣ ಆಫ್ರಿಕಾ, ಬಲೂಚಿಸ್ಥಾನ ಹಾಗೂ ಪಾಕಿಸ್ತಾನದ ಮೂಲಕ ಭಾರತ ಪ್ರವೇಶಿಸಿವೆ. ಪಕ್ಕದ ಮಹಾರಾಷ್ಟ್ರಕ್ಕೂ ಮಿಡತೆ ಲಗ್ಗೆ ಇಟ್ಟಿದೆ. ಮಿಡತೆಯ ಗ್ಯಾಂಗ್‌ನ ಓಡಾಟ ಹತ್ತು ಕಿ.ಮಿ. ಉದ್ದ ಮತ್ತು 2 ಕಿ.ಮಿ. ಅಗಲದಲ್ಲಿ ಸಂಚರಿಸುತ್ತವೆ ಎಂದು ಹೇಳಿದ್ದಾರೆ. 

ಹೆಚ್ಚಿದ ಮಿಡತೆ ಹಾವಳಿ: ಸಂಕಷ್ಟದಲ್ಲಿ ರೈತ, ಎಚ್ಚೆತ್ತ ರಾಜ್ಯ ಸರ್ಕಾರ

ಈ ಮಿಡತೆ ಕೇವಲ ಒಂದರಿಂದ ಎರಡು ಗ್ರಾಂ ಮಾತ್ರ ಆಹಾರ ತಿನ್ನುತ್ತದೆ. ಸಂಜೆ 4 ರಿಂದ 7 ಗಂಟೆ ನಡುವೆ ಬೆಳೆಯನ್ನ ತಿನ್ನುತ್ತದೆ. ಕ್ಲೋರೋ ಫೈರಿ ಪಾಸ್ ಮತ್ತು  ಲ್ಯಾಮ್ಡಾಸ್‌ಲೋಥ್ರಿನಿ ಔಷಧ ಸಿಂಪಡನೆ ಮಾಡಬಹುದಾಗಿದೆ. ಈ‌ ಮಿಡತೆ ನಿಯಂತ್ರಣಕ್ಕೆ ನಾವು ಔಷಧ ಸಂಗ್ರಹಿಸಿ ಇಟ್ಟಿದ್ದೇವೆ. ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಫಂಡ್‌ನಿಂದ 200 ಕೋಟಿ ರೂ.ಹಣವನ್ನ ಅಗತ್ಯ ಬಿದ್ದಲ್ಲಿ ಬಳಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಗಾಳಿಯ ವಿರುದ್ದ ದಿಕ್ಕಿಗೆ ಈ ಮಿಡತೆ ಸಂಚರಿಸೋದಿಲ್ಲ. ಮಿಡತೆ ಕರ್ನಾಟಕಕ್ಕೆ ಪ್ರವೇಶ ಆಗುವ ಸಾಧ್ಯತೆ ಇಲ್ಲ. ಹೀಗಾಗಿ ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ಆದರೂ ಕೂಡ ಜಿಲ್ಲಾ ಮಟ್ಟದ ಕೃಷಿ ಸಮಿತಿಗೆ ಎಲ್ಲ ಸೂಚನೆಗಳನ್ನ ‌ನೀಡಿದ್ದೇವೆ. ಅಗ್ನಿ ಶಾಮಕ ಹಾಗೂ ದ್ರೋಣ್ ಮೂಲಕ ಕೀಟ ನಾಶಕ ಸಿಂಪಡಣೆಗೆ ತಯಾರಿ ನಡೆಸಿದ್ದೇವೆ. ಈ ಸಂಬಂಧ ಕೃಷಿ ನಿರ್ದೇಶಕರು ಹಾಗೂ ತೋಟಗಾರಿಕಾ ನಿರ್ದೇಶಕರ ನೇತೃತ್ವದಲ್ಲಿ ‌ಉನ್ನತ ಮಟ್ಟದ ತಂಡ ರಚಿಸಲಾಗಿದೆ. ಈ ತಂಡ ಉತ್ತರ ಕರ್ನಾಟಕದ ಕೊಪ್ಪಳ, ಯಾದಗಿರಿ, ಬೀದರ್ ಹಾಗೂ ರಾಯಚೂರು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ಹೇಳಿದ್ದಾರೆ.