ಬೆಂಗಳೂರು :  ಶಾಸ​ಕಾಂಗ ಪಕ್ಷದ ಸಭೆಗೆ ಗೈರು ಹಾಜ​ರಾದ ಬಗ್ಗೆ ಸ್ಪಷ್ಟನೆ ನೀಡಿ ಅನಂತರ ಮತ್ತೆ ಅಡ​ಗು​ತಾಣ ಸೇರಿ​ಕೊಂಡ ತನ್ನ ನಾಲ್ಕು ಮಂದಿ ಅತೃಪ್ತ ಶಾಸ​ಕ​ರಿಗೆ ಕಾಂಗ್ರೆಸ್‌ ಮತ್ತೆ ನೋಟಿಸ್‌ ನೀಡಿದೆ. ಈ ಬಾರಿ ಖುದ್ದು ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಅವರ ಮುಂದೆ ಹಾಜ​ರಾಗಿ ಸ್ಪಷ್ಟನೆ ನೀಡು​ವಂತೆ ತಾಕೀತು ಮಾಡಿದೆ.

ತನ್ಮೂ​ಲಕ ಕಾಂಗ್ರೆಸ್‌ ನಾಯ​ಕರ ಸಂಪ​ರ್ಕಕ್ಕೆ ಬಾರದ ಈ ಶಾಸ​ಕರು ಈಗ ಶಾಸ​ಕಾಂಗ ಪಕ್ಷದ ನಾಯ​ಕ ಸಿದ್ದ​ರಾ​ಮಯ್ಯ ಅವರ ಸಮ್ಮುಖ ಹಾಜ​ರಾ​ಗು​ವು​ದನ್ನು ಅನಿ​ವಾರ್ಯ ಮಾಡಿದ್ದು, ಒಂದು ವೇಳೆ ಹಾಜ​ರಾ​ಗದ ಪಕ್ಷ​ದಲ್ಲಿ ಶಿಸ್ತು ಕ್ರಮ ಕೈಗೊ​ಳ್ಳುವ ಅವ​ಕಾ​ಶ​ವನ್ನು ಜೀವಂತ​ವಾ​ಗಿ​ಟ್ಟು​ಕೊ​ಳ್ಳುವ ಪ್ರಯತ್ನ ಮಾಡಿ​ದೆ.

ಶಾಸ​ಕಾಂಗ ಪಕ್ಷದ ಸಭೆಗೆ ಗೈರು ಹಾಜ​ರಾದ ಬಗ್ಗೆ ಪಕ್ಷ ನೀಡಿದ್ದ ನೋಟಿ​ಸ್‌ಗೆ ಗೋಕಾಕ್‌ ಶಾಸಕ ರಮೇಶ್‌ ಜಾರ​ಕಿ​ಹೊಳಿ, ಅಥಣಿ ಶಾಸಕ ಮಹೇಶ್‌ ಕುಮ​ಟಳ್ಳಿ, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ, ಚಿಂಚೋಳಿ ಶಾಸಕ ಉಮೇಶ್‌ ಜಾಧವ್‌ ಅವರು ಉತ್ತರ ನೀಡಿದ್ದು, ವೈಯ​ಕ್ತಿಕ ಕಾರ​ಣ​ಗಳ ನೆಪ ಮುಂದೊಡ್ಡಿದ್ದರು. ಜತೆಗೆ, ತಾವು ಬಿಜೆಪಿ ಜತೆ ಸಂಪರ್ಕ ಹೊಂದಿ​ರು​ವು​ದಾಗಿ ಮಾಧ್ಯ​ಮಗಳಲ್ಲಿ ವರ​ದಿ​ಯಾ​ಗು​ತ್ತಿದೆ. ಆದರೆ, ಇದೆಲ್ಲ ಸತ್ಯಕ್ಕೆ ದೂರ​ವಾದ ಸಂಗ​ತಿ​ಗ​ಳಾ​ಗಿದ್ದು, ತಾವು ಕಾಂಗ್ರೆಸ್‌ ಪಕ್ಷ​ದಲ್ಲೇ ಇದ್ದು ಯಾವ ಕಾರ​ಣಕ್ಕೂ ಪಕ್ಷ ಬಿಡು​ವು​ದಿಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ದ್ದ​ರು.

ಆದರೆ, ಈ ಘಟನೆ ಬಗ್ಗೆ ಖುದ್ದಾಗಿ ಕಾಂಗ್ರೆಸ್‌ ನಾಯ​ಕ​ರಾ​ಗಲಿ ಅಥವಾ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಅವ​ರನ್ನು ಭೇಟಿ ಮಾಡಿ ವಿವ​ರಣೆ ನೀಡಿ​ರ​ಲಿಲ್ಲ. ಈ ಹಿನ್ನೆ​ಲೆ​ಯಲ್ಲಿ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ಕಾರ್ಯ​ದ​ರ್ಶಿ​ಯ​ವರು ಸೋಮ​ವಾರ ಈ ನಾಲ್ಕು ಮಂದಿ ಶಾಸ​ಕ​ರಿಗೆ ಮತ್ತೆ ನೋಟಿಸ್‌ ಜಾರಿ ಮಾಡಿದ್ದಾರೆ. ಶಾಸ​ಕಾಂಗ ಪಕ್ಷದ ನಾಯ​ಕ ಸಿದ್ದ​ರಾ​ಮಯ್ಯ ಅವರ ಸಮ್ಮುಖ ಖುದ್ದಾಗಿ ಹಾಜ​ರಾಗಿ ವಿವ​ರಣೆ ನೀಡು​ವಂತೆ ಸೂಚನೆ ನೀಡಿದ್ದಾರೆ.

ಮತ್ತೆ ಅಡಗುತಾಣಕ್ಕೆ ಅತೃಪ್ತರು?:

ರಮೇಶ್‌ ಜಾರ​ಕಿ​ಹೊಳಿ ನೇತೃ​ತ್ವದ ಈ ನಾಲ್ಕು ಮಂದಿ ಶಾಸ​ಕರು ಇನ್ನೂ ಬಿಜೆಪಿ ಸಂಪ​ರ್ಕ​ದ​ಲ್ಲಿಯೇ ಇದ್ದಾರೆ ಎಂಬ ಗುಮಾನಿ ಕಾಂಗ್ರೆಸ್‌ ನಾಯ​ಕ​ತ್ವಕ್ಕೆ ಇದೆ. ಇದಕ್ಕೆ ಪೂರ​ಕ​ವಾಗಿ ಈ ನಾಲ್ಕು ಮಂದಿ ಶಾಸ​ಕರು ಶೋಕಾಸ್‌ ನೋಟಿ​ಸ್‌ಗೆ ಸ್ಪಷ್ಟನೆ ನೀಡಿದ ನಂತರ ಕಾಂಗ್ರೆಸ್‌ ವಲ​ಯ​ದಲ್ಲಿ ಮತ್ತೆ ಕಾಣಿ​ಸಿ​ಕೊಂಡಿಲ್ಲ. ಈ ಶಾಸ​ಕರು ಮತ್ತೆ ತಮ್ಮ ಅಡ​ಗು​ತಾಣ ಸೇರಿ​ಕೊಂಡಿ​ದ್ದಾರೆ ಎಂಬ ಆಶಂಕೆ​ಯ​ಲ್ಲಿ​ರುವ ಕಾಂಗ್ರೆಸ್‌ ನಾಯ​ಕತ್ವವು, ಅಲ್ಲಿಂದ ಹೊರಗೆ ಬಂದು ತಮ್ಮ ಸಂಪ​ರ್ಕಕ್ಕೆ ಬರಲಿ ಎಂಬ ಕಾರ​ಣಕ್ಕೆ ನೋಟಿಸ್‌ ನೀಡಿದೆ ಎನ್ನ​ಲಾ​ಗಿ​ದೆ.

ಒಂದು ಬಾರಿ ನಾಯ​ಕರ ಸಂಪ​ರ್ಕಕ್ಕೆ ಬಂದರೆ ಅವರ ಮನ​ವೊ​ಲಿ​ಸುವ ಪ್ರಯತ್ನ ಮಾಡ​ಬ​ಹುದು. ಒಂದು ವೇಳೆ ಮನ​ವೊ​ಲಿ​ಕೆಗೆ ಜಗ್ಗದ ಪಕ್ಷ​ದಲ್ಲಿ ಈ ನಾಲ್ವರ ಪೈಕಿ ಒಂದಿ​ಬ್ಬ​ರಿ​ಗಾ​ದರೂ ಪಕ್ಷಾಂತರ ವಿರೋಧಿ ಕಾಯ್ದೆ ಅಡಿ ಶಿಸ್ತು ಕ್ರಮ ಕೈಗೊ​ಳ್ಳುವ ಮನ​ಸ್ಥಿ​ತಿ​ಯಲ್ಲೂ ಕಾಂಗ್ರೆಸ್‌ ನಾಯ​ಕರು ಇದ್ದಾರೆ ಎಂದು ಮೂಲ​ಗಳು ತಿಳಿ​ಸಿವೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದ ನಾಲ್ಕು ಶಾಸಕರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೋಟಿಸ್‌ಗೆ ಪತ್ರದ ಮೂಲಕ ವಿವರಣೆ ನೀಡಿದ್ದಾರೆ. ಅವರಿಗೆ ಸಿದ್ದರಾಮಯ್ಯ ಎದುರು ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನೋಟಿಸ್‌ ನೀಡಿ​ದ್ದೇ​ವೆ.

- ದಿನೇಶ್‌ ಗುಂಡೂರಾವ್‌, ಕೆಪಿ​ಸಿಸಿ ಅಧ್ಯ​ಕ್ಷ