ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರ ಅಣೆಕಟ್ಟೆ ಗೇಟ್‌ವೊಂದು ಏಕಾಏಕಿ ತೆರೆದುಕೊಂಡು ಜಿಲ್ಲೆಯ ಜನರ ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ 1000 ಕ್ಯುಸೆಕ್‌ಗೂ ಹೆಚ್ಚಿನ ನೀರು ನದಿಗೆ ಹರಿದು ಹೋಗಿದೆ.
ಮಂಡ್ಯ/ಶ್ರೀರಂಗಪಟ್ಟಣ (ಮಾ.26): ವಿಜಯನಗರ ಜಿಲ್ಲೆ ಹೊಸಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದು ಬಿದ್ದ ಪರಿಣಾಮ ಸುಮಾರು 60 ಟಿಎಂಸಿ ನೀರು ಪೋಲು, ಭಾರೀ ಆತಂಕಕ್ಕೆ ಕಾರಣವಾಗಿದ್ದ ಪ್ರಕರಣ ಹಸಿರಾಗಿರುವಾಗಲೇ ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರ ಅಣೆಕಟ್ಟೆ ಗೇಟ್‌ವೊಂದು ಏಕಾಏಕಿ ತೆರೆದುಕೊಂಡು ಜಿಲ್ಲೆಯ ಜನರ ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ 1000 ಕ್ಯುಸೆಕ್‌ಗೂ ಹೆಚ್ಚಿನ ನೀರು ನದಿಗೆ ಹರಿದು ಹೋಗಿದೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್ ಅಣೆಕಟ್ಟೆಯ 5ನೇ ನಂಬರ್ ಗೇಟು ಭಾನುವಾರ ರಾತ್ರಿ ಏಕಾಏಕಿ ತೆರೆದುಕೊಂಡಿದೆ. ಇದರಿಂದ ನೀರು ಒಂದು ದಿನಪೂರ್ತಿ ನಿರಂತರವಾಗಿ ನದಿಗೆ ಹರಿದುಹೋಗಿದೆ. ಇದರ ಬೆನ್ನಲ್ಲೇ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.
ತಾಂತ್ರಿಕ ದೋಷ ಕಾರಣ: ತಾಂತ್ರಿಕ ದೋಷದಿಂದ ಅಣೆಕಟ್ಟೆಯ ಗೇಟ್ ತೆರೆದುಕೊಂಡಿದೆ. ಅದು ಹೇಗೆ ತೆರೆದುಕೊಂಡಿತು. ಅದಕ್ಕೆ ಯಾರು ಕಾರಣ ಎಂಬುದರ ಬಗ್ಗೆ ವರದಿ ಕೇಳಿದ್ದೇನೆ ಎಂದು ಕೃಷ್ಣರಾಜಸಾಗರ ಜಲಾಶಯ ಅಧೀಕ್ಷಕ ಅಭಿಯಂತರ ರಘುರಾಮ್ ಪ್ರತಿಕ್ರಿಯಿಸಿದ್ದಾರೆ. ಗೇಟ್ ಸುಭದ್ರವಾಗಿದ್ದು, ಆತಂಕಪಡುವ ಅವಶ್ಯಕತೆಯಿಲ್ಲ. ತಾಂತ್ರಿಕ ಸಮಸ್ಯೆಯಿಂದ ಗೇಟ್ ತೆರೆದುಕೊಂಡಿರುವುದಾಗಿ ಪ್ರಾಥಮಿಕವಾಗಿ ತಿಳಿದುಬಂದಿದೆ. ನಿತ್ಯ ನದಿಗೆ ೧೭೫೦ ಕ್ಯುಸೆಕ್ ನೀರು ಬಿಡಲಾಗುತ್ತಿತ್ತು. ಅದು ೨೫೦೦ ಕ್ಯುಸೆಕ್‌ವರೆಗೆ ಹರಿದಿದೆ. ಓಪನ್ ಆಗಿದ್ದ ಗೇಟ್ ಮುಚ್ಚಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೈಕಮಾಂಡ್ ಒತ್ತಡಕ್ಕೆ ಮಣಿದರಾ ರಾಜಣ್ಣ?: ಕುತೂಹಲ ಹುಟ್ಟಿಸಿದ ಸಚಿವರ ನಡೆ
ಕದ್ದುಮುಚ್ಚಿ ನೀರು: ಕೆಆರ್‌ಎಸ್ ಅಣೆಕಟ್ಟೆಯಿಂದ ತಾಂತ್ರಿಕ ದೋಷದ ನೆಪ ಹೇಳಿ ರಾತ್ರೋರಾತ್ರಿ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸಿರುವುದಾಗಿ ರೈತರು, ಸಾರ್ವಜನಿಕರು ಆರೋಪಿದ್ದಾರೆ. ಜನಸಂಖ್ಯೆ ಆಧಾರದ ಮೇಲೆ ಸಂಸತ್ ಕ್ಷೇತ್ರ ಮರು ವಿಂಗಡಣೆ ವಿರೋಧಿಸಿ ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ದಕ್ಷಿಣ ಭಾರತ ರಾಜ್ಯಗಳ ಪ್ರತಿನಿಧಿಗಳ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿ ಬಂದ ನಂತರ ಈ ಘಟನೆ ನಡೆದಿದರುವುದು ಹಲವು ಊಹಾಪೋಹಕ್ಕೂ ಕಾರಣವಾಗಿದೆ. ಅಣೆಕಟ್ಟೆಯಿಂದ ನಿರಂತರವಾಗಿ ಮೂರು ದಿನಗಳಿಂದ ತಮಿಳುನಾಡಿಗೆ ಕಾವೇರಿ ನೀರು ಹರಿದಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರ ಕಣ್ಣಾ ಮುಚ್ಚಾಲೆ ಆಟದಿಂದ ತಮಿಳುನಾಡಿಗೆ ನೀರು ಹರಿಸಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.
