ಬೆಂಗಳೂರು(ಮೇ.27): ಬಳ್ಳಾರಿಯ ಜಿಂದಾಲ್‌ ಕಂಪನಿಗೆ 3,667 ಎಕರೆ ಭೂಮಿ ಮಾರಾಟ ವಿವಾದ ವಿಚಾರವಾಗಿ ಸಂಪುಟ ಸಭೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಈ ಭೂಮಿಯನ್ನು ಹಿಂಪಡೆಯುವುದಾಗಿ ಸಿಎಂ ಬಿ. ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.

ಏನಿದು ವಿವಾದ?

ಜಿಂದಾಲ್‌ ಸಂಸ್ಥೆಗೆ ಸುಮಾರು 3,667 ಎಕರೆ ಭೂಮಿಯನ್ನು ಸರ್ಕಾರ ಇತ್ತೀಚೆಗೆ ಹಸ್ತಾಂತರ ಮಾಡಿದೆ. ಸರ್ಕಾರದ ಜಮೀನನ್ನು ಖಾಸಗಿ ಸಂಸ್ಥೆಗೆ ನೀಡುವ ವಿಚಾರಕ್ಕೆ ಸಂಬಂಧ ಸುದೀರ್ಘ ಚರ್ಚೆ ನಡೆಯಬೇಕು. ಆದರೆ, ಆದರೆ ತರಾತುರಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು, ಭೂಮಿ ಹಸ್ತಾಂತರಿಸಿರುವುದು ಕಾನೂನು ಬಾಹಿರ. ಅಲ್ಲದೆ, ಜಿಂದಾಲ್‌ ಸಂಸ್ಥೆ ಕಾನೂನು ಬಾಹಿರ ಚಟುವಟಿಕೆ ನಡೆಸಿದೆ ಎಂದು ಲೋಕಾಯುಕ್ತ ನೀಡಿರುವ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.

ಜೊತೆಗೆ, ಈ ಸಂಸ್ಥೆಯಿಂದ ಸರ್ಕಾರಕ್ಕೆ 1,078 ಕೋಟಿ ರು.ಗಳ ರಾಜಧನ ಬರಬೇಕಾಗಿದೆ ಎಂದು ತಿಳಿಸಿದೆ. ಈ ಸಂಬಂಧ ಹೈಕೋರ್ಟ್‌, ಸುಪ್ರೀಂಕೋರ್ಟ್‌ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಕರಣದಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ವಿಚಾರಣೆ ಹಂತದಲ್ಲಿವೆ. ಹೀಗಾಗಿ ಜಮೀನು ಹಸ್ತಾಂತರಿಸಿರುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.